ಇಂದು ಸಂಜೆ ಬೆಂಗಳೂರಿನಲ್ಲಿ ಮಳೆಯಾಗುತ್ತಾ? ಮನೆಯಿಂದ ಹೊರ ಹೋಗುವ ಮುನ್ನ ಈ ಸುದ್ದಿ ಓದಿ
ಬೆಂಗಳೂರಿನಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ರಾಜಧಾನಿ ಸೇರಿದಂತೆ ರಾಜ್ಯದ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಮಳೆ
ಕಳೆದೊಂದು ವಾರದಿಂದ ಸಂಜೆಯಾಗುತ್ತಿದ್ದಂರೆ ರಾಜಧಾನಿಯಲ್ಲಿ ಮಳೆಯಾಗುತ್ತಿದೆ. ಭಾನುವಾರ ಇಡೀ ದಿನ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ನಿರಂತರವಾಗಿ ಮಳೆಯಾಗಿತ್ತು. ಬೆಂಗಳೂರಿನಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ.
ಬೆಂಗಳೂರಿಗೆ ಯೆಲ್ಲೋ ಅಲರ್ಟ್
ಇಂದು ರಾಜಧಾನಿ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಸಹ ಮೋಡ ಕವಿದ ವಾತಾವರಣದ ಜೊತೆ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಎಲ್ಲೆಲ್ಲಿ ಮಳೆ ಸಾಧ್ಯತೆ
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ವಿಜಯನಗರ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಚಿತ್ರದುರ್ಗ, ಕೊಡಗು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಗಾಳಿಯ ವೇಗ ಗಂಟೆಗೆ 30-40ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ.
ಮೋಡ ಕವಿದ ವಾತಾವರಣ
ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ನಂತರ 11.30ರಲ್ಲಿ ಆರಂಭವಾದ ತುಂತುರು ಮಳೆ ನಂತರ ರಭಸವಾಗಿ ಆರಂಭವಾಗಿ ಸುಮಾರು 1 ಗಂಟೆ ಸುರಿಯಿತು. ನಗರದ ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರ, ಚಿಕ್ಕಪೇಟೆ, ಮಾರುಕಟ್ಟೆ, ಬಸವನಗುಡಿ, ಜಯನಗರ, ಜೆ.ಪಿ.ನಗರ ಸುತ್ತ ಮುತ್ತ ರಭಸದ ಮಳೆಯಾಯಿತು. ಇಂದಿರಾನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಆರ್.ಟಿ.ನಗರ, ಯಲಹಂಕ, ಕೆ.ಆರ್.ಪುರ,ರಾಮಮೂರ್ತಿನಗರಗಳಲ್ಲಿ ಸಹ ಮಳೆಯಾಗಿದೆ. ರಜೆ ದಿನ ಕಳೆಯಲು ವಿವಿಧೆಡೆಯಿಂದ ಬಂದಿದ್ದ ಜನರು ಕಿರಿಕಿರಿಗೊಂಡರು. ಬೈಕ್ ಸವಾರರು ಮಳೆಯಲ್ಲಿಯೇ ತೊಯ್ದು ಪರದಾಡಿದರು.
ರಾಜ್ಯ ಹವಾಮಾನ ಇಲಾಖೆ
ಸೋಮವಾರ ಹಾಗೂ ಮಂಗಳವಾರವೂ ನಗರದಲ್ಲಿ ಸಾಧಾರಣದಿಂದ ಹಗುರ ಮಳೆಯಾಗುವ ಸಾಧ್ಯತೆ ಇದೆ. ಭಾನುವಾರ ಸಂಜೆವರೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 14.8 ಮಿ. ಮೀ ಮಳೆಯಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 0.8 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

