Border Friendship ಹೊಸ ವರ್ಷಕ್ಕೆ ಪಾಕಿಸ್ತಾನ, ಚೀನಾ ಸೇನೆಗೆ ಸಿಹಿ ಹಂಚಿ ಮಹತ್ವದ ಸಂದೇಶ ಸಾರಿದ ಭಾರತೀಯ ಸೇನೆ!
- ಅಂತಾರಾಷ್ಟ್ರೀಯ ಗಡಿಯಲ್ಲಿ ಹೊಸ ವರ್ಷ ಆಚರಿಸಿದ ಭಾರತೀಯ ಸೇನೆ
- ಪಾಕಿಸ್ತಾನ ಹಾಗೂ ಚೀನಾ ಸೇನಗೆ ಗಡಿಯಲ್ಲಿ ಸಿಹಿ ಹಂಚಿದ ಭಾರತೀಯ ಸೇನೆ
- ಗಡಿಯಲ್ಲಿ ಸ್ನೇಹ, ಶಾಂತಿ ಸಂದೇಶದ ಜೊತೆ ಹೊಸ ವರ್ಷ ಆಚರಣೆ
ವಿಶ್ವವೇ ಹೊಸ ವರ್ಷವನ್ನು(New Year 2022) ಸಂತೋಷ, ಪ್ರೀತಿಯಿಂದ ಬರಮಾಡಿಕೊಂಡಿದೆ. ಹೊಸ ವರ್ಷವನ್ನು ಅಷ್ಟೇ ಸಂಭ್ರಮದಿಂದ ಆಚರಿಸಿದ್ದಾರೆ. ದೇಶವನ್ನು ಶತ್ರುಗಳು, ಉಗ್ರರ ದಾಳಿಯಿಂದ ಕಾಪಾಡುತ್ತಿರುವ ಭಾರತೀಯ ಸೇನೆ(India Army) ಕೂಡ ಹೊಸ ವರ್ಷವನ್ನು ಆಚರಿಸಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಸೇನೆ, ಪಾಕಿಸ್ತಾನ ಸೇನೆ ಹಾಗೂ ಚೀನಾ ಸೇನೆಗೆ ಸಿಹಿ ಹಂಚಿ ಹೊಸ ವರ್ಷ ಆಚರಿಸಿದೆ. ಈ ಮೂಲಕ ಗಡಿಯಲ್ಲಿ ಶಾಂತಿ ಸಂದೇಶವನ್ನು ಭಾರತೀಯ ಸೇನೆ ಸಾರಿದೆ.
ಜನವರಿ 1, 2022ರ ಹೊಸ ವರ್ಷದ ದಿನ ಭಾರತೀಯ ಸೇನೆ, ಪಾಕಿಸ್ತಾನದ ಚಿಲೆಹನಾ-ತಿತ್ವಾಲ್ ಕ್ರಾಸಿಂಗ್ ಪಾಯಿಂಟ್‌ನಲ್ಲಿ ಪಾಕ್ ಸೇನೆಗೆ ಸಿಹಿ ತಿಂಡಿ ನೀಡಿ ಹೊಸ ವರ್ಷದ ಶುಭಾಶಯ ಕೋರಿತು. ಇದೇ ವೇಳೆ ಭಾರತ ಹಾಗೂ ಪಾಕಿಸ್ತಾನ ಗಡಿಯುದ್ದಕ್ಕೂ ಶಾಂತಿ ಕಾಪಾಡುವ ಬದ್ಧತೆಯನ್ನು ಒತ್ತಿಹೇಳಿದೆ. ಉಭಯ ದೇಶಗಳಿಗೆ ತಮ್ಮ ನೆಲವನ್ನು ಕಾಪಾಡುವ ಬದ್ಧತೆ, ಜವಾಬ್ದಾರಿ ಇದೆ. ಆದರೆ ಅಪ್ರಚೋದಿತ ದಾಳಿ ಸೇರಿದಂತೆ ಯಾವುದೇ ಅಶಾಂತಿ ಕದಡುವ ಪ್ರಯತ್ನವಾಗಬಾರದು. ಹೊಸ ವರ್ಷ ಶಾಂತಿ, ಸಮೃದ್ಧಿ ತರಲಿ ಎಂದು ಭಾರತೀಯ ಸೇನೆ ಶುಭಕೋರಿದೆ.
