ಪಹಲ್ಗಾಮ್ ಉಗ್ರರ ದಾಳಿ: ಕನ್ನಡಿಗ ಸೇರಿ 24ಕ್ಕೂ ಹೆಚ್ಚು ಬಲಿ, ರಕ್ತಸಿಕ್ತ ಚಿತ್ರಣ!
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಪ್ರವಾಸಿಗ ಮಂಜುನಾಥ್ ರಾವ್ ಮೃತಪಟ್ಟಿದ್ದಾರೆ. ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಅವರು ಪತ್ನಿ ಮತ್ತು ಮಗನೊಂದಿಗೆ ಪ್ರವಾಸಕ್ಕೆಂದು ಕಾಶ್ಮೀರಕ್ಕೆ ತೆರಳಿದ್ದರು.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕ ಪ್ರವಾಸಿಗ ಮಂಜುನಾಥ್ ರಾವ್ ಮೃತಪಟ್ಟಿದ್ದಾರೆ. ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ 24ಕ್ಕೂ ಹೆಚ್ಚು ಮಂದಿ ಉಗ್ರರ ದಾಳಿಗೆ ಬಲಿಯಾಗಿದ್ದು, ಹಲವು ಪ್ರವಾಸಿಗರು ಗಾಯಗೊಂಡಿದ್ದಾರೆ.
ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ತಮ್ಮ ಪತ್ನಿ ಪಲ್ಲವಿ ಮತ್ತು ಮಗ ಅಭಿಜೈ ಜೊತೆಗೆ ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.
Breaking: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಸಾವು!
ಗಂಡಸರಿಗೆ ಮಾತ್ರ ಹೊಡೆದಿದ್ದಾರೆ. ಹೆಂಗಸರು ಮತ್ತು ಮಕ್ಕಳಿಗೆ ಏನೂ ಮಾಡಿಲ್ಲ. ನನ್ನ ಜೊತೆ ಬಂದಿರುವ ಡ್ರೈವರ್ ತುಂಬಾ ಒಳ್ಳೆಯವರು. ಘಟನೆ ಕೊನೆವರೆಗೂ ನಮ್ಮ ಜೊತೆಯಲ್ಲೇ ಇದ್ದಾರೆ. ಅವರು ಎಲ್ಲೂ ಹೋಗಿಲ್ಲ. ಉಗ್ರರು ನಾವಿದ್ದಲ್ಲಿಗೆ ಗನ್ ಹಿಡಿದುಕೊಂಡು ಬಂದು ಹೊಡೆದಿದ್ದಾರೆ. ಗಂಡಸರನ್ನು ಮಾತ್ರ ಹುಡುಕಿ ಹುಡುಕಿ ಹೊಡೆದಿದ್ದಾರೆ. ಅಕಸ್ಮಾತ್ ಆಗಿ ತಾಗಿ ಹೆಂಗಸರು ಮತ್ತು ಮಕ್ಕಳಿಗೆ ಗಾಯವಾಗಿದೆ. ಮದುವೆ ಆಗಿ ಬಂದಿದ್ದ ಕಪಲ್‌ಗಳನ್ನು ಹುಡುಕಿ ಗಂಡಸರನ್ನು ಹಿಂದೂಗಳೇ ಎಂಬುದನ್ನು ಗುರುತಿಸಿ ಗುಂಡು ಹಾರಿಸಿದ್ದಾರೆ. ಊರಿಂದ ನಾವು 3 ಜನ ಮಾತ್ರ ಬಂದಿದ್ದೆವು ನಮಗೆ ಒಂದು ಫ್ಲೈಟ್ ಅರೇಂಜ್ ಮಾಡಿ ನಮ್ಮನ್ನ ನಮ್ಮೂರಿಗೆ ಕಳಿಸಿಕೊಡಿ. ನಮ್ಮನೆಯವರ ಬಾಡಿ ಸಮೇತ ನಮ್ಮನ್ನು ಊರಿಗೆ ಕರಿಸಿಕೊಳ್ಳಿ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗೆ ಮೃತ ಮಂಜುನಾಥ್ ಅವರ ಪತ್ನಿ ಪಲ್ಲವಿ ಮಾತನಾಡಿದ್ದಾರೆ.
ಬೈಸರನ್ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಕಾಲ್ನಡಿಗೆ ಅಥವಾ ಕುದುರೆಗಳ ಮೂಲಕ ಮಾತ್ರ ಪ್ರವೇಶಿಸಬಹುದಾದ ಹುಲ್ಲುಗಾವಲು ಪ್ರದೇಶವಾಗಿದ್ದುದರಿಂದ ಪ್ರವಾಸಿಗರು ಹೆಚ್ಚಾಗಿ ಬರುವ ಪ್ರದೇಶ ಇದಾಗಿದೆ. ಹಲವು ಪ್ರವಾಸಿಗರು ಗಾಯಗೊಂಡಿದ್ದು, ಕನಿಷ್ಟ 25 ಮಂದಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಸ್ಥಳದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ.
