ತಾತ ಹಂಚಿಕೆ ಮಾಡಿದ ಆಸ್ತಿಯಲ್ಲಿ ತಂದೆಗೆ ಸಿಕ್ಕ ಭಾಗದ ಮೇಲೆ ಮೊಮ್ಮಕ್ಕಳಿಗೆ ಯಾವುದೇ ಜನ್ಮಸಿದ್ಧ ಹಕ್ಕು ಇರೋದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹಿಂದೂ ವಾರಸುದಾರರ ಕಾಯ್ದೆ-1956ರ ಸೆಕ್ಷನ್ 8ರ ಅನ್ವಯ ಈ ಮಹತ್ವದ ತೀರ್ಪು ನೀಡಲಾಗಿದೆ.
ಕುಟುಂಬದ ಆಸ್ತಿಗಳು ಹಂಚಿಕೆ, ವಾರಸುದಾರರ ಹಕ್ಕುಗಳಿಗೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಒಂದು ಕುಟುಂಬದಲ್ಲಿ ತಾತ ತನ್ನ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡಿದ ಕ್ಷಣದಿಂದ, ಆ ಆಸ್ತಿಯ ಮೇಲೆ ಅವರ ಮಕ್ಕಳಿಗೆ ಸಂಪೂರ್ಣ ಹಕ್ಕು ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ತಾತ ಸಂಪಾದನೆ ಮಾಡಿದ ಆಸ್ತಿಯಲ್ಲಿ ತಂದೆಗೆ ಸಿಕ್ಕ ಭಾಗದ ಮೇಲೆ ಮೊಮ್ಮಕ್ಕಗಳಿಗೆ ಯಾವುದೇ ಜನ್ಮಸಿದ್ಧ ಹಕ್ಕುಗಳು ಇರೋದಿಲ್ಲ ಎಂದು ಸುಪ್ರೀಂ ಕೋರ್ಟ್ನ ಜಸ್ಟಿಸ್ ಆಗಸ್ಟಿನ್ ಜಾರ್ಜ್ ಮಸಿಹ್, ಜಸ್ಟಿಸ್ ಸುನಿತಾ ಅಗರ್ವಾಲ್ ಅವರ ದ್ವಿಸದಸ್ಯ ಪೀಠ ಆದೇಶ ನೀಡಿದೆ. ಹಿಂದೂ ವಾರಸುದಾರರ ಕಾಯ್ದೆ-1956ರ ಸೆಕ್ಷನ್ 8ರ ನಿಬಂಧನೆಯ ಅನ್ವಯ ನ್ಯಾಯಾಧೀಶರು ಮಹತ್ವದ ಆದೇಶ ಪ್ರಕಟಿಸಿದ್ದಾರೆ.
ಸುಪ್ರೀಂ ಕೋರ್ಟ್ ಮಹತ್ವದ ಆದೇಶಕ್ಕೆ ಕಾರಣವೇನು?
1993ರಲ್ಲಿ ಎನ್ ರಾಮಕೃಷ್ಣನ್ ಎಂಬ ವ್ಯಕ್ತಿ ತಮ್ಮ ಅವಿಭಕ್ತ ಕುಟುಂಬದಲ್ಲಿದ್ದ ಮಕ್ಕಳಿಗೆ ಸಮನಾಗಿ ಆಸ್ತಿಯನ್ನು ಹಂಚಿಕೆ ಮಾಡಿದ್ದರು. ಈ ಹಂಚಿಕೆ ನಡೆದ ಸಂದರ್ಭದಲ್ಲಿ ಸದ್ಯ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದವರು ಜನಿಸಿರಲಿಲ್ಲ. ಆ ಬಳಿಕ ತಮ್ಮ ಪಾಲಿಕೆ ಬಂದ ಆಸ್ತಿಯ ಸ್ವಲ್ಪ ಭಾಗವನ್ನು, ಈಗ ಅರ್ಜಿ ಸಲ್ಲಿಕೆ ಮಾಡಿದ್ದ ವ್ಯಕ್ತಿಯ ತಂದೆ 1997ರಲ್ಲಿ ಬೇರೆಯವರಿಗೆ ಮಾರಾಟ ಮಾಡಿದ್ದರು. ಆಸ್ತಿ ಮಾರಾಟ ಮಾಡಿದ್ದ ವ್ಯಕ್ತಿ 2024ರ ವರಗೂ ಬದುಕಿದ್ದರು. ಆದರೆ ತಮ್ಮ ತಂದೆ ಮಾರಾಟ ಮಾಡಿದ್ದ ಭೂಮಿಯಲ್ಲಿ ತಮಗೂ ಭಾಗ ಸಿಗಬೇಕು ಎಂದು ತಾಯಿಯ ಸಂರಕ್ಷಣೆಯಲ್ಲಿದ್ದ ಅಪ್ರಾಪ್ತ ಮಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ತಂದೆ ಆಸ್ತಿ ಮಾರಾಟ ಮಾಡಿದ್ದನ್ನು ಸವಾಲು ಮಾಡಿ ಪ್ರಕರಣ ದಾಖಲು ಮಾಡಿದ್ದರು.
