- Home
- News
- India News
- ಜಮ್ಮು-ಕಾಶ್ಮೀರ ಮಾಜಿ ಗವರ್ನರ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಬೆನ್ನಲ್ಲೇ ಆಸ್ಪತ್ರೆಯಲ್ಲಿರುವ ಫೋಟೋ ರಿಲೀಸ್!
ಜಮ್ಮು-ಕಾಶ್ಮೀರ ಮಾಜಿ ಗವರ್ನರ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಬೆನ್ನಲ್ಲೇ ಆಸ್ಪತ್ರೆಯಲ್ಲಿರುವ ಫೋಟೋ ರಿಲೀಸ್!
ಜಮ್ಮು ಮತ್ತು ಕಾಶ್ಮೀರದ ₹2,200 ಕೋಟಿ ಮೌಲ್ಯದ ಕಿರು ಜಲವಿದ್ಯುತ್ ಯೋಜನೆಯ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತು ಇತರ ಐವರ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ. ಮೂರು ವರ್ಷಗಳ ತನಿಖೆಯ ನಂತರ, ಕಿಶ್ತ್ವಾರ್ ಜಿಲ್ಲೆಯ ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ ಒಪ್ಪಂದದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಆರೋಪಪತ್ರ ಸಲ್ಲಿಸಲಾಗಿದೆ.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ₹2,200 ಕೋಟಿ ಮೌಲ್ಯದ ಕಿರು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ, ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತು ಇತರ ಐವರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಪ್ರಕರಣವು ಕಿಶ್ತ್ವಾರ್ ಜಿಲ್ಲೆಯಲ್ಲಿನ ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಕೆಇಚ್ಪಿ) ಗೆ ಸಂಬಂಧಿಸಿದ ನಾಗರಿಕ ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣವಾಗಿದೆ. ಮೂರು ವರ್ಷಗಳ ತನಿಖೆಯ ನಂತರ, ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪತ್ರದಲ್ಲಿ ಮಲಿಕ್ ಮತ್ತು ಇತರ ಆರು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ (CVPPPL) ನ ಆಗಿನ ಅಧ್ಯಕ್ಷ ನವೀನ್ ಕುಮಾರ್ ಚೌಧರಿ, ಅಧಿಕಾರಿಗಳಾದ ಎಂ.ಎಸ್. ಬಾಬು, ಎಂ.ಕೆ. ಮಿತ್ತಲ್ ಮತ್ತು ಅರುಣ್ ಕುಮಾರ್ ಮಿಶ್ರಾ ಮತ್ತು ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. 47 ನೇ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ಮರು-ಟೆಂಡರ್ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿಲ್ಲ ಮತ್ತು ಅಂತಿಮವಾಗಿ ಒಪ್ಪಂದವನ್ನು ಅನುಚಿತವಾಗಿ ಕೊಡಲಾಯ್ತು ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಗುರುವಾರ ಸಿಬಿಐ ಎಫ್ಐಆರ್ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಸತ್ಯಪಾಲ್ ಮಲಿಕ್ ಅವರ ಅಧಿಕೃತ 'ಎಕ್ಸ್' (ಹಳೆಯ ಟ್ವಿಟರ್) ಖಾತೆಯಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿಕೊಂಡಿರುವ ಫೋಟೋವನ್ನು ಹಂಚಿಕೊಂಡು, ತಮ್ಮ ಆರೋಗ್ಯ ಸ್ಥಿತಿ "ತುಂಬಾ ಕೆಟ್ಟಿದೆ" ಎಂದು ತಿಳಿಸಿದ್ದಾರೆ.
ಆಗಸ್ಟ್ 23, 2018 ರಿಂದ ಅಕ್ಟೋಬರ್ 30, 2019 ರವರೆಗೆ ಮಲಿಕ್ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು, ಈ ಸಮಯದಲ್ಲಿ ಯೋಜನೆಗೆ ಸಂಬಂಧಿಸಿದ ಒಂದು ಫೈಲ್ ಸೇರಿದಂತೆ ಎರಡು ಫೈಲ್‌ಗಳಿಗೆ ಸಹಿ ಹಾಕಲು ತಮಗೆ 300 ಕೋಟಿ ರೂ. ಲಂಚದ ಆಫರ್ ನೀಡಲಾಗಿತ್ತು ಎಂದು ಹೇಳಿಕೊಂಡಿದ್ದರು. ಆದರೆ ಲಂಚದ ಆಫರ್ ಅನ್ನು ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದರು. ಹೀಗಾಗಿ ಈ ಭಷ್ಟಚಾರದಲ್ಲಿ ಭಾಗಿಯಾದವರ ಬಗ್ಗೆ ತನಿಖೆ ನಡೆಸುವುದು ಬಿಟ್ಟು ತನ್ನ ವಿರುದ್ಧವೇ ತನಿಖೆ ನಡೆಯುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಈ ಪ್ರಕರಣದ ಮುಂದಿನ ಹಂತಗಳಲ್ಲಿ ನ್ಯಾಯಾಲಯದ ವಿಚಾರಣೆಗಳು ನಡೆಯಲಿದ್ದು, ಸತ್ಯಪಾಲ್ ಮಲಿಕ್ ಮತ್ತು ಇತರ ಆರೋಪಿಗಳ ವಿರುದ್ಧದ ಆರೋಪಗಳ ಸತ್ಯಾಸತ್ಯತೆ ನಿರ್ಧರಿಸಲಾಗುವುದು.
ಕಳೆದ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಿರು ಜಲವಿದ್ಯುತ್ ಯೋಜನೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸತ್ಯಪಾಲ್ ಮಲಿಕ್ ಅವರ ನಿವಾಸ ಹಾಗೂ ದೇಶದಾದ್ಯಂತ 29 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ದೆಹಲಿ, ಮುಂಬೈ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಹಲವು ನಗರಗಳ 30 ಸ್ಥಳಗಳಲ್ಲಿ ಸುಮಾರು 100 ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿತ್ತು. ಆರ್ ಕೆ ಪುರಂ, ದ್ವಾರಕಾ ಮತ್ತು ದೆಹಲಿಯ ಏಷ್ಯನ್ ಗೇಮ್ಸ್ ವಿಲೇಜ್‌ನಲ್ಲಿರುವ ಮಲಿಕ್ ಅವರಿಗೆ ಸೇರಿದ ನಿವಾಸಗಳು ಮತ್ತು ಗುರುಗ್ರಾಮ್ ಹಾಗೂ ಬಾಗ್‌ಪತ್‌ನಲ್ಲಿರುವ ಆಸ್ತಿಗಳ ಮೇಲೆ ಸಿಬಿಐ ರೇಡ್ ಮಾಡಿತ್ತು.
ಮಲಿಕ್ ನಿವಾಸ ಮಾತ್ರವಲ್ಲದೆ ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿ ಮತ್ತು ಪಟೇಲ್ ಇಂಜಿನಿಯರಿಂಗ್ ಲಿಮಿಟೆಡ್‌ನ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೂ ಸಿಬಿಐ ದಾಳಿ ಮಾಡಿತ್ತು. ಅಂದು ದಾಳಿ ಆದಾಗಲೂ ಮಲಿಕ್ ತಾನು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದೇನೆ. ನಾನು ರೈತನ ಮಗ, ರೈತರೊಂದಿಗೆ ನಾನಿದ್ದೇನೆ ದಂದು ತಮ್ಮ ಎಕ್ಷ್ ನಲ್ಲಿ ಬರೆದುಕೊಂಡಿದ್ದರು.