Hirekerur| ರೈತರ ಜೊತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಹುಟ್ಟುಹಬ್ಬ
ಹಿರೇಕೆರೂರು(ನ.15): ಬೇಸಾಯದಲ್ಲಿ ವೈಜ್ಞಾನಿಕತೆ, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವನ್ನಾಗಿಸಿಕೊಳ್ಳಬೇಕು. ರೈತರು ಒಂದೇ ಬೆಳೆಗೆ ಸೀಮಿತವಾಗದೇ ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್(BC Patil) ಸಲಹೆ ನೀಡಿದ್ದಾರೆ.
ತಾಲೂಕಿನ ಎತ್ತಿನಹಳ್ಳಿ ಎಂ.ಕೆ.ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಜನ್ಮದಿನದ(Birthday) ಅಂಗವಾಗಿ ಅವರ ಅಭಿಮಾನಿಗಳು ಆಯೋಜಿಸಿದ್ದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಗ್ರ ಕೃಷಿ ಪದ್ಧತಿ ಅನುಸರಿಸಿ ತರಕಾರಿ, ಹೂವು ಹಣ್ಣು ಬೆಳೆಯಲು ಮುಂದಾಗುವ ಮೂಲಕ ಆರ್ಥಿಕವಾಗಿ ಮತ್ತಷ್ಟು ಸದೃಢರಾಗಬೇಕು. ಸಮಗ್ರ ಕೃಷಿಯೊಂದಿಗೆ ಉಪಕಸುಬುಗಳನ್ನು ಕೈಗೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದ ಬಿ.ಸಿ.ಪಾಟೀಲ್
ಇದಕ್ಕೂ ಮುನ್ನ ಗ್ರಾಮದ ಮುಖ್ಯ ಬೀದಿಯಲ್ಲಿ ಗೋವಿನಜೋಳದ ತೆನೆಗಳಿಂದ ಅಲಂಕರಿಸಿದ ಎತ್ತಿನ ಬಂಡಿಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಚಿನ್ನಮುಳಗುಂದ ಗ್ರಾಮಕ್ಕೆ ಕೃಷಿ(Agriculture) ಸಚಿವ ಬಿ.ಸಿ. ಪಾಟೀಲ ಬರುತ್ತಿದ್ದಂತೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಕುಂಬ ಹೊತ್ತ ಮಹಿಳೆಯರು, ವೀರಗಾಸೆ, ಡೊಳ್ಳು ಕುಣಿತ, ಎತ್ತಿನ ಬಂಡಿ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.
ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಜೇನು ಸಾಕಾಣಿಕೆ ಕುರಿತು ಪ್ರಾತ್ಯಕ್ಷಿಕೆ, ಪುರುಷರಿಗೆ ಹಾಲು ಕರೆಯುವ ಸ್ಪರ್ಧೆ, ಮಹಿಳೆಯರಿಗೆ ಮಜ್ಜಿಗೆ ಕಡೆಯುವ ಮತ್ತು ಗೋದಿ ಕಲ್ಲಿನಲ್ಲಿ ಹಿಟ್ಟು ಬೀಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ(UB Banakar), ಯುವ ನಾಯಕಿ ಸೃಷ್ಟಿ ಪಾಟೀಲ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ಅಭಿಮಾನಿಗಳು(Fans) ಇದ್ದರು. ಚಿನ್ನಮುಳಗುಂದ, ಯತ್ನಳ್ಳಿ, ಯಡಗೋಡ, ಕಣವಿಸಿದ್ದಗೇರಿ, ಹಿರೇಕೆರೂರು ಮುಂತಾದ ಗ್ರಾಮಗಳ ರೈತರ ತಾಕುಗಳಿಗೆ ಭೇಟಿ ನೀಡಿ ಜನ್ಮದಿನವನ್ನು ಸಚಿವ ಬಿ.ಸಿ. ಪಾಟೀಲ ಅವರು ರೈತರೊಂದಿಗೆ ಕಳೆದರು.
ಶಿಳ್ಳೆ, ಚಪ್ಪಾಳೆ ಇದ್ದರೇನೇ ಕಲಾವಿದರ ಜೀವನ. ಚಿತ್ರಮಂದಿರಗಳಲ್ಲಿ ಚಲನಚಿತ್ರಗಳನ್ನು ನೋಡುವ ಮೂಲಕ ಚಿತ್ರರಂಗವನ್ನು ಕಲಾವಿದರನ್ನು ಜನರು ಬೆಳೆಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ಹಿರೇಕೆರೂರಿನಲ್ಲಿ ನಡೆದ ರೈತರೊಂದಿಗೊಂದು ದಿನ ವೇದಿಕೆ ಕಾರ್ಯಕ್ರಮದಲ್ಲಿ ಗರಡಿ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕೂಡ ಬಿ.ಸಿ. ಪಾಟೀಲ್ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.