ನಿನ್ನೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಾರುತ ನಾಪತ್ತೆ; ಮೇ 26ಕ್ಕೆ ಪ್ರವೇಶ ಎಂದಿದ್ದ ಇಲಾಖೆ
ಎಲ್‌ನಿನೋ ಪರಿಣಾಮದಿಂದಾಗಿ ಕೇರಳಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿದ್ದು, ಮೇ 28 ರಿಂದ ಜೂನ್ 3ರ ನಡುವೆ ಆಗಮಿಸುವ ನಿರೀಕ್ಷೆಯಿದೆ. ಈ ನಡುವೆ, ಕರ್ನಾಟಕದ ರಾಯಚೂರು ಸೇರಿದಂತೆ ಹಲವೆಡೆ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ರೈತರು ಬೆಳೆ ನಷ್ಟದ ಆತಂಕದಲ್ಲಿದ್ದಾರೆ.

ಮುಂಗಾರು ಮಾರುತ
ನವದೆಹಲಿ: ಎಲ್‌ನಿನೋ ಪರಿಣಾಮ ಈ ಬಾರಿ ಕಡಿಮೆ ಮಳೆ ಸುರಿಸಲಿದೆ ಎನ್ನಲಾದ ಮುಂಗಾರು ಮಾರುತಗಳು, ಭಾರತ ಪ್ರವೇಶದಲ್ಲೂ ವಿಳಂಬ ಮಾಡಿವೆ. ಹವಾಮಾನ ಇಲಾಖೆ ಮೇ 26ರಂದು ಕೇರಳ ಪ್ರವೇಶ ಮಾಡಬಹುದು ಎಂದು ಮುನ್ಸೂಚನೆ ನೀಡಿತ್ತು. ಆದರೆ ಮಾರುತಗಳು ಮಂಗಳವಾರ ಕೇರಳ ಪ್ರವೇಶ ಮಾಡಿಲ್ಲ.

ಮೇ 28ರಿಂದ ಮೂ.3ರ ನಡುವೆ ಕೇರಳ ಪ್ರವೇಶಿಸುವ ಸಾಧ್ಯತೆ
ಮಾರುತಗಳು ಮೇ 28ರಿಂದ ಮೂ.3ರ ನಡುವೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೊಸದಾಗಿ ಅಂದಾಜಿಸಿದೆ. ಸಾಮಾನ್ಯವಾಗಿ ಜೂ.1ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡುತ್ತದೆ. ಆದರೆ ಈ ಬಾರಿ ಮೇ 26ರಂದೇ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹವಾಮಾನ ಇಲಾಖೆಯು ಮುಂಗಾರು ಪ್ರವೇಶ ಘೋಷಿಸಬೇಕಾದರೆ ಕೇರಳದಲ್ಲಿ 14 ಹವಾಮಾನ ಕೇಂದ್ರಗಳ ಪೈಕಿ ಶೇ.60ರಷ್ಟರಲ್ಲಿ ಸತತ 2 ದಿನಗಳ ತನಕ 2.55 ಮೀಮೀ ಅಥವಾ ಅದಕ್ಕಿಂತ ಹೆಚ್ಚಿನ ಮಳೆ ಬೀಳಬೇಕು.
ರಾಜ್ಯದಲ್ಲಿ ಪೂರ್ವ ಮುಂಗಾರು
ಇತ್ತ ರಾಜ್ಯದಲ್ಲಿ ಪೂರ್ವಮುಂಗಾರು ಮಳೆ ಅಬ್ಬರ ಹೆಚ್ಚಾಗುತ್ತಿದೆ. ಕರ್ನಾಟಕದ ಬೀದರ್, ಕಲಬುರಗಿ ಸೇರಿದಂತೆ ಉತ್ತರ ಒಳನಾಡಿನ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮತ್ತೊಂದೆಡೆ ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯಾಗ್ತಿದ್ದಂತೆ ಮಳೆ ಶುರುವಾಗುತ್ತಿದೆ. ಇಂದು ಬೆಳಗ್ಗೆಯೇ ರಾಯಚೂರು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ.
ರಾಯಚೂರಿನಲ್ಲಿ ಬೆಳಗ್ಗೆಯಿಂದ ಗುಡುಗು ಸಹಿತ ಮಳೆ
ರಾಯಚೂರು, ಸಿಂಧನೂರು, ಲಿಂಗಸೂಗೂರು, ಮಸ್ಕಿ, ಸಿರವಾರ, ಮಾನ್ವಿ ಸೇರಿದಂತೆ ಎಲ್ಲೆಡೆ ಮಳೆ ಆರಂಭವಾಗಿದೆ. ಏಕಾಏಕಿ ಬಂದ ಮಳೆಯಿಂದಾಗಿ ಕೆಲ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳಲು ಪರದಾಡುವಂತಾಗಿದೆ. ಬೆಳೆದ ಭತ್ತ ಜಮೀನಿನಲ್ಲಿ ಒಣಗಲು ಹಾಕಲಾಗಿತ್ತು. ಭತ್ತ ನೀರಿನಲ್ಲಿ ನೆನೆದು ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ. ಸದ್ಯ ಜಿಲ್ಲೆಯಾದ್ಯಂತ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

