ಭಟ್ಕಳದಲ್ಲಿ ಜಲಸಮಾಧಿಯಾದ 11 ಮೀನುಗಾರರ ಕುಟುಂಬಗಳಿಗೆ ಸರ್ಕಾರ ಹಾಗೂ ಸಚಿವ ಮಂಕಾಳು ವೈದ್ಯರಿಂದ ಬೃಹತ್ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಸಚಿವರು ವೈಯಕ್ತಿಕವಾಗಿ ಅನಾಥ ಮಕ್ಕಳ ಶಿಕ್ಷಣದ ಜವಾಬ್ದಾರಿ ಹಾಗೂ ಕುಟುಂಬಗಳಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ.
ಭಟ್ಕಳ (ಮೇ.29): ಕಳಿನಡ ತೆಗೆಯಲು ಹೋಗಿ ಜಲಸಮಾಧಿಯಾಗಿದ್ದ 11 ಮೀನುಗಾರರ ಕುಟುಂಬಗಳ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ವೈಯಕ್ತಿಕ ಮಟ್ಟದಲ್ಲಿ ಬೃಹತ್ ಮೊತ್ತದ ಆರ್ಥಿಕ ನೆರವು ಮತ್ತು ಪುನರ್ವಸತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಮತ್ತು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಇಂದು ಮೃತರ ಮನೆಗಳಿಗೆ ಭೇಟಿ ನೀಡಿ ಅಧಿಕೃತವಾಗಿ ಪರಿಹಾರದ ಚೆಕ್‌ಗಳನ್ನು ಹಸ್ತಾಂತರಿಸಿದರು.
ಪ್ರತಿ ಕುಟುಂಬಕ್ಕೆ ಒಟ್ಟು ₹16.50 ಲಕ್ಷ ರೂಪಾಯಿ ಆಸರೆ
ಮೃತಪಟ್ಟ ಮೀನುಗಾರರ ಕುಟುಂಬಗಳು ಬೀದಿಗೆ ಬೀಳಬಾರದು ಎಂಬ ನಿಟ್ಟಿನಲ್ಲಿ ವಿವಿಧ ಮೂಲಗಳಿಂದ ಒಟ್ಟುಗೂಡಿಸಿ ಬೃಹತ್ ಮೊತ್ತದ ಆರ್ಥಿಕ ಸಹಾಯವನ್ನು ಇವತ್ತು ಹಸ್ತಾಂತರಿಸಲಾಯಿತು. ಸರ್ಕಾರದ ವತಿಯಿಂದ ತಲಾ ₹5 ಲಕ್ಷ ರೂಪಾಯಿ ಪರಿಹಾರ, ಸಚಿವ ಮಂಕಾಳ ವೈದ್ಯ ಅವರ ಮೀನುಗಾರಿಕಾ ಇಲಾಖೆಯಿಂದ ತಲಾ ₹10 ಲಕ್ಷ ರೂಪಾಯಿ ಆರ್ಥಿಕ ನೆರವು ಅದರೊಂದಿಗೆ ಸಚಿವರು ವೈಯಕ್ತಿಕವಾಗಿ ತಲಾ ₹1 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಅದರೊಂದಿಗೆ ಮಂಕಾಳು ವೈದ್ಯ ಅಧ್ಯಕ್ಷರಾಗಿರುವ ಜನತಾ ಸಹಕಾರ ಬ್ಯಾಂಕ್‌ನಿಂದ ತಲಾ ₹50 ಸಾವಿರ ರೂಪಾಯಿ ಸಹಾಯಧನ ನೀಡಲಾಗಿದೆ.
ಅನಾಥ ಮಕ್ಕಳ ಶಿಕ್ಷಣ ಜವಾಬ್ದಾರಿ ನನ್ನದು: ಸಚಿವ ಮಂಕಾಳು ವೈದ್ಯ ಭಾವುಕ
ಪರಿಹಾರ ಚೆಕ್ ವಿತರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಂಕಾಳು ವೈದ್ಯ ಅವರು ಅತ್ಯಂತ ಮಾನವೀಯ ನಿರ್ಧಾರಗಳನ್ನು ಪ್ರಕಟಿಸಿದರು. 'ಈ ಘಟನೆಯಿಂದಾಗಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿಯನ್ನು ವೈಯಕ್ತಿಕವಾಗಿ ನಾನೇ ವಹಿಸಿಕೊಳ್ಳುತ್ತಿದ್ದೇನೆ. ಆ ಮಕ್ಕಳು ದೇಶದ ಯಾವುದೇ ಮೂಲೆಯಲ್ಲಿ ಎಲ್ಲಿಯವರೆಗೆ ಓದುತ್ತಾರೋ, ಅಲ್ಲಿಯ ತನಕ ಅವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ..' ಎಂದು ಭರವಸೆ ನೀಡಿದರು.
ಉದ್ಯೋಗಾವಕಾಶ ಮತ್ತು ಸ್ವಂತ ಮನೆ ನಿರ್ಮಾಣದ ಭರವಸೆ!
ದುರಂತದಲ್ಲಿ ಪೋಷಕರನ್ನು ಕಳೆದುಕೊಂಡು ನಿರಾಶ್ರಿತರಾದ ಮಕ್ಕಳಿಗೆ ತಕ್ಷಣಕ್ಕೆ ತಂಗಲು ವ್ಯವಸ್ಥೆ ಕಲ್ಪಿಸಲು ಮತ್ತು ಮನೆ ಕಟ್ಟಿಕೊಳ್ಳಲು ಸಚಿವರು ವೈಯಕ್ತಿಕವಾಗಿ ₹5 ಲಕ್ಷ ರೂಪಾಯಿ ಪ್ರತ್ಯೇಕ ನೆರವು ನೀಡಿದ್ದಾರೆ. ಇದರೊಂದಿಗೆ, ಈ ವರ್ಷವೇ ಅವರಿಗೆ ಅತ್ಯಾಧುನಿಕವಾದ ಒಂದು ಸುಸಜ್ಜಿತ ಸ್ವಂತ ಮನೆಯನ್ನು ತಮ್ಮದೇ ಸ್ವಂತ ಖರ್ಚಿನಲ್ಲಿ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು. ಜೊತೆಗೆ, ಸಂಕಷ್ಟದಲ್ಲಿರುವ ಈ ಕುಟುಂಬಗಳ ಅರ್ಹ ಸದಸ್ಯರಿಗೆ ಸ್ಥಳೀಯ ಸಹಕಾರಿ ಬ್ಯಾಂಕ್‌ಗಳಲ್ಲಿ ಗೌರವಯುತವಾದ ಉದ್ಯೋಗ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಈ ಬಾರಿ ಜನ್ಮದಿನ ಆಚರಣೆಯಿಲ್ಲ!
ಕ್ಷೇತ್ರದ ಜನರ ನೋವಿನಲ್ಲಿ ಭಾಗಿಯಾಗಿರುವ ಸಚಿವ ಮಂಕಾಳು ವೈದ್ಯ ಅವರು ಇದೇ ಬರುವ ಜೂನ್ 5 ರಂದು ಇರುವ ತಮ್ಮ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ತಮ್ಮ ತಾಲೂಕಿನ 11 ಜನ ಜೀವ ಕಳೆದುಕೊಂಡಿರುವಾಗ ಸಂಭ್ರಮ ಆಚರಿಸುವುದು ಸರಿಯಲ್ಲ, ಹೀಗಾಗಿ ಈ ವರ್ಷ ಯಾವುದೇ ಕಾರಣಕ್ಕೂ ಹುಟ್ಟುಹಬ್ಬದ ಆಚರಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.


