- Home
- News
- India News
- ತಿರುಪತಿ ತಿಮ್ಮಪ್ಪನಿಗೆ ಕನ್ನಡಿಗರ ನಂದಿನಿಯೇ ಬೇಕಂತೆ; 10 ಲಕ್ಷ ಕೆಜಿ ತುಪ್ಪಕ್ಕೆ ಟಿಟಿಡಿ ಆರ್ಡರ್!
ತಿರುಪತಿ ತಿಮ್ಮಪ್ಪನಿಗೆ ಕನ್ನಡಿಗರ ನಂದಿನಿಯೇ ಬೇಕಂತೆ; 10 ಲಕ್ಷ ಕೆಜಿ ತುಪ್ಪಕ್ಕೆ ಟಿಟಿಡಿ ಆರ್ಡರ್!
ತಿರುಮಲ ತಿರುಪತಿ ದೇವಸ್ಥಾನವು 10 ಲಕ್ಷ ಕೆಜಿ ನಂದಿನಿ ತುಪ್ಪಕ್ಕೆ ಬೇಡಿಕೆ ಇಟ್ಟಿದ್ದು, ಮೊದಲ ಹಂತದಲ್ಲಿ 2.5 ಲಕ್ಷ ಕೆಜಿ ತುಪ್ಪ ರವಾನೆಯಾಗಿದೆ. ಭದ್ರತೆಯೊಂದಿಗೆ ತುಪ್ಪ ರವಾನೆ ಮಾಡಲಾಗಿದ್ದು, ದೇವಾಲಯದ ಪೂಜೆ, ಪ್ರಸಾದ ತಯಾರಿಕೆಯಲ್ಲಿ ಬಳಕೆಯಾಗಲಿದೆ.

ಬೆಂಗಳೂರು/ತಿರುಪತಿ (ಜೂ. 25): ಭಾರತದ ಪ್ರಮುಖ ಮತ್ತು ಶ್ರೀಮಂತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತಿರುಪತಿ ತಿರುಮಲ ದೇವಸ್ಥಾನದಿಂದ ಕರ್ನಾಟಕದ 'ನಂದಿನಿ' ಬ್ರ್ಯಾಂಡ್ ತುಪ್ಪಕ್ಕೆ ಅಪಾರ ಬೇಡಿಕೆ ವ್ಯಕ್ತವಾಗಿದೆ. ಕರ್ನಾಟಕ ಹಾಲು ಮಹಾಮಂಡಳ (KMF) ಇದರ ಪೂರೈಕೆ ಕಾರ್ಯದಲ್ಲಿ ನಿರತರಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (TTD) ನಂದಿನಿ ತುಪ್ಪ ಮಾತ್ರವೇ ಬೇಕು ಎಂದು ಸ್ಪಷ್ಟವಾಗಿ ತಿಳಿಸಿರುವುದರ ಬೆನ್ನಲ್ಲೇ, KMF ಕಡೆಯಿಂದ ಭಾರೀ ಪ್ರಮಾಣದ ತುಪ್ಪವನ್ನು ತಿರುಪತಿಗೆ ಕಳುಹಿಸಲಾಗುತ್ತಿದೆ.
TTDಯಿಂದ ಭಾರೀ ಬೇಡಿಕೆ:
ಟಿಟಿಡಿಯಿಂದ ಬರೋಬ್ಬರಿ 10 ಲಕ್ಷ ಕೆಜಿ (10,00,000 ಕಿಲೋ ಗ್ರಾಂ) ನಂದಿನಿ ತುಪ್ಪಕ್ಕೆ ಬೇಡಿಕೆ ವ್ಯಕ್ತವಾಗಿದ್ದು, ಇದರಲ್ಲಿ ಮೊದಲ ಹಂತವಾಗಿ 2,50,000 ಕೆಜಿ (ಅಂದರೆ 250 ಟನ್) ತುಪ್ಪವನ್ನು ತಿರುಪತಿಗೆ ಕಳುಹಿಸಲಾಗಿದೆ. ನಿನ್ನೆ (ಜೂ 24) ಒಂದೇ ದಿನ ಈ ಪ್ರಮಾಣದ ತುಪ್ಪವನ್ನು ಕಳುಹಿಸಿರುವ KMF, ವಿಶೇಷ ಭದ್ರತೆಯ ನಡುವೆ ಈ ರವಾನೆಯನ್ನೂ ನೆರವೇರಿಸಿದೆ.
ಮೆಮೊರಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್ (MoU) ಅನ್ವಯ, ಮೊದಲ ಹಂತದ ಪೂರೈಕೆ ಮಂಡ್ಯ ಹಾಲು ಒಕ್ಕೂಟದಿಂದ ಆರಂಭವಾಗಿದೆ. ಮುಂದಿನ ಹಂತಗಳಲ್ಲಿ ಇತರೆ ಜಿಲ್ಲೆಗಳ ಹಾಲು ಒಕ್ಕೂಟಗಳ ಸಹಕಾರದಿಂದ ಉಳಿದ ಪ್ರಮಾಣದ ತುಪ್ಪವನ್ನು ಪೂರೈಸುವ ಕಾರ್ಯ ನಡೆಯಲಿದೆ.
ಭದ್ರತೆಯೊಂದಿಗೆ ರವಾನೆ:
ಈ ಬೃಹತ್ ಪ್ರಮಾಣದ ತುಪ್ಪವನ್ನು ರವಾನಿಸುವ ವೇಳೆ, ಭದ್ರತೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಉನ್ನತ ಮಟ್ಟದ ಸುರಕ್ಷತಾ ಕ್ರಮಗಳ ನಡುವೆ ಲಾರಿ ಲೋಡ್‌ಗಳಲ್ಲಿ ತುಪ್ಪವನ್ನು ಕಳುಹಿಸಲಾಗಿದೆ. ದೇವಾಲಯದ ಪೂಜೆ, ಪ್ರಸಾದ ತಯಾರಿ ಮತ್ತು ವಿಭಿನ್ನ ಧಾರ್ಮಿಕ ಉತ್ಸವಗಳಲ್ಲಿ ನಂದಿನಿ ತುಪ್ಪವನ್ನು ಬಳಸಲಾಗುತ್ತದೆ. ತಿರುಪತಿ ತಿರುಮಲ ದೇವಸ್ಥಾನದ ಅಗತ್ಯವನ್ನು ಪೂರೈಸಲು ನಾವು ಸಂಪೂರ್ಣ ಸಜ್ಜಾಗಿದ್ದೇವೆ. ಶುದ್ಧತೆ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯೊಂದಿಗೆ ನಂದಿನಿ ತುಪ್ಪವನ್ನು ಪೂರೈಸುತ್ತೇವೆ ಎಂದು KMF ಅಧಿಕಾರಿಗಳು ತಿಳಿಸಿದ್ದಾರೆ.
ನಂದಿನಿ ಬ್ರ್ಯಾಂಡ್ ಹಾಲು, ತುಪ್ಪ ಸೇರಿ ಅನೇಕ ಹಾಲಿನ ಉಪ ಉತ್ಪನ್ನಗಳು ಕರ್ನಾಟಕದೊಳಗೆ ಅಲ್ಲದೆ ಇಡೀ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿಯೂ ವಿಶ್ವಾಸಾರ್ಹ ಹೆಸರು ಹೊಂದಿದೆ. ಹಲವು ವರ್ಷಗಳಿಂದ ತಿರುಪತಿ ದೇವಾಲಯವೂ ನಂದಿನಿ ತುಪ್ಪದ ಶುದ್ಧತೆ ಮತ್ತು ಗುಣಮಟ್ಟವನ್ನು ಮೆಚ್ಚಿ ನಿರಂತರವಾಗಿ ತುಪ್ಪ ಖರೀದಿ ಮಾಡುತ್ತಿದೆ.
ಆದರೆ, ಕಳೆದ ನಾಲ್ಕೈದು ವರ್ಷಗಳ ಹಿಂದೆ ನಂದಿನಿ ತುಪ್ಪದ ಬದಲಾಗಿ ಕಡಿಮೆ ಬೆಲೆಗೆ ಕಳಪೆ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಕೆ ಮಾಡಲಾಗಿತ್ತು. ಆಗ ಈ ತುಪ್ಪದಲ್ಲಿ ಪ್ರಾಣಿಗಳ ಮಾಂಸದ ಕೊಬ್ಬು ಸೇರ್ಪಡೆ ಮಾಡಿದ್ದಾಗಿ ಪ್ರಯೋಗಾಲಯದ ವರದಿಗಳು ಬಂದಿದ್ದವು. ಅಂದಿನಿಂದ ಕರ್ನಾಟಕದ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್ ತುಪ್ಪ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ. ಇದೀಗ ನಂದಿನಿ ತುಪ್ಪವನ್ನೇ ಬೇಡಿಕೆ ಇಟ್ಟಿರುವುದು ಹೆಮ್ಮೆಪಡುವ ವಿಷಯವಾಗಿದೆ.