ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಎರಡೂ ಪಕ್ಷಗಳು ಸಮಬಲದ ಹೋರಾಟ ನಡೆಸುತ್ತಿವೆ.

ಕೋಲ್ಕತ್ತಾ (ಮೇ 4): ಪಶ್ಚಿಮ ಬಂಗಾಳದ ಅಧಿಕಾರದ ಗದ್ದುಗೆ ಯಾರ ಪಾಲಿಗೆ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ರಾಜ್ಯದ 293 ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಬೆಳಗ್ಗೆ 8.41ರ ವೇಳೆಗೆ 293 ಕ್ಷೇತ್ರಗಳ ಪೈಕಿ 124 ಕ್ಷೇತ್ರದ ಎಣಿಕೆಯಲ್ಲಿ ಟಿಎಂಸಿ 63 ಹಾಗೂ ಬಿಜೆಪಿ 59 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬೆಳಿಗ್ಗೆಯ ಆರಂಭಿಕ ಟ್ರೆಂಡ್‌ಗಳ ಪ್ರಕಾರ, ರಾಜ್ಯದಲ್ಲಿ ಇಂಚಿಂಚು ಹೋರಾಟ ನಡೆಯುತ್ತಿದೆ. ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಅವರಿಗೆ ಈ ಬಾರಿ ಬಿಜೆಪಿ ಪ್ರಬಲ ಸವಾಲೊಡ್ಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಮತಾ ಮತ್ತು ಸುವೇಂದು ಮುನ್ನಡೆ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಭದ್ರಕೋಟೆಯಾದ ಭವಾನಿಪುರ ಕ್ಷೇತ್ರದಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಹೈ-ವೋಲ್ಟೇಜ್ ಕ್ಷೇತ್ರವಾದ ನಂದಿಗ್ರಾಮದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ನಬದ್ವೀಪ್ ಮತ್ತು ಕೃಷ್ಣನಗರದಲ್ಲಿ ಬಿಜೆಪಿ ಅಂಚೆ ಮತಪತ್ರಗಳ ಎಣಿಕೆಯಲ್ಲಿ ಮುಂದಿದ್ದರೆ, ಶಂಶೇರ್‌ಗಂಜ್‌ನಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಂದಿದೆ.

ಒಂದು ಕ್ಷೇತ್ರದಲ್ಲಿ ಮರು ಮತದಾನ

ಪಶ್ಚಿಮ ಬಂಗಾಳದ ಒಟ್ಟು 294 ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳ ಎಣಿಕೆ ಇಂದು ನಡೆಯುತ್ತಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ (Falta) ಕ್ಷೇತ್ರದಲ್ಲಿ ವ್ಯಾಪಕ ಚುನಾವಣಾ ಅಕ್ರಮಗಳ ದೂರು ಬಂದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಈ ಕ್ಷೇತ್ರದಲ್ಲಿ ಮೇ 21 ರಂದು ಮರು ಮತದಾನಕ್ಕೆ ಆದೇಶಿಸಿದೆ. ಈ ಕ್ಷೇತ್ರದ ಫಲಿತಾಂಶ ಮೇ 24 ರಂದು ಹೊರಬೀಳಲಿದೆ.