- Home
- Karnataka Districts
- ಮೂರು ಜಿಲ್ಲೇಲಿ ಮಳೆಯಬ್ಬರ: ಕರಾವಳಿಗೆ 4 ದಿನ ಯೆಲ್ಲೋ ಅಲರ್ಟ್, ಬಳ್ಳಾರೀಲಿ 100 ಮರ ಧರೆಗೆ
ಮೂರು ಜಿಲ್ಲೇಲಿ ಮಳೆಯಬ್ಬರ: ಕರಾವಳಿಗೆ 4 ದಿನ ಯೆಲ್ಲೋ ಅಲರ್ಟ್, ಬಳ್ಳಾರೀಲಿ 100 ಮರ ಧರೆಗೆ
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರೆದಿದ್ದು, ಬಳ್ಳಾರಿ, ಮಂಗಳೂರು ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆಯು ಕರಾವಳಿ ಭಾಗಕ್ಕೆ ಜೂ.3 ರಿಂದ 6ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಜೂ. 4ರಂದು ಮುಂಗಾರು ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ.

ಮುಂಗಾರು ಪೂರ್ವ ಮಳೆ ಅಬ್ಬರ
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಮುಂದುವರಿದಿದ್ದು, ಮಂಗಳವಾರ ಬಳ್ಳಾರಿ, ಮಂಗಳೂರು, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದೆ. ಜೂ.3ರಿಂದ 6ರವರೆಗೆ ಹವಾಮಾನ ಇಲಾಖೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಜೂ. 4ರಂದೇ ಮುಂಗಾರು ಪ್ರವೇಶ ಸಾಧ್ಯತೆ ಎಂದು ಹೇಳಲಾಗಿದೆ.
ಕರಾವಳಿಯಲ್ಲಿ ಮಂಗಳವಾರ ಧಾರಾಕಾರ ಮಳೆ
ಮುಂಗಾರು ಪ್ರವೇಶಕ್ಕೆ ಮುನ್ನವೇ ಕರಾವಳಿಯಲ್ಲಿ ಮಂಗಳವಾರ ಧಾರಾಕಾರ ಮಳೆ ಕಾಣಿಸಿದೆ. ಮಂಗಳೂರು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಜೆ ವೇಳೆಗೆ ಭಾರಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂ.3ರಿಂದ 6 ರ ವರೆಗೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಜೂ. 4ರಂದೇ ಮುಂಗಾರು ಪ್ರವೇಶ ಸಾಧ್ಯತೆ ಹೇಳಲಾಗಿದೆ.
ದ.ಕ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ
ಮಂಗಳವಾರ ಇಡೀ ದಿನ ದ.ಕ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಅಪರಾಹ್ನ ಸುಳ್ಯ, ಪುತ್ತೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯತೊಡಗಿದೆ. ಮಂಗಳೂರಿನಲ್ಲಿ ಸಂಜೆ ಹೊತ್ತಿಗೆ ಸಾಧಾರಣ ಪ್ರಮಾಣದಲ್ಲಿ ಭಾರಿ ಮಳೆಯಾಗಿದೆ. ಧಾರಾಕಾರ ಮಳೆಯಿಂದ ನಗರದಲ್ಲಿ ಟ್ರಾಫಿಕ್ ಜಾಮ್ ತಲೆದೋರಿದೆ. ಮಳೆಗಾಲದ ಮಾದರಿಯಲ್ಲೇ ರಾತ್ರಿ ವರೆಗೂ ಮಳೆ ಮುಂದುವರಿದಿತ್ತು
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ,100 ಮರ ಧರೆಗೆ
ಬಳ್ಳಾರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಹಾಗೂ ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ವಿವಿಧ ಪ್ರದೇಶಗಳಲ್ಲಿ ನೂರಕ್ಕೂ ಅಧಿಕ ಮರಗಳು ನೆಲಕ್ಕುರುಳಿದ್ದು, ಕೆಲವೆಡೆ ವಿದ್ಯುತ್ ಕಂಬಗಳು ಸಹ ಧರೆಗುರುಳಿದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಜೂ.4ರ ಸುಮಾರಿಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ
ನೈಋತ್ಯ ಮಾರುತಗಳು ಜೂ.4ರ ಸುಮಾರಿಗೆ ಕೇರಳವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುನ್ಸೂಚನೆ ನೀಡಿದೆ.
ಸಾಮಾನ್ಯವಾಗಿ ಜೂ.1ರಂದು ಮುಂಗಾರು ಕೇರಳವನ್ನು ಪ್ರವೇಶಿಸುತ್ತದೆ. ಆದರೆ ಈ ವರ್ಷ ತಡವಾಗಿ ಪ್ರವೇಶಿಸಲಿದ್ದು, ಮಳೆಯ ಪ್ರಮಾಣವೂ ವಾಡಿಕೆಗಿಂತ ಕಡಿಮೆಯಿರಲಿದೆ ಎಂದು ಐಎಂಡಿ ಎಚ್ಚರಿಸಿದೆ.
ಮೇ 26ರಂದೇ ಮುಂಗಾರು ಪ್ರವೇಶಿಸಲಿದೆ ಎಂದು ಐಎಂಡಿ ಅಂದಾಜಿಸಿತ್ತು
ಅರಬ್ಬೀ ಸಮುದ್ರ, ಲಕ್ಷದ್ವೀಪಗಳು, ಕೇರಳ ಮತ್ತು ತಮಿಳುನಾಡಿನ ಕೆಲವೆಡೆ ಮುಂಗಾರಿಗೆ ಅನುಕೂಲಕರ ವಾತಾವರಣವಿದೆ ಎಂದು ಅದು ತಿಳಿಸಿದೆ. ಈ ಹಿಂದೆ, ಮೇ 26ರಂದೇ ಮುಂಗಾರು ಪ್ರವೇಶಿಸಲಿದೆ ಎಂದು ಐಎಂಡಿ ಅಂದಾಜಿಸಿತ್ತು.

