- Home
- Karnataka Districts
- ಮಲೆನಾಡಿನ ಕಾಫಿ ತೋಟದ ಅಂಗಳದಲ್ಲಿ ಆನೆಗಳ ಗುಂಪಿನ ಚೆಲ್ಲಾಟ, ರೈತರಿಗೆ ತಪ್ಪುತ್ತಿಲ್ಲ ಗೋಳಾಟ
ಮಲೆನಾಡಿನ ಕಾಫಿ ತೋಟದ ಅಂಗಳದಲ್ಲಿ ಆನೆಗಳ ಗುಂಪಿನ ಚೆಲ್ಲಾಟ, ರೈತರಿಗೆ ತಪ್ಪುತ್ತಿಲ್ಲ ಗೋಳಾಟ
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸತ್ತಿಹಳ್ಳಿ ಗ್ರಾಮಕ್ಕೆ ಎರಡು ಕಾಡಾನೆಗಳು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಮನೆ ಅಂಗಳಕ್ಕೂ ನುಗ್ಗಿ ಕಾಂಪೌಂಡ್ ಧ್ವಂಸಗೊಳಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜನರಿಗೆ ಎಚ್ಚರಿಕೆ ನೀಡಿದೆ.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಾಂದಿ ಸಮೀಪದ ಸತ್ತಿಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಮಲೆನಾಡಿನ ಭಾಗಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ಇದೀಗ ಗ್ರಾಮ ಪ್ರದೇಶಗಳಲ್ಲಿಯೇ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲೂ ಭಯದ ವಾತಾವರಣ ಸೃಷ್ಟಿಸಿದೆ.
ಗ್ರಾಮದಲ್ಲಿ ಕಾಡಾನೆಗಳ ಸಂಚಾರ :
ಸತ್ತಿಹಳ್ಳಿಯಲ್ಲಿ ಎರಡು ಕಾಡಾನೆಗಳು ಗ್ರಾಮಕ್ಕೆ ನುಗ್ಗಿ, ಕಾಫಿ ತೋಟ ಮತ್ತು ಅಡಿಕೆ ತೋಟಗಳನ್ನು ಹಾನಿಗೊಳಿಸಿದಷ್ಟೇ ಅಲ್ಲದೆ, ಮನೆ ಅಂಗಳಕ್ಕೂ ಪ್ರವೇಶಿಸಿ ಕಾಂಪೌಂಡ್ ನ್ನು ಧ್ವಂಸಗೊಳಿಸಿವೆ. ಗ್ರಾಮದ ರಸ್ತೆಯಲ್ಲೇ ಎರಡು ಕಾಡಾನೆಗಳು ಸಂಚರಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನರ್ಸರಿಯಲ್ಲಿ ಸಂಚಾರ :
ಸತ್ತಿಹಳ್ಳಿ ಗ್ರಾಮದ ಕೃಷ್ಣ ಎಂಬವರಿಗೆ ಸೇರಿದ ಕಾಫಿ ನರ್ಸರಿಯಲ್ಲಿ ಕಾಡಾನೆಗಳು ಮನಸೋ ಇಚ್ಛೆ ಸಂಚರಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ನರ್ಸರಿ ಗಿಡಗಳನ್ನು ನಾಶಪಡಿಸಿವೆ.ಈ ಘಟನೆ ನಂತರ ಗ್ರಾಮಸ್ಥರಲ್ಲಿ ಭೀತಿ ಹೆಚ್ಚಾಗಿದೆ.ಘಟನೆ ತಿಳಿದ ತಕ್ಷಣ ಮೂಡಿಗೆರೆ ಹಾಗೂ ಆಲ್ದೂರು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜೊತೆಗೆ ಗ್ರಾಮಸ್ಥರಿಗೆ ಎಚ್ಚರಿಕೆ ಸಂದೇಶ ನೀಡಿರುವ ಅರಣ್ಯ ಇಲಾಖೆ, ಕಾಡಾನೆಗಳು ಇನ್ನೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸಾಧ್ಯತೆ ಇರುವುದರಿಂದ ರಾತ್ರಿ ಸಮಯದಲ್ಲಿ ಅನಾವಶ್ಯಕವಾಗಿ ಹೊರಗೆ ತಿರುಗಾಡಬಾರದು ಎಂದು ಸೂಚಿಸಿದೆ.ಸ್ಥಳೀಯರು ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳನ್ನು ಕಾಡಿನತ್ತ ಹಿಮ್ಮೆಟ್ಟಿಸುವಂತೆ ಹಾಗೂ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

