ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನೇತೃತ್ವದಲ್ಲಿ ಡಿಸೆಂಬರ್ 4 ರಿಂದ 13 ರವರೆಗೆ ನಡೆಯಲಿರುವ 'ಬೆಂಗಳೂರು ಜಾತ್ರೆ'ಯ ಪೂರ್ವ ಸಿದ್ಧತೆಗಳ ಕುರಿತು ಪರಿಶೀಲನಾ ಸಭೆ ನಡೆಯಿತು. ಈ ವೇಳೆ, ಬಿಡಾಡಿ ವಾಹನಗಳ ಜಪ್ತಿ, ಅನಧಿಕೃತ ಕಟ್ಟಡಗಳ ತೆರವು ಮತ್ತು ದೂರು ವಿಲೇವಾರಿ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಯುಕ್ತರು ಸೂಚಿಸಿದ್ದಾರೆ.

ಬೆಂಗಳೂರು (ನ.11): ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ನೇತೃತ್ವದಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂಬರುವ ಡಿಸೆಂಬರ್ 4 ರಿಂದ 13 ರವರೆಗೆ ‘ಬೆಂಗಳೂರು ಜಾತ್ರೆ’ ಅತ್ಯಂತ ಸಡಗರ-ಸಂಭ್ರಮದಿಂದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆ, ನಗರ ಸ್ವಚ್ಛತೆ, ರಸ್ತೆ ಗುಂಡಿ ದುರಸ್ತಿ ಹಾಗೂ ಅನಧಿಕೃತ ಕಟ್ಟಡಗಳ ತೆರವು ಕುರಿತು ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಸಾರ್ವಜನಿಕರ ದೂರು ವಿಲೇವಾರಿ, ಬಿಡಾಡಿ ವಾಹನಗಳ ಜಪ್ತಿ ಹಾಗೂ ವಾರ್ಡ್ ಒನ್ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿದ ಆಯುಕ್ತರು, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

1. 10 ದಿನಗಳ ಕಾಲ ಸಂಸ್ಕೃತಿ ಮತ್ತು ಕ್ರೀಡಾ ಹಬ್ಬ:

ಸಾಂಸ್ಕೃತಿಕ ಹಿರಿಮೆ ಹಾಗೂ ಜನಸಹಭಾಗಿತ್ವವನ್ನು ಹೆಚ್ಚಿಸಲು ಮೆಗಾ, ಮೀಡಿಯಂ ಹಾಗೂ ಮಿನಿ ಈವೆಂಟ್‌ಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ:

ಮೀಡಿಯಂ ಈವೆಂಟ್‌ಗಳ ಸ್ಥಳ: ಐಟಿಐ ಲಿಮಿಟೆಡ್ (ITI Limited) ಆವರಣ ಹಾಗೂ ಪಟ್ಟಂದೂರು ಅಗ್ರಹಾರದ ದಸರಾ ಮೈದಾನ.

ಮಿನಿ ಈವೆಂಟ್‌ಗಳು: ಕೆ.ಆರ್. ಪುರಂ ಮತ್ತು ಮಹದೇವಪುರ ವಲಯಗಳಲ್ಲಿ ತಲಾ 5 ಸ್ಥಳಗಳು ಸೇರಿದಂತೆ ಒಟ್ಟು 10 ಸೂಕ್ತ ಸ್ಥಳಗಳನ್ನು ಗುರುತಿಸಲು ಸೂಚಿಸಲಾಗಿದೆ.

ವೈವಿಧ್ಯಮಯ ಕಾರ್ಯಕ್ರಮಗಳು: ವಾಕ್‌ಥಾನ್, ಸೈಕ್ಲೋಥಾನ್, ಕ್ರೀಡಾಕೂಟಗಳು, ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆ ಹಾಗೂ ವೈವಿಧ್ಯಮಯ ಆಹಾರ ಮೇಳಗಳನ್ನು ಆಯೋಜಿಸಲಾಗುವುದು.

ಸ್ಥಳೀಯ ಕಲಾವಿದರಿಗೆ ಆದ್ಯತೆ: ಜಿಬಿಎ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರ ಜೊತೆಗೆ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ, ಗೌರವಧನ ನಿಗದಿಪಡಿಸಲು ಸೂಚಿಸಲಾಗಿದೆ.

