ಭಾರತ ಉದ್ಧಾರಕನ ಮೂಲ ಪಾಕಿಸ್ತಾನ: ಒಬಾಮಾಗೆ ಆಪ್ತಮಿತ್ರ ಮನಮೋಹನ್ ಸಿಂಗ್!
ನಾನು ಮನಮೋಹನ ಸಿಂಗ್ ದೊಡ್ಡ ಫ್ಯಾನ್ ಅಂದಿದ್ದ ಬರಾಕ್ ಒಬಾಮಾ! ಮನಮೋಹನ ಸಿಂಗ್ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಸ್ನೇಹ ವಿಶೇಷವಾಗಿತ್ತು.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅವರ ಮೌನದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಕಲ್ಲಿದ್ದಲು ಗಣಿ, 2ಜಿ ಸ್ಪೆಕ್ಟಂ ಹಂಚಿಕೆ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆ ವೇಳೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಬಂದಾಗ ಅವರು ಮೌನ ತಾಳಿದ್ದರ ಬಗ್ಗೆ ಬಿಜೆಪಿ ತೀವ್ರ ರೀತಿಯ ಟೀಕಾ ಪ್ರಹಾರ ನಡೆಸಿತ್ತು. ಪ್ರಧಾನಿಯಾಗಿದ್ದಷ್ಟೂ ಅವಧಿ ಮನಮೋಹನ್ ಸಿಂಗ್ ಅವರ ಮೌನವೇ ಉತ್ತರವಾಗಿತ್ತು.ಯಾವುದೇ ನಾಯಕರು ಟೀಕೆ ಮಾಡಿದರೂ ಅದಕ್ಕೆ ಉತ್ತರ ಕೊಡುವ ಗೋಜಿಗೇ ಹೋಗುತ್ತಿರಲಿಲ್ಲ.
ಡಾ | ಸಿಂಗ್ ಅವರು ವಾಗ್ರಿ ಅಲ್ಲ. ಕೆಲಸಕ್ಕೆ ಒತ್ತು ನೀಡಿ, ಮೌನದಿಂದಲೇ ಇರುತ್ತಿದ್ದರು. 2014ರ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಮನಮೋಹನ್ ಸಿಂಗ್ ಅವರ ಮೌನದ ಬಗ್ಗೆ ವ್ಯಂಗ್ಯ ವಾಡಿದ್ದರು. ಬಿಜೆಪಿ ನಾಯಕರು ಮನಮೋಹನ್ ಸಿಂಗ್ ಅವರಿಗೆ 'ಮೌನ'ಮೋಹನ್ ಸಿಂಗ್ ಎಂದು ಕರೆಯುವ ಮೂಲಕ ಲೇವಡಿ ಮಾಡಿದ್ದರು. ಇದಲ್ಲದೆ ಮನಮೋಹನ ಸಿಂಗ್ ಮೌನದ ಬಗ್ಗೆ ಜೋಕ್‌ಗಳೂ ಸಾಕಷ್ಟು ಪ್ರಮಾಣದಲ್ಲಿ ಹರಿದಾಡಿದ್ದವು.
ರಿಸರ್ವ್ ಬ್ಯಾಂಕ್ ಗವರ್ನರ್, ಯುಜಿಸಿಗೆ ಬಾಸ್ ಕೂಡ ಆಗಿದ್ದರು. ಪ್ರಧಾನಿ, ಹಣಕಾಸು ಸಚಿವರಾಗುವ ಮುನ್ನ ಮನಮೋಹನ್ ಸಿಂಗ್ ಅವರು ಆರ್ಥಿಕ ಬ್ಯಾಂಕ್ (ಆರ್‌ಬಿಐ) ನಿರ್ದೇಶಕರಾಗಿದ್ದರು. ಬಳಿಕ ಏಷ್ಯಾ ಅಭಿವೃದ್ಧಿ ಬ್ಯಾಂಕಿನ (ಎಡಿಬಿ) ನಿರ್ದೇಶಕ ಮಂಡಳಿಗೆ ಸೇರಿದ್ದರು. 1977ರಿಂದ 1980 ರವರೆಗೆ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡರು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅಂದರೆ 1982ರಲ್ಲಿ ಆರ್‌ಬಿಐ ಗವರ್ನರ್ ಹುದ್ದೆಗೇರಿದರು. 1985ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. 1990ರಿಂದ 1991 ರವರೆಗೆ ಪ್ರಧಾನ ಮಂತ್ರಿಗಳ ಹಣಕಾಸು ಸಲಹೆಗಾರರಾಗಿದ್ದರು. 1991ರಲ್ಲಿ ಹಣಕಾಸು ಸಚಿವರಾಗುವವರೆಗೆ ಯುಜಿಸಿಗೆ ಮೂರು ತಿಂಗಳ ಕಾಲ ಅಧ್ಯಕ್ಷರಾಗಿದ್ದರು.
ಒಬಾಮಾಗೆ ಆಪ್ತಮಿತ್ರ: ನಾನು ಮನಮೋಹನ ಸಿಂಗ್ ದೊಡ್ಡ ಫ್ಯಾನ್ ಅಂದಿದ್ದ ಬರಾಕ್ ಒಬಾಮಾ! ಮನಮೋಹನ ಸಿಂಗ್ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಸ್ನೇಹ ವಿಶೇಷವಾಗಿತ್ತು. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗಲೇ ಅಮೆರಿಕಕ್ಕೆ ಒಬಾಮಾ ಅಧ್ಯಕ್ಷರಾಗಿದ್ದರು. ಆ ವೇಳೆ, 2008ರಲ್ಲಿ ಅಮೆರಿಕದಲ್ಲಿ ಮಹಾನ್ ಆರ್ಥಿಕ ಕುಸಿತ ಸಂಭವಿಸಿತ್ತು. ಅದರ ಪ್ರಭಾವ ಭಾರತದ ಮೇಲೂ ಆಗಿತ್ತು. ಆದರೆ ಭಾರತಕ್ಕೆ ಹೆಚ್ಚು ನಷ್ಟವಾಗದಂತೆ ಮನಮೋಹನ ಸಿಂಗ್ ತೆಗೆದುಕೊಂಡ ಕ್ರಮಗಳು ಒಬಾಮಾ ಅವರಲ್ಲಿ ಅಚ್ಚರಿ ಮೂಡಿಸಿದ್ದವು.
