ಮೋದಿ ಉದ್ಘಾಟಿಸಲಿರುವ ಅರುಣಾಚಲದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದಲ್ಲಿದೆ ಹಲವು ವಿಶೇಷತೆ!
ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 19 ರಂದು ಉದ್ಘಾಟಿಸಲಿದ್ದಾರೆ. 640 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ. ಈ ವಿಮಾನ ನಿಲ್ದಾಣ ಹೇಗಿದೆ? ಇಲ್ಲಿದೆ.
ಈಶಾನ್ಯ ರಾಜ್ಯದ ಸಂಪರ್ಕ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡಿದೆ. ಇದರ ಭಾಗವಾಗಿ 640 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ, ಡೋನಿ ಪೋಲೊ ಏರ್‌ಪೋರ್ಟ್‌ನ್ನು ಮೋದಿ ನವೆಂಬರ್ 19 ರಂದು ಉದ್ಘಾಟಿಸಲಿದ್ದಾರೆ.
ವಿಮಾನ ನಿಲ್ದಾಣದ ಹೆಸರು ಅರುಣಾಚಲ ಪ್ರದೇಶದ ಸಂಪ್ರದಾಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಸೂರ್ಯ ('ಡೋನಿ') ಮತ್ತು ಚಂದ್ರನ ('ಪೋಲೊ') ಬಗ್ಗೆ ರಾಜ್ಯವು ಹೊಂದಿರುವ ಪುರಾತನ ಸ್ಥಳೀಯ ಗೌರವವನ್ನು ಪ್ರತಿಬಿಂಬಿಸುತ್ತದೆ.
ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಎನಿಸಿರುವ ಈ ವಿಮಾನ ನಿಲ್ದಾಣವನ್ನು 690 ಎಕರೆ ಪ್ರದೇಶದಲ್ಲಿ 640 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
2300 ಮೀಟರ್ ರನ್‌ವೇ ಹೊಂದಿರುವ ಈ ವಿಮಾನ ನಿಲ್ದಾಣವು, ಎಲ್ಲಾ ಹವಾಮಾನ ದಿನದ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಅತ್ಯಾಧುನಿಕ ಕಟ್ಟಡವಾಗಿದ್ದು, ಇದು ಇಂಧನ ದಕ್ಷತೆ, ನವೀಕರಿಸಬಹುದಾದ ಇಂಧನ ಮತ್ತು ಸಂಪನ್ಮೂಲಗಳ ಮರುಬಳಕೆಯನ್ನು ಉತ್ತೇಜಿಸುತ್ತದೆ.
ಇಟಾನಗರದಲ್ಲಿ ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿಯು ಈ ಪ್ರದೇಶದ ಸಂಪರ್ಕವನ್ನು ಸುಧಾರಿಸುವುದಲ್ಲದೆ, ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಆ ಮೂಲಕ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಮೂಲೆ ಮೂಲೆಗೂ ಸಂಪರ್ಕ ಸುಲಭಗೊಳಿಸುತ್ತಿದೆ. ಇದರ ಅಂಗವಾಗಿ ರೈಲ್ವೇ ನಿಲ್ದಾಣಗಳನ್ನು ಉನ್ನತೀಕರಿಸಲಾಗುತ್ತಿದೆ. ಹೊಸ ಹೊಸ ವಿಮಾನ ನಿಲ್ದಾಣಗಳು ತಲೆ ಎತ್ತಿದೆ.