ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ: ವಧುವಿನ ಅಚ್ಚರಿಯ ದೃಢ ನಡೆ!
ಕೊಳ್ಳೇಗಾಲದಲ್ಲಿ ಮದುವೆಯ ದಿನದಂದೇ ಪರೀಕ್ಷೆ ಬರೆದ ವಧು. ತಾಳಿ ಕಟ್ಟಿದ ಕೂಡಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮತ್ತೆ ಮದುವೆ ಮಂಟಪಕ್ಕೆ ಬಂದ ಸಂಗೀತಾ. ವಿದ್ಯಾಭ್ಯಾಸ ಮತ್ತು ಮದುವೆ ಎರಡನ್ನೂ ನಿಭಾಯಿಸಿದ ವಧುವಿನ ಕಥೆ.

ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ: ಆ ಕಲ್ಯಾಣ ಮಂಟಪದಲ್ಲಿ ಜೋಡಿಯೊಂದರ ಮದುವೆ ನಡೀತಾ ಇತ್ತು. ನಿಗಧಿತ ಶುಭ ಮುಹೂರ್ತದಲ್ಲಿ ವರ ತಾಳಿ ಕಟ್ಟುತ್ತಿದ್ದಂತೆ ನವ ವಧು ಎದ್ದೆನೋ ಬಿದ್ದೆನೋ ಎಂಬಂತೆ ಹಸೆಮಣೆ ಹೊರಗೆ ಹೋದವಳೆ ಮೂರು ಗಂಟೆ ಕಾಲ ಬರಲೆ ಇಲ್ಲ. ಇಡೀ ಕಲ್ಯಾಣಮಂಟಪದಲ್ಲಿ ಜನ ವಧುವಿಗೋಸ್ಕರ ಕಾಯ್ತಾ ಇದ್ದರು. ಹಸೆಮಣೆಯಿಂದ ಆಕೆ ಹೋದದ್ದಾರು ಎಲ್ಲಿಗೆ? ಕೊನೆಗೆ ಏನಾಯ್ತು ಈ ಸ್ಟೋರಿ ನೋಡಿ?
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಮಂಟೇಶ್-ಅನುಸೂಯ ದಂಪತಿ ಪುತ್ರಿ ಆರ್ ಸಂಗೀತಾಳಿಗೆ ಉನ್ನತ ಶಿಕ್ಷಣ ಪಡೆಯಬೇಕು, ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಬೇಕು ಹಂಬಲ. ಅದಕ್ಕಾಗಿ ಭರ್ಜರಿ ತಯಾರಿಯನ್ನೇ ನಡೆಸಿದ್ದಳು. ಕೊಳ್ಳೇಗಾಲದ ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ಬಿ ಕಾಂ ವ್ಯಾಸಂಗ ಮಾಡುತ್ತಿದ್ದ ಸಂಗೀತಾಳಿಗೆ 20 ವರ್ಷ ತುಂಬಿದ್ದರಿಂದ ಮದುವೆ ಮಾಡಿ ಜವಬ್ದಾರಿ ಮುಗಿಸಬೇಕು ಎಂಬುದು ತಂದೆ ತಾಯಿಯ ಆಸೆ. ಕೊನೆಗೆ ನಂಜನಗೂಡು ತಾಲೋಕು ಸಿಂಧುವಳ್ಳಿ ಗ್ರಾಮದ ಯೋಗೀಶ್ ಎಂಬ ಯುವಕನ ಜೊತೆ ಸಂಗೀತಾಳ ಮದುವೆ ಫಿಕ್ಸ್ ಆಗಿಯೇ ಹೋಯ್ತು. ಮೇ 22 ರಂದು ಅಂದರೆ ಇಂದು ವಿವಾಹ ಮಹೋತ್ಸವ ನೆರವೇರಿಸಲು ಆರು ತಿಂಗಳ ಹಿಂದೆಯೇ ಎರಡು ಕಡೆಯವರು ನಿರ್ಧರಿಸಿದ್ದರು. ಈ ನಡುವೆ ಅಂತಿಮ ಬಿ.ಕಾಂ ನ ಇನ್ಕಂ ಟ್ಯಾಕ್ಸ್ ವಿಷಯದ ಪರೀಕ್ಷೆಯು ಸಹ ಇದೇ ದಿನ ನಿಗಧಿಯಾಗಿತ್ತು.
ಒಂದು ಕಡೆ ಮದುವೆ ಇನ್ನೊಂದು ಕಡೆ ಪರೀಕ್ಷೆ ಎರಡನ್ನೂ ನಿಭಾಯಿಸಲು ಸಜ್ಜಾದ ಸಂಗೀತ ಇಂದು ತಮ್ಮ ಕುತ್ತಿಗೆಗೆ ತಾಳಿ ಬೀಳುತ್ತಿದ್ದಂತೆ ಪತಿ ಹಾಗೂ ತಂದೆ ತಾಯಿಯ ಪರ್ಮಿಷನ್ ಪಡೆದು ಹಸೆಮಣೆಯಿಂದ ನೇರವಾಗಿ ಹೋಗಿದ್ದು ಪರೀಕ್ಷಾ ಕೇಂದ್ರಕ್ಕೆ. ಮದುವೆ ಮಂಟಪದಿಂದ ವಧು ಹೊರ ಹೋಗುತ್ತಿದ್ದಂತೆ ಮದುವೆಗೆ ಬಂದಿದ್ದ ನೆಂಟರಿಷ್ಟರಿಗೆ ಬಂದು ಬಳಗದವರಿಗೆ ಆಕೆ ಎಲ್ಲಿಗೆ ಹೋದಳು ಎಂಬುದು ಗೊತ್ತಾಗದೆ ಕೆಲ ಕಾಲ ಗಾಬರಿಯಾಗಿದ್ದರು. ಪರೀಕ್ಷೆ ಬರೆದ ಸಂಗೀತಾ ಮತ್ತೆ ಮದುವೆ ಮಂಟಪಕ್ಕೆ ಬರುತ್ತಿದ್ದಂತೆ ಅಸಲಿ ವಿಚಾರ ಗೊತ್ತಾಗಿ ನಿಟ್ಟುಸಿರು ಬಿಟ್ಟರು. ಇವತ್ತು ಪರೀಕ್ಷೆ ಬರೆಯದಿದ್ದರೆ ಒಂದು ವರ್ಷ ವ್ಯರ್ಥ ಆಗುತ್ತೆ, ಮದುವೆಯಷ್ಟೇ ನನ್ನ ಕೆರಿಯರ್ ಕೂಡ ಹಾಗಾಗಿ ಇವತ್ತೇ ಪರೀಕ್ಷೆ ಬರೆದೆ ಎನ್ನುತ್ತಾರೆ ಸಂಗೀತಾ.
ಇವತ್ತು ಬರೆಯಲೇ ಬೇಕೆಂಬ ಸಂಗೀತಾ ಅವರ ಹಂಬಲಕ್ಕೆ ಪತಿ ಹಾಗೂ ಅವರ ತಂದೆ ತಾಯಿ ಸಾಥ್ ನೀಡಿದ್ದಾರೆ. ಮದುವೆ ಸಂಭ್ರಮದ ನಡುವೆಯು ಪರೀಕ್ಷೆ ಬರೆದ ಸಂಗೀತಾಳ ನಡೆಯಿಂದ ಸಂತಸಗೊಂಡಿದ್ದಾರೆ. ಕೆಲವರು ಮದುವೆ ಮಂಟಪದಿಂದ ಬಂದು ಓಟ್ ಮಾಡಿರೋದನ್ನ ನೋಡಿದ್ದೇವೆ, ತಂದೆ ಅಥವಾ ತಾಯಿ ನಿಧನರಾದ ದುಃಖದ ನಡುವೆಯು ಕೆಲವು ಮಕ್ಕಳ ಪರೀಕ್ಷೆ ಬರೆದಿರೋದನ್ನೂ ನೋಡಿದ್ದವೆ. ಇದೀಗ ತಾಳಿ ಮದುವೆ ಸಂಭ್ರಮದ ನಡುವೆಯು ಪರೀಕ್ಷೆ ಬರೆಯುವ ಮೂಲಕ ಸಂಗೀತಾ ಎಲ್ಲರ ಗಮನ ಸೆಳೆದಿದ್ದಾರೆ.
