ಲೋಕನಾಥಪುರದ ಸರ್ಕಾರಿ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿನಿ ಸಿಂಧೂರ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ತುಳುವಿನಕೊಪ್ಪ ಗ್ರಾಮ ಪಂಚಾಯಿತಿಯ ಮಲಗಾರು ಗ್ರಾಮದ ರಸ್ತೆಯ ಅವ್ಯವಸ್ಥೆ ಬಗ್ಗೆ ವಿವರಿಸಿದ್ದಾಳೆ.
ಚಿಕ್ಕಮಗಳೂರು (ಜುಲೈ.14): ಲೋಕನಾಥಪುರದ ಸರ್ಕಾರಿ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿನಿ ಸಿಂಧೂರ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ತುಳುವಿನಕೊಪ್ಪ ಗ್ರಾಮ ಪಂಚಾಯಿತಿಯ ಮಲಗಾರು ಗ್ರಾಮದ ರಸ್ತೆಯ ಅವ್ಯವಸ್ಥೆ ಬಗ್ಗೆ ವಿವರಿಸಿದ್ದಾಳೆ. ಐಎಎಸ್ ಆಗುವ ಕನಸು ಕಂಡಿದ್ದು, ನನಗೆ ಕಳಪೆ ರಸ್ತೆಯಿಂದಾಗಿ ವಾರದಲ್ಲಿ ಮೂರು ದಿನವೂ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತನ್ನ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾಳೆ.
ಬಾಲಕಿಯ ಪತ್ರ ಜನಪ್ರತಿನಿಧಿಗಳ ಇಚ್ಛಾಶಕ್ತಿಯನ್ನು ಪ್ರಶ್ನಿಸುವಂತಿದ್ದು ನಿರ್ಲಕ್ಷ್ಯ ಧೋರಣೆಯನ್ನು ಜಗಜ್ಜಾಹಿರುಗೊಳಿಸಿದಂತಿದೆ. ಸುಮಾರು ೧೫೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಮಲಗಾರು ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದೆಯಾದರೂ ಇಲ್ಲಿಗೆ ಬರುವ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಶಿಕ್ಷಣಕ್ಕಾಗಿ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಲೋಕನಾಥಪುರಕ್ಕೆ ಬರಬೇಕಿದೆ. ಕೆಲಸ ಕಾರ್ಯಗಳಿಗಾಗಿ ಹೊಗಬೇಕಾದ ಜನಸಾಮಾನ್ಯರು, ಮಹಿಳೆಯರು, ಅನಾರೋಗ್ಯ ಪೀಡಿತರು ಸೌಲಭ್ಯ ವಂಚಿತರಾಗಿದ್ದಾರೆ. ರಸ್ತೆ ಸರಿಪಡಿಸಿ ಸೌಲಭ್ಯ ನೀಡಬೇಕಾದ ಜಿಪಂ ಇಂಜಿನಿಯರ್ ವಿಭಾಗದ ಅಧಿಕಾರಿಗಳು ಗಾಢನಿದ್ರೆಗೆ ಜಾರಿದ್ದಾರೆ. ಮತ ಯಾಚನೆಗೆ ಬರುವ ಜನಪ್ರತಿನಿಧಿಗಳ ಭರವಸೆ ಕಾರ್ಯರೂಪಕ್ಕೆ ಬಾರದೆ ಬೇಸತ್ತ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಗ್ರಾಮದ ಸಮಸ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಾಳೆ.
ಮಲೆನಾಡು ಭಾಗದ ಅನೇಕ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳಿಲ್ಲದೆ ಜನಸಾಮನ್ಯರ ಬದುಕು ದುಸ್ತರವಾಗಿದೆ ಎಂದು ಕಳಪೆ ರಸ್ತೆಯ ಬಗ್ಗೆ ಕನ್ನಡ ಪ್ರಭ ಪತ್ರಿಕೆ ಹಲವು ಬಾರಿ ಸುದ್ದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