ಇನ್ನು, ಒಬಾಮಾ ಜೊತೆಗೆ ಐತಿಹಾಸಿಕ ಭಾರತ-ಅಮೆರಿಕ ಅಣು ಒಪ್ಪಂದ ಕುದುರಿಸುವಲ್ಲಿ ಮನಮೋಹನ ಸಿಂಗ್ ಯಶಸ್ವಿಯಾಗಿದ್ದರು. ಹೀಗಾಗಿ ಇಬ್ಬರಲ್ಲೂ ವೈಯಕ್ತಿಕ ಬಾಂಧವ್ಯ ಬೆಳೆದಿತ್ತು. ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞರಲ್ಲಿ ಒಬ್ಬರು ಎಂದು ಒಬಾಮಾ ಅವರು ಸಿಂಗ್‌ರನ್ನು ಗೌರವಿಸುತ್ತಿದ್ದರು. ನಂತರ ಒಂದು ಸಮಾರಂಭದಲ್ಲಿ ಮಾತನಾಡುವಾಗ ಒಬಾಮಾ, 'ನಾನು ಮನಮೋಹನ ಸಿಂಗ್ ಅವರ ದೊಡ್ಡ ಅಭಿಮಾನಿ. ಅವರು ಭಾರತದ ಆರ್ಥಿಕತೆಯನ್ನು ಆಧುನಿಕಗೊಳಿಸಲು ಅಡಿಪಾಯ ಹಾಕಿದವರು' ಎಂದು ಹೊಗಳಿದ್ದರು.
2 ಬಾರಿ ಹೃದಯದ ಬೈಪಾಸ್ ಸರ್ಜರಿ: ಮನಮೋಹನ್ ಸಿಂಗ್ ಹೃದ್ರೋಗ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು. ದೀರ್ಘಕಾಲದಿಂದ ಮಧುಮೇಹಿಯಾಗಿದ್ದ ಅವರು, 1990ರಲ್ಲಿ ಲಂಡನ್‌ನಲ್ಲಿ ಮೊದಲ ಬಾರಿಗೆ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. 2004ರಲ್ಲಿ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿ ಹೃದಯಕ್ಕೆ ಸ್ಟಂಟ್ ಹಾಕಿಸಿಕೊಂಡಿದ್ದರು. 2009ರಲ್ಲಿ ಪ್ರಧಾನಿಯಾಗಿದ್ದಾಗ ದೆಹಲಿಯ ಏಮ್ ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸುಮಾರು 14 ತಾಸು ಈ ಸರ್ಜರಿ ನಡೆದಿತ್ತು. ಕಳೆದ ಮಾರ್ಚ್ ನಲ್ಲಿ ಸಂಸತ್ತಿನಲ್ಲಿ ಮನಮೋಹನ ಸಿಂಗ್ ಅವರು ಬಿದ್ದುಬಿಟ್ಟಿದ್ದರು. ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದರು.
ಜಗತ್ತಿನ ಅತ್ಯಂತ ಮೇಧಾವಿ ಪ್ರಧಾನಿ ಸಿಂಗ್: ಮನಮೋಹನ್ ಸಿಂಗ್ ಅವರನ್ನು ವಿಶ್ವದ ಅತ್ಯಂತ ಮೇಧಾವಿ ಪ್ರಧಾನಿ ಎಂದು ಬಣ್ಣಿಸಲಾಗುತ್ತದೆ. ಈವರೆಗೆ ಜಗತ್ತಿನ ವಿವಿಧ ರಾಷ್ಟ್ರಗಳ ಪ್ರಧಾನಿ ಪಟ್ಟ ಅಲಂಕರಿಸಿದವರು ಯಾರೂ ಅವರಷ್ಟು ಶಿಕ್ಷಣ ಪಡೆದಿಲ್ಲ. ಅರ್ಥಶಾಸ್ತ್ರದಲ್ಲಿ ಸಿಂಗ್ ಕೊಡುಗೆಗೆ ಒಟ್ಟು 14 ಗೌರವ ಡಿ.ಲಿಟ್ ಪದವಿ ಸಂದಿದೆ.
ಪಂಜಾಬ್ ಸರ್ಕಾರಕ್ಕೆ ಸಲಹೆಗಾರನಾಗಿ ಹುದ್ದೆ ನಿರ್ವಹಣೆ: 2014ರಲ್ಲಿ ಪ್ರಧಾನಿ ಪಟ್ಟದಿಂದ ಇಳಿದ ಬಳಿಕ ರಾಜ್ಯ ಸಭಾ ಸಂಸದರಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದ ಸಿಂಗ್ ಅವರು ಇತ್ತೀಚೆಗೆ ಪಂಜಾಬ್ ಸರ್ಕಾರದ ಆರ್ಥಿಕ ಸಮಿತಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಕೋವಿಡ್‌ನಿಂದ ತತ್ತರಿಸಿರುವ ಆರ್ಥಿಕತೆಯ ಪುನಶ್ವೇತನಕ್ಕೆ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ನೇತೃತ್ವದಲ್ಲಿ ಪಂಜಾಬ್ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.