ಹುಲಿ, ಸಿಂಹ ಸೇರಿ ವನ್ಯಜೀವಿಗಳ ಜೊತೆ ಸಮಯ ಕಳೆದ ಮೋದಿ, ವಂತಾರದಲ್ಲಿ ಏನೆಲ್ಲಾ ಇದೆ?
ಗುಜರಾತ್‌ನ ವಂತಾರ ವನ್ಯಜೀವಿ ಸಂರಕ್ಷಣಾ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ವನ್ಯಜೀವಿಗಳ ಜೊತೆ ಸಮಯ ಕಳೆದಿದ್ದಾರೆ. ಅಪರೂಪದ ಪ್ರಾಣಿಗಳು ಇಲ್ಲಿವೆ. ವಂತಾರ ಒಳಗೆ ಏನೆಲ್ಲಾ ಇದೆ? ಯಾವೆಲ್ಲಾ ಪ್ರಾಣಿಗಳ ಜೊತೆ ಮೋದಿ ಆಹಾರ ನೀಡಿದರು?

ಗುಜರಾತ್‌ನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜಾಮ್ ನಗರದಲ್ಲಿರುವ ವಂತಾರ ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ಉದ್ಘಾಟಿಸಿದ್ದಾರೆ.. ವಂತಾರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವನ್ಯಜೀವಿ ಪ್ರಭೇದಗಳಿವೆ. ಒಂದೂವರೆ ಲಕ್ಷಕ್ಕೂ ಹೆಚ್ಚು ರಕ್ಷಣೆ ಮಾಡಲಾದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ವಂತಾರ ಉದ್ಘಾಟಿಸಿ ವನ್ಯಜೀವಿಗಳ ಜೊತೆ ಅಮೂಲ್ಯ ಸಮಯ ಕಳೆದಿದ್ದಾರೆ. ಇದೇ ವೇಳೆ ಹುಲಿ ಮರಿ, ಸೇರಿದಂತೆ ಹಲವು ವನ್ಯಪ್ರಾಣಿಗಳ ಮರಿಗಳಿಗೆ ಆಹಾರ ನೀಡಿದ್ದಾರೆ.
ವಂತಾರದಲ್ಲಿ ಇರುವ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಎಂಆರ್‌ಐ, ಸಿಟಿ ಸ್ಕ್ಯಾನ್‌ಗಳು, ಐಸಿಯುಗಳು ಸೇರಿದಂತೆ ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದ್ದಾರೆ. ವನ್ಯಜೀವಿ ಅರಿವಳಿಕೆ, ಹೃದಯಶಾಸ್ತ್ರ, ಮೂತ್ರಪಿಂಡಶಾಸ್ತ್ರ, ಎಂಡೋಸ್ಕೋಪಿ, ದಂತವೈದ್ಯಶಾಸ್ತ್ರ, ಆಂತರಿಕ ಔಷಧ ಇತ್ಯಾದಿಗಳನ್ನು ಹೊಂದಿರುವ ವಿವಿಧ ವಿಭಾಗಗಳಿಗೆ ಸಹ ಭೇಟಿ ನೀಡಿದರು. ಇಲ್ಲಿ ಅವರು ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದದ ಹಿಮಾಲಯದ ಚಿರತೆ ಮರಿ, ಕ್ಯಾರಕಲ್ಸ್ (ವಿಶಿಷ್ಟ ಬಗೆಯ ಕಾಡು ಬೆಕ್ಕು) ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿಗಳಿಗೆ ಆಹಾರ ನೀಡಿದರು, ಸಂತಸದ ಕ್ಷಣಗಳನ್ನು ಕಳೆದರು.
