- Home
- Karnataka Districts
- 2028ರ ಮಾರ್ಚ್‌ಗೆ 175 ಕಿಮೀಗೆ ನಮ್ಮ ಮೆಟ್ರೋ ಜಾಲ ವಿಸ್ತರಣೆ, ಆಗಸ್ಟ್ 15ಕ್ಕೆ ಪಿಂಕ್ ಲೈನ್, ನೀಲ ಮಾರ್ಗ ಟ್ರಯಲ್ ರನ್!
2028ರ ಮಾರ್ಚ್‌ಗೆ 175 ಕಿಮೀಗೆ ನಮ್ಮ ಮೆಟ್ರೋ ಜಾಲ ವಿಸ್ತರಣೆ, ಆಗಸ್ಟ್ 15ಕ್ಕೆ ಪಿಂಕ್ ಲೈನ್, ನೀಲ ಮಾರ್ಗ ಟ್ರಯಲ್ ರನ್!
ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, 'ನಮ್ಮ ಮೆಟ್ರೋ' ಜಾಲವು ಮಾರ್ಚ್ 2028ರ ವೇಳೆಗೆ 175 ಕಿಲೋಮೀಟರ್‌ಗೆ ವಿಸ್ತರಣೆಯಾಗಲಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚಿಸಲಾಗಿದ್ದು, 3ನೇ ಹಂತದ ಯೋಜನೆಗೂ ಕೇಂದ್ರದ ಅನುಮೋದನೆ ನಿರೀಕ್ಷೆ.

ಮಾರ್ಚ್ 2028ರ ವೇಳೆಗೆ ಒಟ್ಟು 175 ಕಿಲೋಮೀಟರ್‌ಗೆ ವಿಸ್ತರಣೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಪ್ರಮುಖ ಪರ್ಯಾಯ ಮಾರ್ಗವಾಗಿರುವ 'ನಮ್ಮ ಮೆಟ್ರೋ' ಜಾಲವು ಮುಂಬರುವ ಮಾರ್ಚ್ 2028ರ ವೇಳೆಗೆ ಒಟ್ಟು 175 ಕಿಲೋಮೀಟರ್‌ಗೆ ವಿಸ್ತರಣೆಯಾಗಲಿದೆ. ಇದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ
ಶುಕ್ರವಾರ ಬಿಎಂಆರ್‌ಸಿಎಲ್ (BMRCL) ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಈ ಮಹತ್ವದ ಮಾಹಿತಿ ನೀಡಿದರು. ಪ್ರಸ್ತುತ ರಾಜಧಾನಿಯಲ್ಲಿ 96 ಕಿ.ಮೀ ಉದ್ದದ ಮೆಟ್ರೋ ಜಾಲ ಕಾರ್ಯಾಚರಣೆಯಲ್ಲಿದ್ದು, ಸದ್ಯ ಪ್ರಗತಿಯಲ್ಲಿರುವ ಪಿಂಕ್ ಲೈನ್ ಮತ್ತು ಬ್ಲೂ ಲೈನ್ ಕಾರಿಡಾರ್‌ಗಳು ಸಂಪೂರ್ಣವಾಗಿ ಮುಕ್ತಾಯಗೊಂಡರೆ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.
