ಚಾಕು ಚುಚ್ಚಿದ ಪ್ರಿಯಕರ, ಮದುವೆ ಆಗುವಂತೆ ವರನನ್ನು ಮನವೊಲಿಸಲು ಆಸ್ಪತ್ರೆಗೆ ಬಂದ ವಧು!
Marriage Cancelled in Kollegal After Bridegroom Stabbed by Bride's Lover ಕೊಳ್ಳೇಗಾಲದಲ್ಲಿ ಮದುವೆ ಸಂಭ್ರಮದ ವೇಳೆ ವರ ರವೀಶ್‌ಗೆ ವಧು ನಯನಾಳ ಪ್ರಿಯಕರ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ವರ ಆಸ್ಪತ್ರೆಗೆ ದಾಖಲಾಗಿದ್ದು, ಈ ಘಟನೆಯಿಂದ ಮದುವೆ ಮುರಿದುಬಿದ್ದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸಿನಿಮಾ ಮಾದರಿಯ ಭೀಕರ ಘಟನೆಯೊಂದು ನಡೆದಿದ್ದು, ಮದುವೆ ಸಂಭ್ರಮದ ನಡುವೆಯೇ ರಕ್ತ ಹರಿದಿದೆ.
ಮದುವೆಯಾಗಬೇಕಿದ್ದ ವರನಿಗೆ ವಧುವಿನ ಪ್ರಿಯಕರ ಚಾಕು ಇರಿದಿದ್ದು, ಈ ಘಟನೆಯಿಂದಾಗಿ ನಡೆಯಬೇಕಿದ್ದ ಮದುವೆ ಅರ್ಧಕ್ಕೇ ಮುರಿದು ಬಿದ್ದಿದೆ.
ವರ ರವೀಶ್ ಮದುವೆಗೆ ಸಜ್ಜಾಗಿದ್ದ ವೇಳೆ ಈ ದಾಳಿ ನಡೆದಿದೆ. ಪ್ರಾಣ ತೆಗೆಯುವ ಉದ್ದೇಶದಿಂದಲೇ ಚಾಕು ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ರವೀಶ್ ಸದ್ಯ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದಾಳಿಯ ಹಿಂದೆ ವಧು ನಯನಾಳ ಪ್ರಿಯಕರನ ಕೈವಾಡವಿದೆ ಎಂದು ಶಂಕಿಸಲಾಗಿದೆ. ಘಟನೆಯ ನಂತರ ಮದುವೆ ಮುರಿದು ಬಿದ್ದಿದ್ದರೂ, ವಧು ನಯನಾ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವೀಶ್ ಬಳಿ ಬಂದು, "ದಯವಿಟ್ಟು ನನ್ನನ್ನು ಮದುವೆಯಾಗು" ಎಂದು ಮನವಿ ಮಾಡಿದ್ದಾರೆ.
ಆದರೆ, ಪ್ರಾಣಾಪಾಯದಿಂದ ಪಾರಾಗಿರುವ ರವೀಶ್ ಮದುವೆಯಾಗಲು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.
ಮದುವೆ ನಿರಾಕರಿಸಿದ ವರ ರವೀಶ್, "ಮದುವೆಯಾಗಲು ಬಂದಾಗಲೇ ನನ್ನ ಪ್ರಾಣ ತೆಗೆಯಲು ಯತ್ನಿಸಿದ್ದಾರೆ. ಒಂದು ವೇಳೆ ನಾನು ಈಕೆಯನ್ನೇ ಮದುವೆಯಾದರೆ ಮುಂದೆ ಇದೇ ರೀತಿ ತೊಂದರೆಯಾದಾಗ ನನ್ನ ಪ್ರಾಣಕ್ಕೆ ಯಾರು ಹೊಣೆ? ಇಂತಹ ಆತಂಕದ ನಡುವೆ ಸಂಸಾರ ಮಾಡಲು ಸಾಧ್ಯವಿಲ್ಲ," ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ.