ಪ್ರಧಾನಿ ಮೋದಿ ಅವರು ಆಹಾರ ನೀಡಿದಂಥ ಬಿಳಿ ಸಿಂಹದ ಮರಿಯು ವಂತಾರದಲ್ಲಿಯೇ ಹುಟ್ಟಿದ ಮರಿಯಾಗಿದೆ. ಅದರ ತಾಯಿಯನ್ನು ರಕ್ಷಿಸಿ, ಆರೈಕೆಗಾಗಿ ವಂತಾರಕ್ಕೆ ಕರೆತಂದ ನಂತರದಲ್ಲಿ ಬಿಳಿ ಸಿಂಹದ ಮರಿಯು ಜನಿಸಿತು. ಭಾರತದಲ್ಲಿ ಹಿಂದೊಮ್ಮೆ ಹೇರಳವಾಗಿದ್ದ ಕ್ಯಾರಕಲ್‌ಗಳು ಈಗ ಕಂಡುಬರುವುದು ಅಪರೂಪವಾಗುತ್ತಿವೆ. ವಂತಾರದಲ್ಲಿ ಕ್ಯಾರಕಲ್‌ಗಳ ಸಂರಕ್ಷಣೆಗಾಗಿ ಸೆರೆಯಲ್ಲಿ ಸಂತಾನೋತ್ಪತ್ತಿ ಕಾರ್ಯಕ್ರಮದಡಿ ಸಾಕಲಾಗುತ್ತದೆ ಮತ್ತು ನಂತರ ಕಾಡಿಗೆ ಬಿಡಲಾಗುತ್ತದೆ.
ನರೇಂದ್ರ ಮೋದಿ ಅವರು ಆಸ್ಪತ್ರೆಯ ಎಂಆರ್‌ಐ ಕೋಣೆಗೆ ಭೇಟಿ ನೀಡಿ ಸೌಲಭ್ಯಗಳನ್ನು ಪರೀಕ್ಷಿಸಿದ್ದಾರೆ. ಏಷಿಯಾಟಿಕ್ ಸಿಂಹಕ್ಕೆ ಎಂಆರ್‌ಐ ಕೂಡ ವೀಕ್ಷಿಸಿದರು. ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ನಂತರ, ಅದನ್ನು ರಕ್ಷಣೆ ಮಾಡಿ ಜೀವ ಉಳಿಸುವುದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಲಾದ ಚಿರತೆಯ ಆಪರೇಷನ್ ಥಿಯೇಟರ್‌ಗೆ ಭೇಟಿ ನೀಡಿದರು.
ವಂತಾರದಲ್ಲಿ ರಕ್ಷಿಸಲಾದ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನವನ್ನೇ ಬಹುತೇಕ ಪ್ರತಿಬಿಂಬಿಸುವ ಸ್ಥಳಗಳಲ್ಲಿ ಇರಿಸಲಾಗಿದೆ. ಇಲ್ಲಿ ಕೈಗೊಂಡ ಕೆಲವು ಪ್ರಮುಖ ಸಂರಕ್ಷಣಾ ಉಪಕ್ರಮಗಳಲ್ಲಿ ಏಷಿಯಾಟಿಕ್ ಸಿಂಹ, ಹಿಮ ಚಿರತೆ, ಒಂದು ಕೊಂಬಿನ ಘೇಂಡಾಮೃಗ ಇತರವು ಸೇರಿಕೊಂಡಿವೆ. ಇದು ವನ್ಯಪ್ರಾಣಿಗಳ ಸಂರಕ್ಷಣಾ ಹಾಗೂ ಆರೈಕೆ ಕೇಂದ್ರವಾಗಿದೆ. ಸದ್ಯ ಈ ಕೇಂದ್ರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಲ್ಲ
ನರೇಂದ್ರ ಮೋದಿ ಅವರು ವಿವಿಧ ಉಗ್ರ ಸ್ವರೂಪದ- ಸ್ವಭಾವದ ಪ್ರಾಣಿಗಳೊಂದಿಗೆ ಸಮಯ ಕಳೆದರು. ಅದರಲ್ಲೂ ಗೋಲ್ಡನ್ ಟೈಗರ್‌ನೊಂದಿಗೆ ಮುಖಾಮುಖಿಯಾಗಿ ಕುಳಿತರು. ಒಂದೇ ತಾಯಿಯ ಮರಿಗಳಾದ 4 ಹಿಮ ಹುಲಿಗಳು ಇಲ್ಲಿ ಇದ್ದು, ಅವುಗಳನ್ನು ಸರ್ಕಸ್‌ನಿಂದ ರಕ್ಷಿಸಲಾಗಿದೆ. ಅಲ್ಲಿ ಅವುಗಳು ವಿವಿದ ಪ್ರದರ್ಶನಗಳನ್ನು ನೀಡುತ್ತಿದ್ದವು, ಜತೆಗೆ ಬಿಳಿ ಸಿಂಹ ಮತ್ತು ಹಿಮ ಚಿರತೆಗಳಿದ್ದವು.