2. ರಸ್ತೆ ಬದಿಯ 53 ಬಿಡಾಡಿ (ಅನಾಥ) ವಾಹನಗಳ ಸ್ಕ್ರಾಪ್‌ಗೆ ನಿರ್ದೇಶನ

  • ನಗರದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿರುವ ಅನಾಥ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ:
  • ಪೂರ್ವ ವಲಯ ವ್ಯಾಪ್ತಿಯಲ್ಲಿ 53 ಬಿಡಾಡಿ ವಾಹನಗಳನ್ನು ಗುರುತಿಸಲಾಗಿದ್ದು, ಈಗಾಗಲೇ 3 ವಾಹನಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
  • ಬಾಕಿ ಉಳಿದ 50 ವಾಹನಗಳನ್ನು ಕಾನೂನು ನಿಯಮಾವಳಿ ಪ್ರಕಾರ ತ್ವರಿತವಾಗಿ ಸ್ಕ್ರಾಪ್ (Scrap) ಮಾಡಲು ಆಯುಕ್ತರು ಸೂಚಿಸಿದ್ದಾರೆ.

3. ಅನಧಿಕೃತ ಕಟ್ಟಡಗಳು ಹಾಗೂ ಪಿಜಿ (PG) ವಿರುದ್ಧ ಸಮರ

8 ಉಪವಿಭಾಗಗಳ ಪೈಕಿ ಕೇವಲ 6 ಉಪವಿಭಾಗಗಳಲ್ಲಿ ಮಾತ್ರ ನೋಟಿಸ್ ನೀಡಿರುವುದಕ್ಕೆ ಆಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೋಟಿಸ್ ಜಾರಿಯಾದ ಬಳಿಕವೂ ಕಾಮಗಾರಿ ನಿಲ್ಲಿಸದ ಅನಧಿಕೃತ ಕಟ್ಟಡಗಳು ಮತ್ತು ನಿಯಮ ಉಲ್ಲಂಘಿಸಿರುವ ಪಿಜಿಗಳ (Pay Guest) ವಿರುದ್ಧ ತಕ್ಷಣವೇ ತೆರವು ಕಾರ್ಯಾಚರಣೆ ನಡೆಸಲು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಆದೇಶಿಸಲಾಗಿದೆ.

4. ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು 'ಸಹಾಯ ಆಪ್' ದೂರುಗಳ ವಿಲೇವಾರಿ

ಸಿಎಂಐಡಿಪಿ (CMIDP) ಕಾಮಗಾರಿಗಳು: ಡಾಂಬರೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿಗಳನ್ನು ಚಾಲ್ತಿ ತಿಂಗಳೊಳಗಾಗಿ ಪೂರ್ಣಗೊಳಿಸಿ, ಪ್ರಗತಿ ವಿವರಗಳನ್ನು ಸ್ಪ್ರೆಡ್‌ಶೀಟ್‌ನಲ್ಲಿ ಅಪ್‌ಲೋಡ್ ಮಾಡಲು ಗಡುವು ನೀಡಲಾಗಿದೆ.

ಸಹಾಯ ಆಪ್ (Sahaaya App): ಸಾರ್ವಜನಿಕರ ದೂರುಗಳನ್ನು ತಕ್ಷಣ ಪರಿಹರಿಸಲು ಆಯುಕ್ತರು ಸೂಚಿಸಿದ್ದು, ಈ ಸಂಬಂಧ ನವೆಂಬರ್ 12ರಂದು ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ತ್ಯಾಜ್ಯ ನಿರ್ವಹಣೆ: ಹಸಿ ಮತ್ತು ಒಣ ಕಸದ ಪ್ರತ್ಯೇಕ ಸಂಗ್ರಹಣೆ ಹಾಗೂ ಸಿ&ಡಿ (C&D) ಕಟ್ಟಡ ತ್ಯಾಜ್ಯ ವಿಲೇವಾರಿಗೆ ನಾಗರಿಕರಲ್ಲಿ ಮಾಹಿತಿ ಮತ್ತು ಸಂವಹನ (IEC) ಅಭಿಯಾನದ ಮೂಲಕ ಅರಿವು ಮೂಡಿಸಲು ನಿರ್ಧರಿಸಲಾಗಿದೆ.