ಅಮ್ಮನ ಅಂತ್ಯಸಂಸ್ಕಾರಕ್ಕೆ ಹಣವಿಲ್ಲ, ನೇಣಿಗೆ ಶರಣಾದ ಮಗ!
ಕೊರೋನಾ ಕೊಟ್ಟಿರುವ ನೋವು ಅಷ್ಟಿಷ್ಟಲ್ಲ, ಇದನ್ನು ಯಾರೂ ಎಂದಿಗೂ ಮರೆಯಲಾರರು. ಇದರ ಅಟ್ಟಹಾಸಕ್ಕೆ ಅನೇಕ ಮನೆಗಳು ನಾಶವಾಗಿವೆ, ಅನೇಕರು ಉದ್ಯೋಗ ಕಳೆದುಕೊಂಡು ಒಂದೊತ್ತಿನ ಊಟವಿಲ್ಲದೇ ಪರದಾಡುವ ಸ್ಥಿತಿ ಬಂದಿದೆ. ಇನ್ನು ಕೆಲವರು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ. ಸದ್ಯ ಝಾರ್ಖಂಡ್‌ನಲ್ಲೂ ಇಂತಹುದೇ ಮನಕಲಕುವ ಘಟನೆ ನಡೆದಿದೆ. ಇಲ್ಲೊಬ್ಬ ಮಗ ತನ್ನ ತಾಯಿ ಅಂತ್ಯಸಂಸ್ಕಾರ ನೆರವೇರಿಸಲು ಹಣವಿಲ್ಲವೆಂದು, ಬೇರೆ ದಾರಿ ಕಾಣದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಮಾರ್ಮಿಕ ಘಟನೆ ನಡೆದಿದ್ದ ದೇವ್‌ಘರ್ ಜಿಲ್ಲೆಯ ಜಸೀಡೀಡ್ ಠಾಣಾ ವ್ಯಾಪ್ತಿಯಲ್ಲಿ. ಚರ್ಕೀ ಪಹರೀ ಹಳ್ಳಿಯ ಯುವಕ ತನ್ನ ತಾಯಿ ಸಾವಿನಿಂದ ಅದೆಷ್ಟು ನೊಂದಿದ್ದ ಎಂದರೆ, ಶನಿವಾರದಂದು ಆತ ನೇಣಿಗೆ ಶರಣಾಗಿದ್ದಾನೆ. ತಾಯಿ ಹಾಗೂ ಮಗನ ಸಾವಿನ ಬಳಿಕ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಕಿಶನ್ ತಾಯಿಗೆ ಕಳೆದ ಮೂರು ವರ್ಷದ ಹಿಂದೆ ಲಕ್ವ ಹೊಡೆದಿತ್ತು. ಇದಾದ ಬಳಿಕ ಆಕೆಯನ್ನು ಅನಾರೋಗ್ಯ ಕಾಡಲಾರಂಭಿಸಿತ್ತು. ಹೀಗಿರುವಾಗ ಮಗ ತಾಯೊಯನ್ನು ಉಳಿಸಲು ತನ್ನಿಂದ ಏನೆಲ್ಲಾ ಆಗುತ್ತೋ ಅದೆಲ್ಲವನ್ನೂ ಮಾಡಿದ್ದಾನೆ. ಚಿಕಿತ್ಸೆಗಾಘಿ ಭಾರೀ ಪ್ರಮಾಣದಲ್ಲಿ ಹಣ ವ್ಯಯಿಸಿದ್ದು, ಇದರಿಂದಾಗಿ ಆರ್ಥಿಕವಾಗಿ ಹೊಡೆತಕ್ಕೊಳಗಾಗಿದ್ದಾನೆ. ಲಾಕ್‌ಡೌನ್‌ನಿಂದಾಗಿ ಯಾವ ಕೆಲಸವೂ ಸಿಗಲಿಲ್ಲ. ಹೀಗಾಗಿ ಆತ ಉಳಿತಾಯ ಮಾಡಿದ್ದ ಹಣವೆಲ್ಲವೂ ಖರ್ಚಾಗಿತ್ತು. ಬೇರೆ ದಾರಿ ಕಾಣದ ಆತ ಸಾಲ ಪಡೆಯಲಾರಂಭಿಸಿದ್ದ. ಕೊನೆಯದಾಗಿ ಆತ ಅದೆಷ್ಟು ನೊಂದಿದ್ದ, ಆರ್ಥಿಕವಾಗಿ ಕಂಗೆಟ್ಟಿದ್ದ ಎಂದರೆ ಕುಟುಂಬದವರನ್ನು ಸಾಕಲೂ ಹಣವಿರಲಿಲ್ಲ.
ಹೀಗಿರುವಾಗ ತಾಯಿ ಮೃತಪಟ್ಟಿದ್ದು, ಆತ ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಲಾರಂಭಿಸಿದ್ದಾನೆ. ಇದಕ್ಕಾಗಿ ತಗುಲುವ ಸಾಮಾಗ್ರಿಗಳಿಗಾಗಿ ಹಣ ಹೊಂದಿಸಲಾರಂಭಿಸಿದ್ದಾನೆ. ಆದರೆ ಯಾರೂ ಆತನ ನೆರವಿಗೆ ಧಾವಿಸಲಿಲ್ಲ. ಕೆಲ ಸಮಯದ ಬಳಿಕ ತನ್ನನ್ನು ತಾನು ಕೋಣೆಯಲ್ಲಿ ಬಂಧಿಸಿದ ಕಿಶನ್ ಪ್ಯಾನ್‌ಗೆ ನೇಣು ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಹಳ ಹೊತ್ತಾದರೂ ಕಿಶನ್ ಹೊರ ಬಾರದಿದ್ದಾಗ ಗಾಬರಿಗೀಡಾದ ಪತ್ನಿ ಬಾಗಿಲು ಬಡಿದಿದ್ದಾಳೆ. ಆದರೆ ಒಳಗಿನಿಂದ ಯಾವುದೇ ಶಬ್ಧ ಕೇಳಿಸಿಲ್ಲ. ಹೀಗಾಗಿ ಕಿಟಕಿ ಮೂಲಕ ಒಳಗೆ ಇಣುಕಿದಾಗ ಕಿಶನ್ ನೇಣಿಗೆ ಶರಣಾಗಿರುವುದನ್ನು ಕಂಡು ಪತ್ನಿ ಬೆಚ್ಚಿ ಬಿದ್ದಿದ್ದಾಳೆ. ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ.