ಮುಧೋಳ: ಕೇವಲ 1 ಗಂಟೆಯಲ್ಲಿ ಕಟಾವು ಮಾಡಿ 50.20 ಟನ್ ಕಬ್ಬು ಲೋಡ್ ಮಾಡಿ ಯುವಕನ ಸಾಧನೆ
ಮುಧೋಳ ತಾಲೂಕಿನ ಕೃಷಿ ಕೂಲಿ ಕಾರ್ಮಿಕ ಹಣಮಂತ ಸೋರಗಾಂವಿ, ಕೇವಲ ಒಂದು ಗಂಟೆಯಲ್ಲಿ 50.20 ಟನ್ ಕಬ್ಬನ್ನು ಒಬ್ಬನೇ ಕಟಾವು ಮಾಡಿ ಟ್ರ್ಯಾಕ್ಟರ್‌ಗೆ ತುಂಬುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅವರ ಈ ಅಸಾಮಾನ್ಯ ಶ್ರಮ ಮತ್ತು ಸಾಹಸಕ್ಕೆ ನಿರಾಣಿ ಶುಗರ್ಸ್ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.

ಕೃಷಿ ಕೂಲಿ ಕಾರ್ಮಿಕನ ಸಾಧನೆ
ಬಾಗಲಕೋಟೆ: ದುಡಿಮೆ ನಂಬಿ ಬದುಕು, ಅದರಲ್ಲಿ ದೇವರ ಹುಡುಕು ಇದು ರಾಜಕುಮಾರ್ ಹಾಡಿನ ಜನಪ್ರೀಯ ಸಾಲುಗಳು. ಕಷ್ಟಪಟ್ಟು ದುಡಿಯುವ ಕಾರ್ಮಿಕ ಉಪಜೀವನ ಸಾಗಿಸುವ ಜತೆಗೆ ದುಡಿಮೆಯನ್ನು ದೈವ ಸಾಕ್ಷಿಯಾಗಿ ಮಾಡಲಿ ಎಂಬುದು ಇದರರ್ಥ. ಅದರೊಡನೆ ಪ್ರಾಮಾಣಿಕ ದುಡಿಮೆಯೊಡನೆ ಯಾವುದೇ ವೃತ್ತಿಯಲ್ಲಿಯೂ ವಿಶಿಷ್ಟ್ಯ ಸಾಧನೆ ಮಾಡಬಹುದು ಎಂಬುದನ್ನು ಇಲ್ಲೊಬ್ಬ ಕೃಷಿ ಕೂಲಿ ಕಾರ್ಮಿಕ ನಿರೂಪಿಸಿದ್ದಾನೆ.
ಮಳಲಿ ಗ್ರಾಮದ ಹಣಮಂತ ಸೋರಗಾಂವಿ
ಮುಧೋಳ ತಾಲೂಕಿನ ಮಳಲಿ ಗ್ರಾಮದ ಹಣಮಂತ ಸೋರಗಾಂವಿ ಎಂಬ ಕೃಷಿ ಕೂಲಿ ಕೆಲಸದಲ್ಲಿ ನಿರತನಾದ ಯುವಕ ಮುಧೋಳ ನಿರಾಣಿ ಶುಗರ್ಸ್ ಗೆ ಕಬ್ಬು ಕಟಾವು ಹಾಗೂ ಸರಬರಾಜು ಮಾಡುವ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದಾನೆ.
50.20 ಟನ್ ತೂಕದ ಕಬ್ಬು
ವೃತ್ತಿಯನ್ನು ಆಸಕ್ತಿಯಿಂದ ಮಾಡುವ ಈ ಯುವಕ ಕಳೆದ ಶನಿವಾರ ಮಳಲಿ ಗ್ರಾಮದ ಮಂಜುನಾಥ ಸೋರಗಾಂವಿ ಅವರ ತೋಟದಲ್ಲಿ ವಿಠ್ಠಲ ಹ್ಯಾಗಡೆ ಅವರ ಟ್ರ್ಯಾಕ್ಟರ್ ಗೆ ಕೇವಲ ಒಂದು ಗಂಟೆಯಲ್ಲಿ ಒಬ್ಬನೇ ಯಾರ ಸಹಾಯವೂ ಇಲ್ಲದೆ 50.20 ಟನ್ ತೂಕದ ಕಬ್ಬು ತಾನೇ ಕಟಾವು ಮಾಡಿ ಟ್ರ್ಯಾಕ್ಟರ್ ಗೆ ತುಂಬುವ ಮೂಲಕ ವಿಶಿಷ್ಟ ಸಾಧನೆ ಮಾಡಿ ಸಾಹಸ ಮೆರೆದಿದ್ದಾನೆ.
ಇದನ್ನೂ ಓದಿ: ಗಜೇಂದ್ರಗಢದಲ್ಲಿ ಕ್ವಿಂಟಾಲ್ ಶೇಂಗಾ 11 ಸಾವಿರಕ್ಕೂ ಅಧಿಕ ದರಕ್ಕೆ ಮಾರಾಟ: ರೈತರು ಖುಷ್
ಸಾಧನೆಗೆ ಅಭಿನಂದನೆ
ಈ ಸಾಧನೆಗೆ ನಿರಾಣಿ ಶುಗರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ಕಬ್ಬು ವಿಭಾಗದ ನಿರ್ದೇಶಕ ಎನ್.ವಿ. ಪಡಿಯಾರ್, ಗೋಪಾಲ ಗಂಗರಡ್ಡಿ, ಡಿ.ಬಿ.ನಾಯಿಕ ಸೇರಿ ಹಲವರು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಪ್ರತಿ ಎಕರೆಗೆ 160 ರಿಂದ 170 ಟನ್‌ವರೆಗೆ ಕಬ್ಬು ಬೆಳೆಯುವ ವಿಧಾನ ಹೇಳಿದ ಕೃಷಿ ಸಾಧಕ

