ಖಾನಾಪುರ ತಾಲೂಕಿನ ಗುಂಜಿ ಗ್ರಾಮದಲ್ಲಿ, ಮನೆಯೊಂದರ ಶೌಚಾಲಯದಲ್ಲಿ ರಾತ್ರಿಯಿಡೀ ಅಡಗಿದ್ದ ಚಿರತೆಯೊಂದು ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆ ದಾಳಿಗೆ ಯತ್ನಿಸಿದೆ. ಅದೃಷ್ಟವಶಾತ್ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬೆಳಗಾವಿ (ಜು.27): ಖಾನಾಪುರ ತಾಲೂಕಿನ ಗುಂಜಿ ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಅಡ್ಡಾಡುತ್ತಿದ್ದ ಚಿರತೆಯೊಂದು ರಾತ್ರೋರಾತ್ರಿ ಮನೆಯೊಂದರ ಒಳಗೆ ಅಡಗಿ ಕುಳಿತು, ಭಾನುವಾರ ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆಯೇ ದಾಳಿಗೆ ಯತ್ನಿಸಿದ ಭೀಕರ ಘಟನೆ ನಡೆದಿದೆ. ಅದೃಷ್ಟವಶಾತ್ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ತೀವ್ರವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ಗುಂಜಿ ಗ್ರಾಮದ ಸ್ಟೇಷನ್ ರಸ್ತೆಯಲ್ಲಿರುವ ಪ್ರಸಾದ್ ಗಾಡಿ ಎಂಬುವವರ ಮನೆಗೆ ಸೇರಿಕೊಂಡಿದ್ದ ಹೊಸದಾಗಿ ನಿರ್ಮಿಸಲಾದ ಬಾತ್‌ರೂಮ್‌ ಒಳಗೆ ರಾತ್ರಿ ವೇಳೆಯಲ್ಲಿ ನುಗ್ಗಿದ್ದ ಚಿರತೆ, ಬೆಳಗಿನವರೆಗೂ ಅಲ್ಲೇ ಯಾರಿಗೂ ತಿಳಿಯದಂತೆ ಅಡಗಿಕೊಂಡಿತ್ತು. ಚಿರತೆ ಅಡಗಿರುವುದು ತಿಳಿಯದ ಕುಟುಂಬಸ್ಥರು ತಮ್ಮ ನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಳಿಗ್ಗೆ ಸುಮಾರು 6 ಗಂಟೆಗೆ ಪ್ರಸಾದ್ ಗಾಡಿ ಅವರು ಕೊಟ್ಟಿಗೆಯಲ್ಲಿದ್ದ ಹಸು ಹಾಗೂ ಎಮ್ಮೆಗಳನ್ನು ಹೊರಗೆ ತಂದು ಕಟ್ಟಿದ್ದರು. ಈ ವೇಳೆ ಕುಟುಂಬದ ಸದಸ್ಯರು, ನೆರೆಹೊರೆಯವರು ಹಾಗೂ ಮಕ್ಕಳು ಮನೆಯ ಅಂಗಳದಲ್ಲೇ ಓಡಾಡುತ್ತಿದ್ದರು. ಕೆಲವು ಮಕ್ಕಳು ಚಿರತೆ ಅಡಗಿದ್ದ ಜಾಗದಿಂದ ಕೇವಲ ಕೆಲವೇ ಅಡಿಗಳ ಅಂತರದಲ್ಲಿ ಬಟ್ಟೆ ತೊಳೆಯುತ್ತಿದ್ದರು ಎನ್ನಲಾಗಿದೆ.

ಕೂದಲೆಳೆಯ ಅಂತರದಲ್ಲಿ ಪಾರಾದ ಗೃಹಿಣಿ!