ಆಗಸ್ಟ್ 15ಕ್ಕೆ ‘ಪಿಂಕ್ ಲೈನ್’ ಎತ್ತರಿಸಿದ ಮಾರ್ಗ ಮುಕ್ತ
ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಉದ್ದದ ಎತ್ತರಿಸಿದ ‘ಗುಲಾಬಿ ಮಾರ್ಗ’ (Pink Line) ಕಾಮಗಾರಿಯು ಜೂನ್ ತಿಂಗಳಿನಲ್ಲೇ ಮುಕ್ತಾಯಗೊಳ್ಳಬೇಕಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಇದನ್ನು ಮುಂಬರುವ ಆಗಸ್ಟ್ 15ರೊಳಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಇದೇ ಮಾರ್ಗದ ತಾವರೆಕೆರೆಯಿಂದ ನಾಗವಾರದವರೆಗಿನ 13.5 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ನಿಲ್ದಾಣಗಳ ಸಿವಿಲ್ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಪ್ರಸ್ತುತ ಟ್ರ್ಯಾಕ್ ಅಳವಡಿಕೆ ಮತ್ತು ಸಿಗ್ನಲಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಹಿಂದೆ ಈ ಸುರಂಗ ವಿಭಾಗಕ್ಕೆ ಡಿಸೆಂಬರ್ ಡೆಡ್‌ಲೈನ್ ನಿಗದಿಪಡಿಸಲಾಗಿತ್ತಾದರೂ, ಸಂಪೂರ್ಣ ಸಿದ್ಧತೆಯೊಂದಿಗೆ ಕಾರ್ಯಾಚರಣೆ ಆರಂಭಿಸಲು 2027ರ ಮಾರ್ಚ್‌ವರೆಗೆ ಕಾಲಾವಕಾಶ ನೀಡುವಂತೆ ಬಿಎಂಆರ್‌ಸಿಎಲ್ ಕೋರಿದೆ ಎಂದು ಸಚಿವರು ತಿಳಿಸಿದರು.
‘ಬ್ಲೂ ಲೈನ್’ ಪ್ರಾಯೋಗಿಕ ಸಂಚಾರಕ್ಕೆ ಆದೇಶ
ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕಾಳೇನ ಅಗ್ರಹಾರ-ನಾಗವಾರ ನಡುವಿನ ಒಟ್ಟು 21.25 ಕಿ.ಮೀ ಪಿಂಕ್ ಲೈನ್ ಹಾಗೂ ಕೆ.ಆರ್.ಪುರಂ-ಸಿಲ್ಕ್ ಬೋರ್ಡ್ (19.75 ಕಿ.ಮೀ) ಒಳಗೊಂಡ ನೀಲಿ ಮಾರ್ಗ (Blue Line 2A) ಮತ್ತು ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 2ಬಿ (2B) ಮಾರ್ಗಗಳ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ನಗರದಲ್ಲಿ ಮೆಟ್ರೊ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಪ್ರಗತಿ ಸಾಧಿಸದಿದ್ದರೆ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಟ್ರಯಲ್ ರನ್ ಆರಂಭ: ನೀಲಿ ಮಾರ್ಗ 2‘ಎ’ (ORR) ವ್ಯಾಪ್ತಿಯಲ್ಲಿ 3 ಪ್ರಮುಖ ನಿಲ್ದಾಣಗಳ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಆದ್ದರಿಂದ, ಇಡೀ ಮಾರ್ಗ ಒಟ್ಟಿಗೆ ಆರಂಭವಾಗುವವರೆಗೆ ಕಾಯದೆ, ಕೆ.ಆರ್.ಪುರದಿಂದ ಮಾರತ್ತಹಳ್ಳಿವರೆಗೆ ಹಾಗೂ ಮಾರತ್ತಹಳ್ಳಿಯಿಂದ ಎಚ್‌ಎಸ್‌ಆರ್ ಲೇಔಟ್‌ವರೆಗೆ ಹಂತ-ಹಂತವಾಗಿ ರೈಲುಗಳ ಪ್ರಾಯೋಗಿಕ ಸಂಚಾರ (Trial Run) ನಡೆಸಲು ಸೂಚನೆ ನೀಡಲಾಗಿದೆ.
