ಜಲ ಕ್ರಾಂತಿ ಆಯ್ತು, ಈಗ ಕ್ಷೀರ ಕ್ರಾಂತಿ: ಮಾಜಿ ಸಚಿವ ಎಂ.ಬಿ.ಪಾಟೀಲ
ವಿಜಯಪುರ(ನ.25): ಜಲಕ್ರಾಂತಿಯ ನಂತರ ಕ್ಷೀರ ಕ್ರಾಂತಿಗೆ ನಾನು ಲಕ್ಷ್ಯ ವಹಿಸಿದ್ದು, ಪ್ರತಿ ಮನೆಗೂ ದನಕರುಗಳನ್ನು ಸಾಕಿ ಹೆಚ್ಚೆಚ್ಚು ಹಾಲು ಉತ್ಪಾದಿಸಬೇಕು ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಕರೆ ನೀಡಿದ್ದಾರೆ.
ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಮಂಗಳವಾರ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿ, ಸರ್ಕಾರಿ ಉರ್ದು ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ನನ್ನ ತಂದೆ ಬಿ.ಎಂ. ಪಾಟೀಲರು ಹಾಗೂ ಸಿದ್ದೇಶ್ವರ ಶ್ರೀಗಳ ಆಶೀರ್ವಾದದಿಂದ, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವನಾಗಿ 5 ವರ್ಷಗಳ ಕಾಲ ಹಗಲು ರಾತ್ರಿ ಕಾರ್ಯ ಮಾಡಿ, ಜಿಲ್ಲೆಯನ್ನು ಸಂಪೂರ್ಣವಾಗಿ ನೀರಾವರಿಗೆ ಒಳಪಡಿಸಿದ್ದೇನೆ. ಜಿಲ್ಲೆಯ ಬರದ, ಹಿಂದುಳಿದ ಹಣೆಪಟ್ಟಿಯನ್ನು ತೆಗೆದು ಹಾಕಿ, ಸಂಪದ್ಭರಿತ ಜಿಲ್ಲೆಯನ್ನಾಗಿ ಪರಿವರ್ತಿಸಿದ್ದೇನೆ. ಇದೀಗ ಜಲಕ್ರಾಂತಿಯ ನಂತರ ಕ್ಷೀರಕ್ರಾಂತಿಗೆ ನಾನು ಒತ್ತು ನೀಡಿದ್ದೇನೆ ಎಂದ ಮಾಜಿ ಸಚಿವ ಪಾಟೀಲ
ವಿಶ್ವ ಹೈನುಗಾರಿಕೆ ದಿನ ಸಂದರ್ಭದಲ್ಲಿ ಈ ಕುರಿತು ನಾನು ಗಂಭೀರವಾಗಿ ಯೋಜಿಸಿದ್ದು, ಈಗ ನೀರು ಹಾಗೂ ಮೇವು ಯಥæೕಚ್ಚವಾಗಿರುವ ಕಾರಣ, ಪ್ರತಿ ಮನೆಗೆ ದನಕರು, ಎಮ್ಮೆ, ಆಡುಗಳನ್ನು ಸಾಕುವ ಮೂಲಕ ಪ್ರತಿ ಮನೆಯ ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಅನಕೂಲವಾಗುವುದು ಎಂದರು.
ನಿಡೋಣಿ ಕೆರೆಗೆ ನೀರು ಹರಿಸಿದ ಈ ದಿನ ನನಗೆ ಅತ್ಯಂತ ಸಂತೋಷದ ದಿನ. ಈ ಕೆರೆ ತುಂಬಿದ ಫಲ ಈ ಗ್ರಾಮ ಸಂಪೂರ್ಣ ನೀರಾವರಿಗೆ ಒಳಪಡುತ್ತದೆ. ಇದರ ಪ್ರಯೋಜನ ಪಡೆದು ನೀವು ಶ್ರೀಮಂತರಾಗಿ ಎಂದ ಅವರು, ನೀರಾವರಿ ಯೋಜನೆಯ ಫಲ ವಿಜಯಪುರ ಜಿಲ್ಲೆ ರಾಷ್ಟ್ರದಲ್ಲಿಯೇ ಸಂಪದ್ಭರಿತ ಜಿಲ್ಲೆಯಾಗಿ ಮಾರ್ಪಡಲಿದೆ ಎಂದರು.
ಮುಳವಾಡ ಏತನೀರಾವರಿ ಯೋಜನೆ ಮಲಘಾಣ ಪಶ್ಚಿಮ ಕಾಲುವೆ 0-62 ಕಿಮೀವರೆಗೆ ನನ್ನ ಅವಧಿಯಲ್ಲಿಯೇ ಡಿಸ್ಟ್ರಿಬ್ಯೂಟರ್ ಶಾಖಾ ಕಾಲುವೆಗಳ ಕಾಮಗಾರಿಗಳ ಆರಂಭಗೊಂಡಿದ್ದವು. ಇದೀಗ 62-118 ಕಿಮೀವರೆಗೆ ಟೆಂಡರ್ ಕರೆಯಲಾಗಿದೆ. ಟೆಲ್ ಎಂಡ್‌ವರೆಗೆ ಎಲ್ಲಾ ಶಾಖಾ ಕಾಲುವೆಗಳ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಈ ವೇಳೆ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕೆ.ಎಂ.ಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ್, ಬಬಲೇಶ್ವರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಕೆಬಿಜೆಎನ್‌ಎಲ್ ಎಸ್.ಇ. ಜಗದೀಶ ರಾಠೋಡ, ಎಇಇ ಸುರೇಶ ಪಾಟೀಲ, ಆರ್.ಎಚ್.ದೇಸಾಯಿ, ಎಂ.ಕೆ.ಪರಸನ್ನವರ, ಚಂದ್ರಶೇಖರ ಜಿರಲೆ, ಬಿಇಒ ಎ.ಎಸ್. ಹತ್ತಳ್ಳಿ, ಮುಖಂಡರಾದ ಧರ್ಮಣ್ಣ ಬೀಳೂರ, ಮಲ್ಲು ಪಡಗಾನೂರ, ರಾಚನಗೌಡ ಬಿರಾದಾರ, ಕುಮಾರ ಬಡಿಗೇರ, ಪರಸಪ್ಪ ಶಹಪುರ, ಮಲ್ಲಪ್ಪ ಮಾಳಿ, ರಾಚಪ್ಪ ಮಮದಾಪುರ, ಉಮೇಶಗೌಡ ಬಿರಾದಾರ, ಸೋಮು ಕೋಟ್ಯಾಳ, ವಿ.ಎನ್.ಆಲಗೂರ, ರವಿ ಮಮದಾಪುರ, ಜಾಫರ ಇನಾಮದಾರ ಮುಂತಾದವರು ಇದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಂಕರಗೌಡ ಪೊಲೀಸ್‌ಪಾಟೀಲ, ಅಡಿವೆಪ್ಪ ಅಲ್ಲಿಬಾದಿ, ಸಲೀಮ ಕಾಶಿನಕುಂಟಿ, ನಿಜಾಮ ಸೌದಾಗರ, ನೂರ ಜಮಾದಾರ, ದಾವಲ ಇನಾಮದಾರ ಸೇರಿದಂತೆ ನೂರಾರು ಕಾರ್ಯಕರ್ತರು ಎಂ.ಬಿ. ಪಾಟೀಲ ಅವರ ಜನಪರ ಕಾರ್ಯ ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.