BREAKING: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಆಯ್ಕೆ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಬಹುಮತ ಗಳಿಸಿದ್ದು, ಸುವೇಂದು ಅಧಿಕಾರಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ಗಮನ ಸೆಳೆದಿರುವ ಸುವೇಂದು ಅವರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳು ಕೂಡ ನೇಮಕಗೊಳ್ಳಲಿದ್ದಾರೆ.

ಬಂಗಾಳದ ಮೊದಲ ಬಿಜೆಪಿ ಸಿಎಂ ಸುವೇಂದು
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಸುದೀರ್ಘ ಕಾಲದ ನಂತರ ಮಹತ್ವದ ಬದಲಾವಣೆಯಾಗಿದೆ. ಶುಕ್ರವಾರ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದು, ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಲ್ಕತ್ತಾದ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಶಾಸಕರ ಸಭೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕೃತವಾಗಿ ಈ ಘೋಷಣೆ ಮಾಡಿದರು. ಹೆಸರು ಘೋಷಣೆಯಾಗುತ್ತಿದ್ದಂತೆಯೇ ಅಮಿತ್ ಶಾ ಅವರು ವೇದಿಕೆಯ ಮೇಲೆ ಸುವೇಂದು ಅಧಿಕಾರಿ ಅವರಿಗೆ ಹಾರ ಹಾಕಿ, ಆಲಂಗಿಸಿಕೊಳ್ಳುವ ಮೂಲಕ ಶುಭ ಹಾರೈಸಿದರು.
ಇಬ್ಬರು ಉಪಮುಖ್ಯಮಂತ್ರಿಗಳ ನೇಮಕ
ಬಂಗಾಳದಲ್ಲಿ ಆಡಳಿತಾತ್ಮಕ ಸಮತೋಲನ ಕಾಯ್ದುಕೊಳ್ಳಲು ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಲು ಬಿಜೆಪಿ ನಿರ್ಧರಿಸಿದೆ. ಹಿರಿಯ ನಾಯಕಿ ರೂಪಾ ಗಂಗೂಲಿ ಅವರು ಉಪಮುಖ್ಯಮಂತ್ರಿಯಾಗಿ ದೃಢಪಟ್ಟಿದ್ದಾರೆ. ಎರಡನೇ ಉಪಮುಖ್ಯಮಂತ್ರಿ ಸ್ಥಾನವನ್ನು ಉತ್ತರ ಬಂಗಾಳ ಭಾಗದ ಪುರುಷ ಶಾಸಕರೊಬ್ಬರಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.
ನಾಳೆ ಅದ್ಧೂರಿ ಪ್ರಮಾಣವಚನ
ಸುವೇಂದು ಅಧಿಕಾರಿ ಅವರು ನಾಳೆ (ಶನಿವಾರ) ಬೆಳಗ್ಗೆ 10 ಗಂಟೆಗೆ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ.
ಮಮತಾ ಬ್ಯಾನರ್ಜಿಗೆ 'ಡಬಲ್' ಶಾಕ್ ನೀಡಿದ್ದ ಸುವೇಂದು
ಈ ಬಾರಿಯ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಮಮತಾ ಅವರ ಭದ್ರಕೋಟೆಯಾಗಿದ್ದ ಭವಾನಿಪುರ ಕ್ಷೇತ್ರದಲ್ಲಿ ಅವರನ್ನು ಸೋಲಿಸುವ ಮೂಲಕ ಸುವೇಂದು ಇತಿಹಾಸ ಬರೆದಿದ್ದಾರೆ. ಅಷ್ಟೇ ಅಲ್ಲದೆ, ನಂದಿಗ್ರಾಮ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಮಮತಾ ಬ್ಯಾನರ್ಜಿ ಅವರಿಗೆ ಸೋಲುಣಿಸಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.
ಬಿಜೆಪಿಗೆ ಐತಿಹಾಸಿಕ ಬಹುಮತ
ಮೇ 4 ರಂದು ಪ್ರಕಟವಾದ ಫಲಿತಾಂಶದಲ್ಲಿ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆಡಳಿತಾರೂಢ ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿದೆ. ಬಾಕಿ ಉಳಿದಿರುವ ಒಂದು ಸ್ಥಾನಕ್ಕೆ ಮೇ 21 ರಂದು ಮರುಚುನಾವಣೆ ನಡೆಯಲಿದ್ದು, ಮೇ 24 ರಂದು ಫಲಿತಾಂಶ ಹೊರಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