ಅಪರೂಪದ ಒಕಾಪಿಯ ಮೈ ದಡವಿದ ನರೇಂದ್ರ ಮೋದಿ ಅವರು, ಚಿಂಪಾಂಜಿ ಜೊತೆಗೂ ಸಮಯಕಳೆದಿದ್ದಾರೆ. ಇನ್ನು ಒರಾಂಗುಟನ್‌ಗಳೊಂದಿಗೆ ಅಪ್ಪಿಕೊಂಡರು. ನೀರಿನ ಅಡಿಯಲ್ಲಿರುವ ನೀರಾನೆಯನ್ನು, ಮೊಸಳೆಗಳ ವೀಕ್ಷಣೆ ಮಾಡಿದ್ದಾರೆ. ಜೀಬ್ರಾ ,ಜಿರಾಫೆ ಮತ್ತು ಘೇಂಡಾಮೃಗದ ಮರಿಗಳಿಗೆ ಆಹಾರ ನೀಡಿದರು. ಇನ್ನು ಒಂದು ಕೊಂಬಿನ ಘೇಂಡಾಮೃಗದ ಮರಿಯೊಂದು ಅನಾಥವಾಗಿದ್ದು, ಅದರ ತಾಯಿಯು ವಂತಾರದಲ್ಲಿಯೇ ಸಾವನ್ನಪ್ಪಿತು.
ದೊಡ್ಡ ಹೆಬ್ಬಾವು, ವಿಶಿಷ್ಟವಾದ ಎರಡು ತಲೆಯ ಹಾವು, ಎರಡು ತಲೆಯ ಆಮೆ, ಟ್ಯಾಪಿರ್ ನೋಡಿದರು. ಇನ್ನು ಚಿರತೆ ಮರಿಗಳನ್ನು ಕೃಷಿ ಜಮೀನಿನಲ್ಲಿ ಬಿಡಲಾಗಿತ್ತು. ಆ ನಂತರ ಗ್ರಾಮಸ್ಥರು ಅವುಗಳನ್ನು ಗುರುತಿಸಿ ರಕ್ಷಿಸಿದರು. ದೈತ್ಯ ನೀರುನಾಯಿ, ಬೊಂಗೊ (ಹುಲ್ಲೆ), ಸೀಲುಗಳು ಸಹ ನೋಡಿದ ನಂತರದಲ್ಲಿ ಸ್ನಾನ ಮಾಡುತ್ತಾ ಆಟವಾಡುತ್ತಿದ್ದ ಆನೆಗಳನ್ನು ಸಹ ನರೇಂದ್ರ ಮೋದಿ ವೀಕ್ಷಿಸಿದರು. ಅಂದ ಹಾಗೆ ಈ ಹೈಡ್ರೋಥೆರಪಿ ಕೊಳಗಳು ವಿಶಿಷ್ಟವಾದವು. ಇವುಗಳಿಂದ ಸಂಧಿವಾತ ಮತ್ತು ಕಾಲು ಸಮಸ್ಯೆಗಳಿಂದ ಬಳಲುತ್ತಿರುವ ಆನೆಗಳ ಚೇತರಿಕೆಗೆ ಸಹಾಯ ಮಾಡುತ್ತವೆ ಮತ್ತು ಅವುಗಳ ಚಲನಶೀಲತೆಯನ್ನು ಸುಧಾರಿಸುತ್ತವೆ.