ಮಲೆ ಮಹದೇಶ್ವರ ಪ್ರಸಾದ ಲಾಡು ತಯಾರಿಕೆಯಲ್ಲಿ ತಿರುಪತಿ ಮಾದರಿಯಂತೆ ನಂದಿನಿ ತುಪ್ಪ ಬಳಸಿ ಗುಣಮಟ್ಟ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ನಿರ್ದೇಶಿಸಿದ್ದಾರೆ. ಬೆಟ್ಟವನ್ನು ಪಾನಮುಕ್ತ ಘೋಷಿಸಿ, ಭಕ್ತರಿಗೆ ಉತ್ತಮ ಸೌಲಭ್ಯ, ದಾಸೋಹ ಭವನ ನಿರ್ಮಾಣಕ್ಕೆ ಸೂಚನೆ ನೀಡಿದರು. ಕಾರ್ಮಿಕರಿಗೆ ಮನೆ ನಿರ್ಮಿಸಲು ತೀರ್ಮಾನಿಸಲಾಯಿತು. ಲಾಡುವಿನ ಬೆಲೆ ೧೦೦ ಗ್ರಾಂ ಗೆ ೩೫ ರೂ. ನಿಗದಿಪಡಿಸಲಾಯಿತು.

ಬೆಂಗಳೂರು (ಏ.24): ಮಲೆ ಮಹದೇಶ್ವರ ಪ್ರಸಾದ ಲಾಡುಗೆ ತಿರುಪತಿ ಮಾದರಿಯಲ್ಲಿ ನಂದಿನಿ ತುಪ್ಪ ಬಳಕೆಯ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಪ್ರಸಾದದ ಗುಣಮಟ್ಟವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಮತ್ತು ಭಕ್ತರಿಗೆ ಉತ್ತಮ ಸೌಲಭ್ಯಗಳ ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ತಿರುಪತಿ ಲಡ್ಡು ಪ್ರಸಾದಕ್ಕೆ ರಾಜ್ಯದಿಂದ ನಂದಿನಿ ತುಪ್ಪವನ್ನು ಬಳಕೆ ಮಾಡುವ ಮಾದರಿಯಲ್ಲಿಯೇ, ಮಹದೇಶ್ವರ ದೇವಸ್ಥಾನದ ಪ್ರಸಾದ ಲಡ್ಡು ಪ್ರಸಾದಕ್ಕೂ ನಂದಿನಿ ತುಪ್ಪವನ್ನೇ ಬಳಕೆ ಮಾಡಬೇಕು. ಆಗ ತಿರುಪತಿ ಲಡ್ಡು ಪ್ರಸಾದದಂತೆಯೇ ಮಾದಪ್ಪನ ಲಡ್ಡು ಪ್ರಸಾದವೂ ರುಚಿಕರವಾಗಲಿದೆ. ಜೊತೆಗೆ, ಮಹದೇಶ್ವರ ದೇವಸ್ಥಾನದ ಪ್ರಸಾದದ ಗುಣಮಟ್ಟವನ್ನೂ ಹೆಚ್ಚಳ ಮಾಡಬೇಕು. ಮುಂದಿನ ದಿನಗಳಲ್ಲಿ 100 ಗ್ರಾಂ ತೂಕದ ಪ್ರಸಾದ ಲಾಡುವನ್ನು ಕೇವಲ 35 ರೂಪಾಯಿಗೆ ವಿತರಿಸಬೇಕು ಎಂದು ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟವನ್ನು ಪಾನಮುಕ್ತ ಕ್ಷೇತ್ರವಾಗಿ ಘೋಷಿಸಿದರು. ಈಗಾಗಲೇ ಬೆಟ್ಟದಲ್ಲಿ ಮದ್ಯ ಮಾರಾಟ ನಿರ್ಬಂಧಿತವಾಗಿದ್ದರೂ, ಹೊರಗಿನಿಂದ ಮದ್ಯ ತರುವುದಕ್ಕೂ ತಡೆ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.​ ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಒಂದೂವರೆ ವರ್ಷದಿಂದ ಜಾರಿಗೆ ಬರದ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಅವರು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ತೀವ್ರವಾಗಿ ಪ್ರಶ್ನಿಸಿದರು. ಪ್ರಾಧಿಕಾರದ ಕೆಲಸ ಕಾರ್ಯಗಳು ಸೂಕ್ತವಾಗಿ ನಡೆಯಲು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಅವರಿಗೆ ಒಬ್ಬ AEE ಯನ್ನು ಪ್ರಾಧಿಕಾರಕ್ಕೆ ನೇಮಿಸಲು ಸೂಚನೆ ನೀಡಿದರು.​

ಇದನ್ನೂ ಓದಿ: ಪಹಲ್ಗಾಮ್‌ ಬಗ್ಗೆ 'ಮಾನವೀಯತೆಯೇ ಮೊದಲ ಧರ್ಮ' ಎಂದ ಪ್ರಿಯಾಂಕ್‌ ಖರ್ಗೆ, ನಿಮಗಿಂತ ಓವೈಸಿಯೇ ಬೆಸ್ಟ್‌!

ಪ್ರವಾಸಿಗರ ಸೌಲಭ್ಯಗಳ ಅಭಿವೃದ್ಧಿ: ಪ್ರವಾಸಿಗರ ಶೆಲ್ಟರ್ ಮತ್ತು ಶೌಚಾಲಯಗಳ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಸಿಎಂ ತರಾಟೆ ತೆಗೆದುಕೊಂಡರು. ಭಕ್ತಾಧಿಗಳಿಗೆ ಉತ್ತಮ ಕುಡಿಯುವ ನೀರು, ಶುಚಿತ್ವದ ಶೌಚಾಲಯ, ಸೌಂದರ್ಯೀಕರಣ ಮತ್ತು ಉಳಿಯಲು ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ರಾಜಿ ಮಾಡಿಕೊಳ್ಳಬಾರದು. ಪ್ರಾಧಿಕಾರ ಮತ್ತು ಮಹದೇಶ್ವರ ಬೆಟ್ಟಕ್ಕೆ ಸೇರಿದ ಜಾಗದಲ್ಲಿ ನೆಲೆಸಿರುವ 13 ಕುಟುಂಬಗಳಿಗೆ ಪರ್ಯಾಯ ಸ್ಥಳ ಒದಗಿಸುವ ಕುರಿತು ಚರ್ಚೆ ನಡೆಯಿತು. ಪ್ರಾಧಿಕಾರದಲ್ಲಿ ಕೆಲಸ ಮಾಡುವ 66 ಕಾರ್ಮಿಕ ಕುಟುಂಬಗಳಿಗೆ ತಲಾ 20 ಲಕ್ಷ ವೆಚ್ಚದಲ್ಲಿ, ಒಟ್ಟು 12-13 ಕೋಟಿ ವೆಚ್ಚದಲ್ಲಿ ನೂತನ ಮನೆಗಳನ್ನು ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಯಿತು.​

ದಾಸೋಹ ಭವನ ನಿರ್ಮಾಣ ಯೋಜನೆ: ಮಹದೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ 2,500 ರಿಂದ 4,000 ಭಕ್ತರು ಒಟ್ಟಿಗೇ ಕುಳಿತು ನಿತ್ಯ ಪ್ರಸಾದ ಸ್ವೀಕರಿಸುವ ದಾಸೋಹ ಭವನ ನಿರ್ಮಿಸಲು ಪರಿಷ್ಕರಿಸಿದ ಯೋಜನೆ ಸಿದ್ದಪಡಿಸಬೇಕು. ಮಹದೇಶ್ವರ ಸನ್ನಿದಿಗೆ ಬರುವ ಭಕ್ತರು ಶೂದ್ರ ಸಮುದಾಯದವರು, ಬಡವರು ಎಂದುಕೊಂಡು ಇವರಿಗೆ ಉತ್ತಮ ವ್ಯವಸ್ಥೆ ಏಕೆ ಬೇಕು ಎಂದು ಮೂಲ ಸೌಕರ್ಯವನ್ನು ಕಲ್ಪಿಸುವುದಕ್ಕೆ ಹಿಂದು ಮುಂದು ನೋಡಬಾರದು. ಭಕ್ತಾಧಿಗಳಿಗೆ ಉತ್ತಮ‌ ಕುಡಿಯುವ ನೀರು, ಶುಚಿತ್ವದ ಶೌಚಾಲಯ, ಸೌಂದರ್ಯೀಕರಣ, ಉಳಿಯಲು ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ರಾಜಿ ಮಾಡಿಕೊಳ್ಳಬಾರದು. ಹೆಚ್ಚಿನ ಸಂಖ್ಯೆಯ ಶೌಚಾಲಯಗಳನ್ನು ನಿರ್ಮಿಸಿ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಸೂಚನೆ ನೀಡಿದರು.

ಇದನ್ನೂ ಓದಿ: ಗುಪ್ತಚರ ಇಲಾಖೆ ವೈಫಲ್ಯದಿಂದ ಉಗ್ರ ದಾಳಿ: ಸಿಎಂ ಸಿದ್ದರಾಮಯ್ಯ

ಈ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಸಚಿವ ಮಹಾದೇವಪ್ಪ, ಶಾಸಕರಾದ ಪುಟ್ಟರಂಗಶೆಟ್ಟಿ ಮತ್ತು ಮಂಜುನಾಥ್ ಭಾಗವಹಿಸಿದ್ದರು.​