ಪ್ರರಕಣದ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಪ್ರಮುಖ ಅಂಶಗಳನ್ನು ಎತ್ತಿಹಿಡಿದಿದೆ. ಹಿಂದೂ ವಾರಸುದಾರರ ಕಾಯ್ದೆ-1956ರ ಸೆಕ್ಷನ್ 6, ಸೆಕ್ಷನ್ 29 (ಎ) ಅನ್ವಯ ತಾತನ ಆಸ್ತಿಯಲ್ಲಿ ತಮಗೂ ಪಾಲು ಬೇಕು ಎಂದು ಅರ್ಜಿ ಸಲ್ಲಿಕೆ ಮಾಡಿದ್ದ ಮನವಿಗೆ ಅನ್ವಯ ಆಗೋದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ಅವಿಭಕ್ತ ಕುಟುಂಬದಲ್ಲಿ ಮನೆಯ ಹಿರಿಯ ವ್ಯಕ್ತಿ ಆಸ್ತಿ ಹಂಚಿಕೆ ಬಗ್ಗೆ ಯಾವುದೇ 'ಉಯಿಲು' ಬರೆಯದೆ ಸಾವನ್ನಪ್ಪಿದ್ದರೆ ಎದುರಾಗುವ ವಿವಾದಗಳು ಭಿನ್ನವಾಗಿರುತ್ತದೆ. ಆದರೆ ಸದ್ಯದ ಪ್ರಕರಣದ ಇದಕ್ಕೆ ಅನ್ವಯ ಆಗೋದಿಲ್ಲ. 1993ರಲ್ಲಿ ತಾತ ಆಸ್ತಿಯ ಹಂಚಿಕೆ ಅಥವಾ 1997ರಲ್ಲಿ ತಂದೆಯ ಆಸ್ತಿಯ ಮಾರಾಟವವನ್ನು ಈ ಹಿಂದೆ ಅರ್ಜಿದಾರರು ಎಲ್ಲಿಯೂ ಪ್ರಶ್ನಿಸಿರಲಿಲ್ಲ ಎಂಬುವುದನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.
ಇದರೊಂದಿಗೆ ಮದ್ರಾಸ್ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ತಂದೆಯಿಂದ ತನಗೆ ಸಿಕ್ಕ ಆಸ್ತಿಯನ್ನು ಮಾರಾಟ ಮಾಡುವ ಸಂಪೂರ್ಣ ಹಕ್ಕು ಮಗನಿಗೆ ಇದೆ. ತಾತ ಭೂಮಿಗೆ ಹಂಚಿಕೆ ಮಾಡಿದ ಬಳಿಕ ಜನಿಸಿದ ಮೊಮ್ಮಕ್ಕಳಿಗೆ ಈ ಭೂಮಿಯ ಮೇಲೆ ಜನ್ಮಸಿದ್ಧ ಹಕ್ಕು ಸಂಪೂರ್ಣವಾಗಿ ಅನ್ವಯ ಆಗೋದಿಲ್ಲ. ಇದರೊಂದಿಗೆ ಅರ್ಜಿದಾರರು ಸಲ್ಲಿಕೆ ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಸಿದೆ.














