IPL 2020: ರಾಜಸ್ಥಾನ ರಾಯಲ್ಸ್ ವಿರುದ್ಧ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದೇಕೆ..?
ಶಾರ್ಜಾ: ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಈಗಾಗಲೇ ನೂರಾರು ಚರ್ಚೆಗಳು ನಡೆದಿವೆ. 13ನೇ ಆವೃತ್ತಿಯ ಐಪಿಎಲ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಪರ ಎಂ ಎಸ್ ಧೋನಿ ಅಗ್ರ ಕ್ರಮಾಂಕದಲ್ಲಿ ಆಡಬೇಕು ಎಂದು ಹಲವು ಕ್ರಿಕೆಟ್ ಎಕ್ಸ್‌ಫರ್ಟ್‌ಗಳು ಅಭಿಪ್ರಾಯಪಟ್ಟಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಧೋನಿ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಒದಗಿ ಬಂದಿತ್ತು. ಆದರೆ ಧೋನಿ ಹಾಗೆ ಮಾಡಲಿಲ್ಲ. ಅಷ್ಟಕ್ಕೂ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಳಿದಿದ್ದೇಕೆ ಎನ್ನುವ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
ರಾಜಸ್ಥಾನ ರಾಯಲ್ಸ್ ನೀಡಿದ್ದ 217 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಮಹೇಂದ್ರ ಸಿಂಗ್ ಧೋನಿ ಕೊನೆಯವರೆಗೂ ಅಜೇಯವಾಗಿ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ರಾಜಸ್ಥಾನ ರಾಯಲ್ಸ್‌ನ ಸ್ಯಾಮ್ ಕರನ್ ಕೊನೆಯ ಎಸೆತದಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. ಆದರೆ ಅಷ್ಟರಲ್ಲಾಗಲೇ ಪಂದ್ಯ ಸಿಎಸ್‌ಕೆ ಕೈ ಜಾರಿತ್ತು.
ಎಂ ಎಸ್ ಧೋನಿ 17 ಎಸೆತಗಳಲ್ಲಿ ಅಜೇಯ 29 ರನ್ ಬಾರಿಸಿದರು. ಮ್ಯಾಚ್ ಫಿನಿಶರ್ ಎಂದೇ ಗುರುತಿಸಿಕೊಂಡಿರುವ ಧೋನಿ ಔಟಾಗದೇ ಉಳಿದು ಪಂದ್ಯ ಸೋತ ಕೆಲವೇ ಕೆಲವು ಪಂದ್ಯಗಳಲ್ಲಿ ಇದೂ ಒಂದು ಎನಿಸಿದೆ.
ಈ ಬಗ್ಗೆ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಧೋನಿ, ಇತರ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ತಾವು ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯಲಿಲ್ಲ ಎಂದು ಹೇಳಿದ್ದಾರೆ.
ಇದರ ಜತೆಗೆ ದೀರ್ಘಕಾಲದಿಂದ ತಾವು ಕ್ರಿಕೆಟ್ ಆಡದೇ ಉಳಿದದ್ದು ಹಾಗೂ 14 ದಿನಗಳ ಕಾಲ ಹೋಟೆಲ್‌ನಲ್ಲಿಯೇ ಕ್ವಾರಂಟೈನ್‌ನಲ್ಲಿ ಉಳಿದದ್ದು, ತಮಗೆ ನೆರವಾಗಲಿಲ್ಲ ಎಂದು ಹೇಳಿದ್ದಾರೆ.
ನಾನು ಸಾಕಷ್ಟು ದೀರ್ಘಕಾಲದಿಂದ ಬ್ಯಾಟಿಂಗ್ ಮಾಡಲಿಲ್ಲ. 14 ದಿನಗಳ ಕ್ವಾರಂಟೈನ್ ಕೂಡಾ ನಮಗೆ ನೆರವಾಗಲಿಲ್ಲ. ಇದರ ಜತೆಗೆ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಸ್ಯಾಮ್ ಕರನ್ ಅವರಂತಹ ಆಟಗಾರರನ್ನು ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಯಿತು.
ಇದು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಿದು ಮೊದಲ ಸೋಲು. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿ ಶುಭಾರಂಭ ಮಾಡಿತ್ತು.