ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಯಾದಗಿರಿಯಲ್ಲಿ ಮದುವೆ ಮಂಟಪದ ಛಾವಣಿ ಕುಸಿದುಬಿದ್ದಿದೆ.

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಧಾರವಾಡ, ರಾಯಚೂರು, ಉತ್ತರ ಕನ್ನಡ ಸೇರಿ 10 ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದ್ದು, ಸಿಡಿಲಬ್ಬರದ ಮಳೆಗೆ ಮೂವರು ಬಲಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಧಾರವಾಡ ತಾಲೂಕಿನ ಕವಲಗೇರಿಯಲ್ಲಿ ಸಿಡಿಲು ಬಡಿದು ಜಯಶ್ರೀ ಹನುಮಂತಪ್ಪ ಶಿರಸಂಗಿ (36) ಎಂಬುವರು ಮೃತಪಟ್ಟಿದ್ದಾರೆ. ಹೊಲದಲ್ಲಿ ಹಾಕಿದ್ದ ಮೆಂತೆ ಸಸಿಗಳನ್ನು ಕೀಳುತ್ತಿದ್ದಾಗ ದಂಪತಿಗೆ ಸಿಡಿಲು ಬಡಿಯಿತು. ಪತ್ನಿ ಜಯಶ್ರೀ ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಪತಿ ಹನುಮಂತಪ್ಪ ಗಾಯಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಅಪ್ಸರಕೊಂಡದ ಕಡಲತೀರದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಮೀನುಗಾರಿಕೆಗೆ ತೆರಳಿದ್ದ ಅಪ್ಸರಕೊಂಡದ ವಿನಾಯಕ ಖಾರ್ವಿ (35) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ಹಲವು ಪ್ರವಾಸಿಗರು ಸಿಡಿಲಿನ ಆಘಾತಕ್ಕೆ ಒಳಗಾಗಿದ್ದು, ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ಗೊಬ್ಬರ ತುಂಬುತ್ತಿದ್ದ ವೇಳೆ ಸಿಡಿಲು ಬಡಿದು ಕರಿಯಪ್ಪ ಗೆನ್ನಾಕಿಹಾಳ್‌ (45) ಎಂಬುವರು ಮೃತಪಟ್ಟಿದ್ದಾರೆ.

ಶಿವಮೊಗ್ಗ, ಧಾರವಾಡ, ಉತ್ತರ ಕನ್ನಡ, ಗದಗ, ಯಾದಗಿರಿ, ವಿಜಯನಗರ, ಉಡುಪಿ, ದಾವಣಗೆರೆ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಭಾನುವಾರ ಮಳೆ ಅಬ್ಬರಿಸಿದೆ. ಗದಗಿನ ಲಕ್ಷ್ಮೇಶ್ವರದಲ್ಲಿ ಸಂಜೆ ಸುರಿದ ಭಾರಿ ಮಳೆಗೆ ಜೋನಿ ಹಳ್ಳ ತುಂಬಿ ರಸ್ತೆಯ ಮೇಲೆ ಹರಿದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಸಿಡಿಲು ಬಡಿದು ಮೂರು ಜಾನುವಾರುಗಳು ಅಸುನೀಗಿದ್ದರೆ, ಹುಬ್ಬಳ್ಳಿಯಲ್ಲಿ 10ಕ್ಕೂ ಅಧಿಕ ಕಡೆ ಮರಗಳು ನೆಲಕ್ಕುರುಳಿವೆ. ಕೊಪ್ಪಳ ತಾಲೂಕಿನಲ್ಲಿ 100 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದ ಬಾಳೆ, ವಿಜಯನಗರ ಜಿಲ್ಲೆ ಕೂಡ್ಲಿಗಿಯ ಕೆಂಗಲಹಟ್ಟಿಯಲ್ಲಿ 200ಕ್ಕೂ ಹೆಚ್ಚು ಪಪ್ಪಾಯಿ ಗಿಡಗಳು ನೆಲಕಚ್ಚಿವೆ.

ಹರಿಹರ ಸೇರಿ ದಾವಣಗೆರೆ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ 3.45 ರಿಂದ ಒಂದು ಗಂಟೆ ಕಾಲ ಮಿಂಚು ಗುಡುಗು ಸಮೇತ ಭಾರಿ ಮಳೆ ಸುರಿದಿದ್ದು, ಸುಮಾರು 622 ಎಕರೆ ಪ್ರದೇಶವ್ಯಾಪ್ತಿಯ ಭತ್ತ, ಮೆಕ್ಕೆ, ನೂರಾರು ಅಡಕೆ ಮರಗಳು ಹಾನಿಗೊಳಗಾಗಿವೆ. ಚನ್ನಗಿರಿ ತಾಲೂಕೊಂದರಲ್ಲೇ ಸುಮಾರು 540 ಎಕರೆ ಭತ್ತದ ಬೆಳೆ ನಾಶವಾಗಿದೆ

ನೆಲಕಚ್ಚಿದ ಮದುವೆ ಮಂಟಪ, ನೆಂಟರಿಷ್ಟರು ಕಕ್ಕಾಬಿಕ್ಕಿ

ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಸಂಜೆ 5 ಗಂಟೆ ಸುಮಾರಿಗೆ ಭಾರಿ ಗಾಳಿಯೊಂದಿಗೆ ಆಲಿಕಲ್ಲು ಮಳೆ ಸುರಿದಿದ್ದು, ಕೆಂಭಾವಿ-ಮಲ್ಲಾ ರಸ್ತೆಯ ಎಸ್.ಬಿ.ಎಚ್ ಪ್ಯಾಲೇಸ್ ಕಲ್ಯಾಣ ಮಂಟಪದ ಪತ್ರಾಸಗಳು (ಟಿನ್‌ಶೆಡ್‌) ದೊಡ್ಡ ಕಬ್ಬಿಣದ ಯ್ಯಾಂಗಲ್ ಸಮೇತ ಹಾರಿ ಹೋಗಿವೆ. ಮದುಮಕ್ಕಳ ವೇದಿಕೆ, ಊಟದ ಹಾಲ್, ಪಾರ್ಕಿಂಗ್, ಅಡುಗೆ ಕೋಣೆ ಸೇರಿ ಇಡೀ ಕಲ್ಯಾಣ ಮಂಟಪ ಹಾನಿಗೊಳಗಾಗಿದೆ. ಈ ವೇಳೆ, ಇಲ್ಲಿ ಮದುವೆ ನಡೆಯುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಕೆಲವರು ಗಾಯಗೊಂಡಿದ್ದಾರೆ. ಘಟನೆಯಿಂದ ನೆಂಟರಿಷ್ಟರು ಕಕ್ಕಾಬಿಕ್ಕಿಯಾಗಿದ್ದು, ಅವಸರದಲ್ಲಿ ಮದುವೆ ಶಾಸ್ತ್ರ ಮುಗಿಸಿದರು.

ಬಿರುಗಾಳಿ ಮುನ್ಸೂಚನೆ, ಲಂಗರು ಹಾಕಿದ ಬೋಟುಗಳು

ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಹಾಗೂ ಅಲೆಗಳ ಅಬ್ಬರ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡುತ್ತಿದ್ದಂತೆ ಮೀನುಗಾರಿಕಾ ಬೋಟುಗಳು ಕಾರವಾರದ ಬೈತಖೋಲ ಬಂದರಿನಲ್ಲಿ ಲಂಗರು ಹಾಕಿವೆ. ಮುಂದಿನ 48 ಗಂಟೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಗಾಳಿ ಹಾಗೂ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಹಾಗೂ ಪ್ರವಾಸಿಗರಿಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ.