- Home
- Karnataka Districts
- Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!
ರಾಜ್ಯದಲ್ಲಿ ಈಶಾನ್ಯ ಮಾರುತದ ಪ್ರಭಾವದಿಂದಾಗಿ ಚಳಿಯ ತೀವ್ರತೆ ಹೆಚ್ಚಾಗಿದೆ. ಹವಾಮಾನ ಇಲಾಖೆಯು ಬೆಂಗಳೂರಿನಲ್ಲಿ ಕಳೆದ 9 ವರ್ಷಗಳಲ್ಲಿಯೇ ದಾಖಲೆಯ ಚಳಿ ಉಂಟಾಗುವ ಮುನ್ಸೂಚನೆ ನೀಡಿದ್ದು, ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ.

ಹಿಂದೆಂದಿಗಿಂತಲೂ ಹೆಚ್ಚು ಚಳಿ
ಇದಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಚಳಿಯ ವಾತಾವರಣ ಇರುವುದನ್ನು ನೋಡಬಹುದು. ಅದರಲ್ಲಿಯೂ ಕೆಲವು ದಿನಗಳಿಂದ ಈಶಾನ್ಯ ಮಾರುತ ರಾಜ್ಯಕ್ಕೆ ಅಪ್ಪಳಿಸಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಚಳಿಯ ಮುನ್ಸೂಚನೆ ನೀಡಲಾಗಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ, ಕಳೆದ ಒಂಬತ್ತು ವರ್ಷಗಳಲ್ಲಿಯೇ ದಾಖಲೆಯ ಚಳಿ ಎದುರಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರಿನಲ್ಲಿ ವಿಪರೀತ ಚಳಿ
ಮುಂದಿನ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ವಿಪರೀತ ಚಳಿ ಇರಲಿದ್ದು, ಕಳೆದ ವಾರದಿಂದ 16 ಡಿಗ್ರಿ ಸೆಲ್ಸಿಯಸ್‌ಗೆ ಹತ್ತಿರದಲ್ಲಿರುವ ಕನಿಷ್ಠ ತಾಪಮಾನವು ಮುಂದಿನ ವಾರ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
2016ರಲ್ಲೂ ಆಗಿತ್ತು!
2016ರ ಡಿಸೆಂಬರ್ 11ರಂದು ಬೆಂಗಳೂರಿನ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಇದು 2011ರಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನವಾಗಿದೆ. ಅದರ ಬಳಿಕ ಇದೀಗ ರಾಜ್ಯ ಅದರಲ್ಲಿಯೂ ಬೆಂಗಳೂರು ಇಂಥ ತಾಪಮಾನ ಕಾಣಲಿದೆ.
ಮಂಜು ಕವಿದ ವಾತಾವರಣ
ಬೆಂಗಳೂರಿನಲ್ಲಿ ತಾಪಮಾನವು ತುಂಬಾ ಕಡಿಮೆಯಾಗದಿದ್ದರೂ, ಬೆಳಿಗ್ಗೆ ಮಂಜು ಕವಿದ ವಾತಾವರಣದೊಂದಿಗೆ ಅದು ಇನ್ನೂ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಐಎಂಡಿ ದತ್ತಾಂಶದ ಪ್ರಕಾರ, ಡಿಸೆಂಬರ್‌ನಲ್ಲಿ ಬೆಂಗಳೂರಿನ ಸರಾಸರಿ ಕನಿಷ್ಠ ತಾಪಮಾನ 16.4 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
12- 14ರ ಮಧ್ಯೆ ಚಳಿ
ಮೊನ್ನೆ ಭಾನುವಾರ, ಭಾನುವಾರ, ಬೆಂಗಳೂರಿನ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ವಾರ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ ಮತ್ತು 14 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಈಶಾನ್ಯ ಮಾರುತಗಳು, ಸ್ಪಷ್ಟ ಆಕಾಶ, ಒಣ ಗಾಳಿ ಮತ್ತು ಸ್ಥಿರವಾದ ಗಾಳಿಯಿಂದಾಗಿ ಚಳಿ ಹೆಚ್ಚಾಗಿ ಉಂಟಾಗುತ್ತದೆ ಎಂದು ಇಲಾಖೆ ಹೇಳಿದೆ.
ಶೀತಲಗಾಳಿ
ಇನ್ನು, ಉತ್ತರ ಹಾಗೂ ದಕ್ಷಿಣ ಭಾರತದೆಲ್ಲಡೆ ಶೀತಗಾಳಿ ಬೀಸುವ ಸಾಧ್ಯತೆಯೂ ಹೆಚ್ಚಾಗಿದೆ. ಈ ವಾರ ಶೀತಗಾಳಿ ಹೆಚ್ಚಾಗಲಿದ್ದು, ಮುಂದಿನ ವಾರ ಸಾಮಾನ್ಯ ಚಳಿಗಾಲದ ತಾಪಮಾನ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಶಾನ್ಯ ಮಾರುತ ಬರುವುದು ಎಲ್ಲಿಂದ?
ಹಿಮಾಲಯ ಅಥವಾ ಧ್ರುವ ಪ್ರದೇಶಗಳಂಥ ಅತ್ಯಂತ ಎತ್ತರದ ಪ್ರದೇಶಗಳಿಂದ ಬೀಸುವ ಗಾಳಿಗೆ ಈಶಾನ್ಯ ಮಾರುತ ಎನ್ನುತ್ತಾರೆ. ಇದು ಸಹಜವಾಗಿ ಉತ್ತರ ಮತ್ತು ಪೂರ್ವ ದಿಕ್ಕಿನಿಂದ ಬೀಸುವ ಗಾಳಿಯಾಗಿದೆ. ಚಳಿಗಾಲದಲ್ಲಿ, ಈ ಮಾರುತವು ಉತ್ತರ ಭಾರತದ ಮೇಲಿರುವ ಬೆಚ್ಚಗಿನ ಗಾಳಿಯನ್ನು ಸ್ಥಳಾಂತರಿಸುತ್ತದೆ. ಇದರಿಂದಾಗಿ ತಾಪಮಾನದಲ್ಲಿ ಏಕಾಏಕಿ ಕುಸಿತ ಉಂಟಾಗುವುದರ ಪರಿಣಾಮ ಹೀಗೆ ಆಗುತ್ತದೆ ಎನ್ನುತ್ತಾರೆ ತಜ್ಞರು.