ಭದ್ರತಾ ಪಡೆಗಳನ್ನು ಪ್ರದೇಶಕ್ಕೆ ರವಾನಿಸಲಾಗಿದ್ದು, ಪ್ರಸ್ತುತ ಕಾರ್ಯಾಚರಣೆ ನಡೆಯುತ್ತಿದೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಅಪರಿಚಿತ ಬಂದೂಕುಧಾರಿಗಳು ಪ್ರವಾಸಿಗರ ಮೇಲೆ ಹತ್ತಿರದಿಂದ ಗುಂಡು ಹಾರಿಸಿದರು, ಇದರ ಪರಿಣಾಮವಾಗಿ ಹಲವಾರು ಜನರು ಗಾಯಗೊಂಡರು.
ನನ್ನ ಗಂಡನ ತಲೆಗೆ ಗುಂಡು ಹಾರಿಸಲಾಗಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ" ಎಂದು ಬದುಕುಳಿದ ಮಹಿಳೆಯೊಬ್ಬರು ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆ xನಲ್ಲಿ ಮಾಹಿತಿ ಹಂಚಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ,ಘಟನೆಯ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದ್ದೇನೆ. ಸಂಬಂಧಿತ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ್ದೇನೆ. ಶೀಘ್ರದಲ್ಲೇ ಶ್ರೀನಗರಕ್ಕೆ ತೆರಳಲಿದ್ದೇನೆ. ಎಲ್ಲಾ ಸಂಸ್ಥೆಗಳೊಂದಿಗೆ ತುರ್ತು ಭದ್ರತಾ ಪರಿಶೀಲನಾ ಸಭೆ ನಡೆಸುತ್ತೇನೆ ಎಂದು ಹೇಳಿದ್ದಾರೆ. ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ದುಃಖಿತನಾಗಿದ್ದೇನೆ. ಈ ಹೇಯ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡಲಾಗುವುದಿಲ್ಲ, ಮತ್ತು ಅತ್ಯಂತ ಕಠಿಣ ಪರಿಣಾಮಗಳನ್ನು ಬೀರುವ ದುಷ್ಕರ್ಮಿಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮಂಜುನಾಥ ರಾವ್ ಭಯೋತ್ಪಾದಕರ ದಾಳಿಗೆ ಸಾವು ಹಿನ್ನೆಲೆ ಶಿವಮೊಗ್ಗದ ವಿಜಯನಗರದಲ್ಲಿರುವ ನಿವಾಸ ಎದುರು ಸಂಬಂಧಿಕರು ಹಾಗೂ ಸ್ನೇಹಿತರು ಆಗಮಿಸಿದ್ದಾರೆ. ಮಂಜುನಾಥ್ ರಾವ್ ನಿವಾಸಕ್ಕೆ ಬಂದಿದ್ದ ಚಂದ್ರಶೇಖರ್ ಹೇಳಿಕೆ ನೀಡಿ ಕಳೆದ ವಾರ ನಾವು ಕೂಡ ಜಮ್ಮು ಪ್ರವಾಸಕ್ಕೆ ಹೋಗಿದ್ದೆವು. ಭಯೋತ್ಪಾದಕರ ದಾಳಿ ನಡೆದ ಮಿನಿ ಸೀಸನ್ ಪ್ರದೇಶಕ್ಕೆ ಕುದುರೆ ಮೇಲೆ ಹೋಗಬೇಕು. ಈ ಸಂದರ್ಭದಲ್ಲಿ ದಾಳಿ ನಡೆದಿದೆ. ನಮಗೂ ಕೂಡ ಈಗಷ್ಟೇ ಮಾಹಿತಿ ತಿಳಿದಿದೆ . ಮಂಜುನಾಥ್ ರಾವ್ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ. ಪತ್ನಿ ಪಲ್ಲವಿ ಮ್ಯಾಮ್ಕೋಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಗಂಡ ಹೆಂಡತಿ ಮತ್ತು ಮಗ ಪ್ರವಾಸಕ್ಕೆ ನಾಲ್ಕು ದಿನಗಳ ಹಿಂದೆ ತೆರಳಿದ್ದರು. ಅವರ ಮನೆಯಲ್ಲಿ ತಾಯಿ ಮಾತ್ರ ಇದ್ದಾರೆ ಎಂದಿದ್ದಾರೆ.