ಮಾಗಡಿ ತಾಲೂಕಿನಲ್ಲಿ 40 ಎಕರೆಗೂ ಹೆಚ್ಚು ಜಮೀನಿನಲ್ಲಿ ರಾಗಿ ಬೆಳೆದು ಮಾದರಿ ಕೃಷಿಕರಾಗಿದ್ದಾರೆ. ರಾಸಾಯನಿಕ ಗೊಬ್ಬರ ಮತ್ತು ಯಂತ್ರಗಳ ಬದಲು, ಸಾಂಪ್ರದಾಯಿಕವಾಗಿ ಎತ್ತುಗಳು ಹಾಗೂ ಹಸುವಿನ ಗೊಬ್ಬರ ಬಳಸಿ 400 ಮೂಟೆಗೂ ಅಧಿಕ ಫಸಲಿನ ನಿರೀಕ್ಷೆಯಲ್ಲಿದ್ದಾರೆ.
ಮಾಗಡಿ: ಶಾಸಕ ಬಾಲಕೃಷ್ಣ ಸಹೋದರ ಹರ್ಷಿತ್ ಗೌಡ (ರಾಜು) 40 ಎಕರೆಗೂ ಹೆಚ್ಚು ಜಮೀನಿನಲ್ಲಿ ರಾಗಿ ಹಾಗೂ ಭತ್ತ ಬೆಳೆದು ತಾಲೂಕಿನ ಅತಿ ಹೆಚ್ಚು ರಾಗಿ ಬೆಳೆ ಬೆಳೆದ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪೋಷಕರ ಆಸೆಯಂತೆಯೇ ಹರ್ಷಿತ್ ಗೌಡ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ರಾಗಿ ಚೆಲ್ಲಲು, ಕುಂಟೆ ಹೊಡೆಯಲು ಎತ್ತುಗಳ ಬಳಕೆ
ಮಾಗಡಿ ತಾಲೂಕಿನ ಹುಲಿಕಟ್ಟೆಯಲ್ಲಿ ಶಾಸಕ ಬಾಲಕೃಷ್ಣರ ಚಿಕ್ಕಪ್ಪ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದಿ.ನಾರಾಯಣಸ್ವಾಮಿ ಪುತ್ರ ಹರ್ಷಿತ್‌ಗೌಡ ತಂದೆಯ ಆಸೆಯಂತೆ ಕೃಷಿಯಲ್ಲಿ ತೊಡಗಿಕೊಂಡು ಪ್ರಸಕ್ತ ವರ್ಷದಲ್ಲಿ 40 ಎಕರೆಗೂ ಹೆಚ್ಚು ಜಮೀನಿನಲ್ಲಿ ಎಂಆರ್‌ಆರ್ ತಳಿಯ ರಾಗಿ ಬೆಳೆದಿದ್ದಾರೆ. ಹೊಲ ಉಳುಮೆಗೆ ಮಾತ್ರ ಟ್ರ್ಯಾಕ್ಟರ್ ಬಳಸಿದ್ದು ಬಿಟ್ಟರೆ ರಾಗಿ ಚೆಲ್ಲಲು, ಕುಂಟೆ ಹೊಡೆಯಲು ಎತ್ತುಗಳನ್ನೇ ಬಳಸಿರುವುದು ವಿಶೇಷ.
ಕಣದಲ್ಲಿ 30 ಮಾರು ಉದ್ದದ ಎರಡು ಮೆದೆ
ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಹಸುವಿನ ಗೊಬ್ಬರ ಹಾಕಿ ಸಮೃದ್ಧ ಬೆಳೆ ಬೆಳೆದಿದ್ದು ಈಗ ಕಣದಲ್ಲಿ 30 ಮಾರು ಉದ್ದದ ಎರಡು ಮೆದೆಗಳು ಆಕರ್ಷಣೀಯವಾಗಿವೆ. ರಾಗಿ ಕುಯ್ಯಲು ಯಾವುದೇ ಯಂತ್ರಗಳನ್ನು ಬಳಸದೆ ಅಳುಗಳನ್ನೇ ಬಳಸಿ ರಾಗಿ ಕಟಾವು ಮಾಡಿಸಿದ್ದಾರೆ. ದೊಡ್ಡ ಮೆದೆ ಹಾಕಿ ಇನ್ನೊಂದು ವಾರದಲ್ಲಿ ಹಣ ಮಾಡಲು ಆರಂಭಿಸಿ ಒಂದು ತಿಂಗಳ ಸತತ ಕಾಲ ಕಣ ಮಾಡಿ 400 ಮೂಟೆ ರಾಗಿ ತೆಗೆಯುವ ನಿರೀಕ್ಷೆ ಇದೆ. ಮಾದರಿ ಕೃಷಿಕರಾಗಿ ಪೂರ್ವಿಕರ ಕುಲಕಸುಬು ವ್ಯವಸಾಯವನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿ ಜಲಸಾಹಸ ಕ್ರೀಡೆ; ವಿವಿಧ ವಾಟರ್ ಬೋಟ್ ಲಭ್ಯ
ರೈತ ಹರ್ಷಿತ್ ಗೌಡ ಹೇಳಿದ್ದೇನು?
40 ಎಕರೆ ಜಮೀನಿನಲ್ಲಿ ಎಂಆರ್‌ಆರ್ ತಳಿಯ ರಾಗಿ ಬೆಳೆದಿದ್ದು ಉತ್ತಮ ಬೆಳೆ ಬಂದಿದೆ. 30 ಮಾರು ಉದ್ದದ ರಾಗಿಮೆದೆ ಹಾಕಿದ್ದು, 400 ಮೂಟೆಗೂ ಹೆಚ್ಚು ರಾಗಿ ಫಸಲು ನಿರೀಕ್ಷೆ ಇದೆ. ಆಳುಗಳ ಸಮಸ್ಯೆ ನಡುವೆಯೂ ಕೈಯಲ್ಲೇ ಕಟಾವು ಮಾಡಿಸಿದ್ದೇವೆ. ಸಹೋದರರಾದ ಶಾಸಕ ಬಾಲಕೃಷ್ಣ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಶೋಕ್ ಮಾರ್ಗದರ್ಶನದಲ್ಲಿ ರಾಗಿ ಹಾಗೂ ಸೋನಾಮಸೂರಿ ಭತ್ತ ಬೆಳೆದಿರುವೆ ಎಂದು ರೈತ ಹರ್ಷಿತ್ ಗೌಡ ಹೇಳುತ್ತಾರೆ.
ಇದನ್ನೂ ಓದಿ: 30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ: ಕುಣಿದಾಡಿದ ರೈತರು


