ಚಿತ್ರದುರ್ಗದಲ್ಲಿ ಅವೈಜ್ಞಾನಿಕ ಸಂಚಾರಿ ವ್ಯವಸ್ಥೆ ವಿರುದ್ದ ಸ್ಥಳೀಯರ ಕಿಡಿ
ಹೇಳಿ ಕೇಳಿ ಅದೊಂದು ಪ್ರವಾಸಿತಾಣ. ಆದ್ರೆ ಅಲ್ಲಿನ ಅವೈಜ್ಞಾನಿಕ ರಸ್ತೆಗಳಿಂದಾಗಿ ಸ್ಥಳೀಯರು ಹಾಗೂ ಪ್ರವಾಸಿಗರು ನಿಯಮ ಪಾಲನೆ ಮಾಡಲು ಪರದಾಡ್ತಿದ್ದಾರೆ. ಪೊಲೀಸರು ಸಹ ಮೌನವಹಿಸಿದ್ದು ಜನರಿಗೆ ತಲೆ ನೋವಾಗಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ!
ಇದು ಐತಿಹಾಸಿಕ ನಗರಿ ಚಿತ್ರದುರ್ಗ(chitradurga). ಹೀಗಾಗಿ ಇಲ್ಲಿಗೆ ನಿತ್ಯ ಪ್ರವಾಸಿಗರ ದಂಡೇ ಹರಿದು ಬರ್ತದೆ. ಆದ್ರೆ ಅಲ್ಲಿನ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಪ್ರವಾಸಿಗರು ಹಾಗು ಸ್ಥಳಿಯರು ಟ್ರಾಫಿಕ್ ನಿಯಮ ಪಾಲನೆ ಮಾಡಲು ಪರದಾಡುವಂತಾಗಿದೆ.
ನಿಯಮ ಪಾಲನೆ ಮಾಡುವ ಭರಾಟೆಯಲ್ಲಿ ಅಪಘಾತ ಸಂಬವಿಸಿ ಯಾತನೆ ಅನುಭವಿಸುವಂತಾಗಿದೆ.ಅಲ್ದೇ ರಸ್ತೆ ದಾಟಲು ಹರಸಾಹಸ ಪಡುವಂತಾಗಿದ್ದು, ಬೇಕಾ ಬಿಟ್ಟಿಯಾಗಿ ಮುಖ್ಯರಸ್ತೆಯಲ್ಲಿ ಅಳವಡಿಸಿರುವ ಸಿಗ್ನಲ್ ಲೈಟ್ ಗಳಿಂದ ಜನರು ಹೈರಣಾಗಿದ್ದಾರೆ. ಅಲ್ಲದೇ ನಗರದ ಪುಟ್ ಬಾತ್ ಮೇಲಿನ ವ್ಯಾಪಾರಿಗಳು ಸಹ ಈ ಅವೈಜ್ಞಾನಿಕ ರಸ್ತೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಷ್ಟೇ ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗದೇ ಇರುವುದು ದುರದೃಷ್ಟಕರ ಎಂದು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕ್ತಾರೆ ಸ್ಥಳೀಯರು.
ಇನ್ನು ಈ ಬಗ್ಗೆ ಚಿತ್ರದುರ್ಗ ಎಸ್ಪಿ ಧರ್ಮೇಂಧರ್ ಕುಮಾರ್ ಮೀನಾ ಅವರನ್ನು ಕೇಳಿದ್ರೆ, ಚಿತ್ರದುರ್ಗ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. ಆಟೋ ನಿಲ್ದಾಣ ಸೇರಿದಂತೆ ಸರ್ಕಲ್ ಗಳು ನಿರ್ಮಾಣ ವಾಗಬೇಕಿದೆ. ಅದ್ರಲ್ಲಂತೂ ನಮ್ಮ ನಗರದಲ್ಲಿ ಒಂದೇ ಪ್ರಮುಖ ರಸ್ತೆಯಿದೆ. ಅತಿ ಹೆಚ್ಚಾಗಿ ನಗರದ ಎಂ.ಜಿ ಸರ್ಕಲ್, ಸಂತೆಹೋಂಡ, KSRTC, ಖಾಸಗಿ ಸಾರಿಗೆ ಬಸ್ ನಿಲ್ದಾಣದ ಬಳಿ ಹೆಚ್ಚು ಟ್ರಾಫಿಕ್ ಕಿರಿಕಿರಿ ಆಗ್ತಿದೆ.
ಈ ಸಂಬಂಧ ರಸ್ತೆ ಸುರಕ್ಷಿತಾ ಕಮಿಟಿಯಿಂದ ನಗರಸಭೆ, PWD, ಇನ್ನಿತರ ಇಲಾಖಾವಾರು ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು. ಶೀಘ್ರವೇ ಟ್ರಾಫಿಕ್ ಸಮಸ್ಯೆ ಸರಿಪಡಿಸಿ ಸಾರ್ವಜನ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಒಟ್ಟಾರೆಯಾಗಿ ಕೋಟೆನಾಡಿನಲ್ಲಿ ಜನರು ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಇರುವುದು ಒಂದು ಸಮಸ್ಯೆಯಾದ್ರೆ, ಅಧಿಕಾರಿಗಳು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ, ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿ ಜನರಿಗೆ ತೊಂದರೆ ಉಂಟು ಮಾಡ್ತಿದ್ದಾರೆ. ಇನ್ನಾದ್ರು ಎಚ್ಚೆತ್ತು ಸಮಸ್ಯೆ ಬಗೆಹರಿಸಲಿ ಎಂಬುದು ಎಲ್ಲರ ಬಯಕೆ.
- ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್