ಕೆ.ಆರ್.ಪುರ-ಹೆಬ್ಬಾಳ ಸವಾಲು: ಕೆ.ಆರ್.ಪುರದಿಂದ ಹೆಬ್ಬಾಳದವರೆಗಿನ ಮಾರ್ಗದಲ್ಲಿ ಸಿವಿಲ್ ಕಾಮಗಾರಿಗಳನ್ನು ನಡೆಸಲು ಸಾಕಷ್ಟು ಭೌಗೋಳಿಕ ಮತ್ತು ತಾಂತ್ರಿಕ ಸವಾಲುಗಳಿವೆ. ಈ ಕಠಿಣ ಕಾಮಗಾರಿಯನ್ನು 2027ರ ಡಿಸೆಂಬರ್‌ಗೆ ಸಂಪೂರ್ಣವಾಗಿ ಮುಗಿಸಿಕೊಡುವುದಾಗಿ ಅಧಿಕಾರಿಗಳು ವಾಗ್ದಾನ ಮಾಡಿದ್ದಾರೆ.
ಹಂತ 3ರ ‘ಡಬಲ್ ಡೆಕ್ಕರ್ ಫ್ಲೈಓವರ್’ಗೆ ಕೇಂದ್ರದ ಒಪ್ಪಿಗೆ
ಜೆ.ಪಿ ನಗರದಿಂದ ಕೆಂಪಾಪುರ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಸ್ತುತ ಕೇಂದ್ರ ಸರ್ಕಾರದ ಹಂತದಲ್ಲಿದೆ. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನವದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಈ ಯೋಜನೆಗೆ ಶೀಘ್ರ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದಾರೆ.
"ಮೆಟ್ರೋ 3ನೇ ಹಂತದ ಡಬಲ್ ಡೆಕ್ಕರ್ (ರಸ್ತೆ ಮತ್ತು ಮೆಟ್ರೋ ಜಂಟಿ ಮೇಲ್ಸೇತುವೆ) ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಾಗಿ, ಕೇಂದ್ರದ ಸ್ವಾಯುತ್ತ ಸಂಸ್ಥೆಯಾದ 'ರೈಟ್ಸ್' (RITES) ಮೂಲಕ ಇದರ ತಾಂತ್ರಿಕ ಹಾಗೂ ಆರ್ಥಿಕ ಸಾಧ್ಯತೆಗಳ ಕುರಿತು ವರದಿ ಕೇಳಿದ್ದರು. ಕಳೆದ 4 ತಿಂಗಳಿಂದ ಈ ಅಧ್ಯಯನ ನಡೆಯುತ್ತಿದ್ದು, ಮುಂದಿನ 20 ದಿನಗಳಲ್ಲಿ ಅಂತಿಮ ವರದಿ ಕೈಸೇರಲಿದೆ. ಅದನ್ನು ತಕ್ಷಣವೇ ಕೇಂದ್ರಕ್ಕೆ ಸಲ್ಲಿಸಲಾಗುವುದು."
— ಕೃಷ್ಣಬೈರೇಗೌಡ, ಬೆಂಗಳೂರು ನಗರ ಅಭಿವೃದ್ಧಿ ಸಚಿವ
3ಎ ಹಂತದ ಯೋಜನೆ ಪ್ರಸ್ತಾಪಕ್ಕೆ DPR ಶೀಘ್ರ
ಅಲ್ಲದೆ, ನಗರದ ಪ್ರಮುಖ ಸಂಚಾರ ಕಾರಿಡಾರ್ ಆದ ಸರ್ಜಾಪುರ - ಹೆಬ್ಬಾಳವನ್ನು ಸಂಪರ್ಕಿಸುವ 3ಎ ಹಂತದ ಯೋಜನೆ ಪ್ರಸ್ತಾಪಕ್ಕೆ ಈಗಾಗಲೇ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರ ವಿಸ್ತೃತ ಯೋಜನಾ ವರದಿಯನ್ನು (DPR) ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಮುಂದಿನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಜೆ.ರವಿಶಂಕರ್ ಉಪಸ್ಥಿತರಿದ್ದು, ಕಾಮಗಾರಿಗಳ ತಾಂತ್ರಿಕ ವಿವರಗಳನ್ನು ಹಂಚಿಕೊಂಡರು.

