leopard Vs Porcupine: ಮುಳ್ಳಹಂದಿ ಜೊತೆ ಕಾದಾಟಕ್ಕಿಳಿದು ಜೀವ ಕಳಕೊಂಡ ಚಿರತೆ!
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮುಳ್ಳಹಂದಿ ಬೇಟೆಯಾಡಲು ಮುಂದಾಗಿ ಅದರೊಂದಿಗೆ ಕಾದಾಟಕ್ಕಿಳಿದು ಸಾವನ್ನಪ್ಪಿರಬಹುದು ಎಂದ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಚಾಮರಾಜನಗರ ಚಿರತೆ ಕಳೆಬರ ಪತ್ತೆ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಎರಡು ಮೂರು ವರ್ಷ ಪ್ರಾಯದ ಚಿರತೆ ಕಳೆಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮುಳ್ಳಹಂದಿ ಬೇಟೆಯಾಡಲು ಮುಂದಾಗಿ ಅದರೊಂದಿಗೆ ಕಾದಾಟಕ್ಕಿಳಿದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿರಬಹುದು ಎಂದ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಮುಳ್ಳುಹಂದಿ ಜೊತೆ ಕಾದಾಟದಿಂದ ಜೀವ ಕಳೆದುಕೊಳ್ತಾ ಚಿರತೆ?
ಚಿರತೆ ಸುಮಾರು ಎರಡರಿಂದ ಮೂರು ವರ್ಷದ್ದಾಗಿದೆ. ಆಗಾಗ ಗುಂಡ್ಲುಪೇಟೆ ಪಟ್ಟಣದ ಶ್ರೀರಾಮಗುಡ್ಡದ ಬಳಿ ಸಂಚರಿಸುತ್ತಿತ್ತು. ಹೀಗೆ ಸಂಚರಿಸುವ ವೇಳೆಯೇ ಮುಳ್ಳುಹಂದಿ ಬೇಟೆಯಾಡಲು ಮುಂದಾಗಿ ಪ್ರಾಣವೇ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೆ ಇಂಬು ಕೊಡುವಂತೆ ಚಿರತೆ ಕಳೇಬರ ಪತ್ತೆಯಾದ ಸ್ಥಳದಲ್ಲಿ ಮುಳ್ಳುಹಂದಿಯ ಮುಳ್ಳುಗಳು ಪತ್ತೆಯಾಗಿವೆ. ಮುಳ್ಳುಹಂದಿಯನ್ನು ಬೇಟೆಯಾಡಲು ಯತ್ನಿಸಿರುವ ಸಾಧ್ಯತೆ ಇದೆ. ಈ ವೇಳೆ ಮುಳ್ಳುಹಂದಿಯೊಂದಿಗೆ ಕಾದಾಟ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಚೇತರಿಸಿಕೊಳ್ಳಲಾಗದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಅಂಗಾಂಗ ಮಾದರಿ ಎಫ್ಎಸ್ಎಲ್ ಗೆ ರವಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂಡೀಪುರ ಅರಣ್ಯಾಧಿಕಾರಿಗಳು ದೌಡಾಯಿಸಿ ಪರಿಶಿಲನೆ ನಡೆಸಿದ್ದಾರೆ. ಸದ್ಯ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅಂಗಾಂಗ ಮಾದರಿ ಪರೀಕ್ಷೆಗೆ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ.