ಬೆಳಿಗ್ಗೆ ಸುಮಾರು 8 ಗಂಟೆಯ ವೇಳೆಗೆ ಪ್ರಸಾದ್ ಗಾಡಿ ಅವರ ಪತ್ನಿ ಹುಲ್ಲು ತರಲು ಶೌಚಾಲಯದ ಬಳಿ ಹೋದಾಗ ಭಾರಿ ದುರಂತವೊಂದು ತಪ್ಪಿದೆ. ಮಹಿಳೆ ಒಳಗೆ ಕೈಚಾಚುತ್ತಿದ್ದಂತೆಯೇ ಅಡಗಿದ್ದ ಚಿರತೆ ಏಕಾಏಕಿ ಗುರ್ Gurr ಎಂದು ಘರ್ಜಿಸಿ, ಆಕೆಯತ್ತ ಪಂಜ ಚಾಚಿ ದಾಳಿಗೆ ಯತ್ನಿಸಿದೆ. ತಕ್ಷಣವೇ ಸಮಯಪ್ರಜ್ಞೆಯಿಂದ ಹಿಂದೆ ಜಿಗಿದ ಮಹಿಳೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಕೂಡಲೇ ಮನೆಯವರನ್ನು ಮತ್ತು ನೆರೆಹೊರೆಯವರನ್ನು ಎಚ್ಚರಿಸಿದ್ದಾರೆ. ತಕ್ಷಣವೇ ಶೌಚಾಲಯದಿಂದ ಹೊರಬಂದ ಚಿರತೆ, ಕಾಂಪೌಂಡ್ ಗೋಡೆ ಜಿಗಿದು ಹತ್ತಿರದ ಪೊದೆಗಳೊಳಗೆ ಓಡಿ ಕಣ್ಮರೆಯಾಗಿದೆ.

ಹಸು, ಎಮ್ಮೆ ಹಾಗೂ ಕರುಗಳನ್ನು ಕಟ್ಟಿದ್ದ ತೆರೆದ ಕೊಟ್ಟಿಗೆಯ ಪಕ್ಕದಲ್ಲೇ ಇಡೀ ರಾತ್ರಿ ಕಳೆದಿದ್ದರೂ, ಚಿರತೆ ಯಾವುದೇ ಜಾನುವಾರುಗಳ ಮೇಲೆ ದಾಳಿ ನಡೆಸದಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಚಿರತೆ ತುಂಬಾ ಕ್ಷೀಣವಾಗಿ ಹಾಗೂ ನಿಶಕ್ತವಾಗಿ ಕಂಡುಬಂದಿದ್ದು, ಕಾಂಪೌಂಡ್ ಗೋಡೆ ಏರುವಾಗ ತೂರಾಡಿದೆ. ಹೀಗಾಗಿ ಚಿರತೆಗೆ ಗಾಯಗಳಾಗಿರಬಹುದು ಅಥವಾ ಅನಾರೋಗ್ಯದಿಂದ ಬಳಲುತ್ತಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಬೋನು ಅಳವಡಿಸಿದ ಅರಣ್ಯ ಇಲಾಖೆ

ಕಳೆದ ಹದಿನೈದು ದಿನಗಳಿಂದ ಗುಂಜಿ ಗ್ರಾಮದ ಮೌಳಿ ದೇವಸ್ಥಾನ ಹಾಗೂ ಗ್ರಾಮ ಪಂಚಾಯತಿ ಕಚೇರಿ ಸೇರಿದಂತೆ ವಿವಿಧೆಡೆ ಈ ಚಿರತೆ ಪದೇ ಪದೆ ಕಾಣಿಸಿಕೊಳ್ಳುತ್ತಿತ್ತು. ಈಗಾಗಲೇ ಇದು ಕೆಲವು ಬೀದಿ ನಾಯಿಗಳನ್ನು ಕೊಂದಿದ್ದು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಅಪಾಯವನ್ನುಂಟುಮಾಡಬಹುದು ಎಂದು ಗ್ರಾಮಸ್ಥರು ಭೀತಿ ವ್ಯಕ್ತಪಡಿಸಿದ್ದಾರೆ.

ಚಿರತೆಯನ್ನು ತಕ್ಷಣವೇ ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಬಸವರಾಜ ವಲದ ಪ್ರತಿಕ್ರಿಯಿಸಿ, "ಸ್ಥಳದಲ್ಲಿ ಗಸ್ತು ಪಡೆಯನ್ನು ನಿಯೋಜಿಸಲಾಗಿದೆ, ಕಣ್ಗಾವಲು ಹೆಚ್ಚಿಸಲಾಗಿದ್ದು ಚಿರತೆ ಸೆರೆಗೆ ಬೋನುಗಳನ್ನು ಅಳವಡಿಸಲಾಗಿದೆ," ಎಂದು ತಿಳಿಸಿದ್ದಾರೆ. ಅಲ್ಲದೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಮತ್ತು ಚಿರತೆ ಮತ್ತೆ ಎಲ್ಲಾದರೂ ಕಂಡುಬಂದರೆ ತಕ್ಷಣವೇ ಮಾಹಿತಿ ನೀಡಬೇಕು ಎಂದು ಇಲಾಖೆ ಮನವಿ ಮಾಡಿದೆ.