ಭಾರತೀಯ ಸೇನೆಯ ಹೊಸ ವರ್ಷವನ್ನು ಪಾಕಿಸ್ತಾನ ಸೇನೆಗೆ ಸಿಹಿ ಹಂಚಿ ಆಚರಿಸುವ ಜೊತೆಗೆ ಶಾಂತಿ ಸಂದೇಶವನ್ನು ಸಾರಿದೆ. ಇದೇ ವೇಳೆ ಪಾಕಿಸ್ತಾನ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಲಡಾಖ್ ಪ್ರಾಂತ್ಯದಲ್ಲಿ ಗಡಿ ಹಂಚಿಕೊಂಡಿರುವ ಚೀನಾ ಜೊತೆಗೂ ಭಾರತೀಯ ಸೇನೆ ಹೊಸ ವರ್ಷವನ್ನು ಅತ್ಯಂತ ಸ್ನೇಹಯುತವಾಗಿ ಆಚರಿಸಿದೆ. ಇತ್ತೀಚೆಗೆ ದಿನಗಳಲ್ಲಿ ಭಾರತ ಅತೀ ಹೆಚ್ಚು ಆತಂಕ ಎದುರಿಸಿರುವುದು ಚೀನಾದಿಂದ. ಗಲ್ವಾನ್ ಕಣಿವೆ ಕದನ, ಪ್ಯಾಂಗಾಂಗ್ ಸರೋವರ ಕಿರಿಕ್ ಸೇರಿದಂತೆ ಬಹುತೇಕ ಪಾಯಿಂಟ್ಸ್‌ಗಳಲ್ಲಿ ಚೀನಾ, ಭಾರತದ ಜೊತೆ ಯುದ್ಧಕ್ಕೆ ನಿಂತಿದೆ.
ಆದರೆ ಭಾರತದ ಸತತ ಮಾತುಕತೆ ಮೂಲಕ ಚೀನಾ ಸಮಸ್ಯೆಯನ್ನು ಒಂದು ಹಂತಕ್ಕೆ ಅಂತ್ಯಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಇದೀಗ ಹೊಸ ವರ್ಷದ ಶುಭದಿನ ಚೀನಾ ಸೇನೆಗೆ ಸಿಹಿ ಹಂಚಿ ಹೊಸ ವರ್ಷದ ಶುಭಾಶಯ ಕೋರಿದೆ. ಇದೇ ವೇಳೆ ಗಡಿಯಲ್ಲಿ ಶಾಂತಿ ಸ್ಥಾಪಿಸಲು ಪ್ರಮುಖ ಆದ್ಯತೆ ನೀಡುವಂತೆ ಮಹತ್ವದ ಸಂದೇಶ ಸಾರಿದೆ.
ಭಾರತ ಚೀನಾದ ಕೆಕೆ ಪಾಸ್, ಡಿಬಿಒ, ಅಡಚಣೆ, ಕೊಂಕಲಾ, ಚುಶುಲ್ ಮೊಲ್ಡೊ, ಡೆಮ್ಚೋಕ್ ಹಾಟ್ಸ್ಪ್ರಿಂಗ್, ನಾಥುಲಾ, ಕೊಂಗ್ರಾಳ, ಬಮ್ ಲಾ ಹಾಗೂ ವಾಚಾ ದಮೈ ಸೇರಿದ 10 ಪಾಯಿಂಟ್ಸ್‌ಗಳಲ್ಲಿ ಭಾರತೀಯ ಸೇನೆ ಚೀನಾ ಸೇನೆಗೆ ಸಿಹಿ ಹಂಚಿ ಶುಭಾಶಕೋರಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಭಾರತೀಯ ಸೇನೆ ಅವಿರತ ಪ್ರಯತ್ನ ಮಾಡುತ್ತಿದೆ. ಗಡಿಯುದ್ದಕ್ಕೂ ಪಹರೆ ಜೊತೆಗೆ ಗಡಿ ಪ್ರದೇಶದ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಕದನ ವಿರಾಮ ಒಪ್ಪಂದ ಮಾಡಿದ ಬಳಿಕ ಗಡಿ ನಿಯಂತ್ರಣ ರೇಖೆಯಲ್ಲಿ ಸುದೀರ್ಘ ಶಾಂತಿ ನೆಲೆಸುವಂತೆ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಇದರ ನಡುವೆ ಕೆಲ ದಾಳಿ, ಭಯೋತ್ಪಾದಕಾ ಚಟುವಟಿಕೆಗಳು ನಡೆದಿದೆ. ಇದೀಗ ಹೊಸ ವರ್ಷಕ್ಕೆ ಭಾರತದ ಜೊತೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನ ಹಾಗೂ ಚೀನಾ ಸೇನೆಗೆ ಸಿಹಿ ಹಂಚುವ ಮೂಲಕ ಶಾಂತಿ ಕಾಪಾಡಲು ಎಲ್ಲಾ ಪ್ರಯತ್ನ ಮಾಡಿದೆ. ಗಡಿ ನಿಯಂತ್ರಣ ರೇಖೆಯಲ್ಲಿರುವ ಗ್ರಾಮಗಳಲ್ಲಿ ಶಾಂತಿ ಕಾಪಾಡಲು ಭಾರತೀಯ ಸೇನೆಯ ಪ್ರಯತ್ನಗಳನ್ನು ಜನರು ಶ್ಲಾಘಿಸಿದ್ದಾರೆ.
ಭಾರತೀಯ ಸೇನೆ ಈ ಹೊಸ ವರ್ಷವನ್ನು ಪಾಕಿಸ್ತಾನ ಹಾಗೂ ಚೀನಾ ಸೇನೆಗೆ ಸಿಹಿ ಹಂಚಿ ಆಚರಿಸಿದೆ. ಶಾಂತಿ ಸಂದೇಶ ಸಾರುತ್ತಾ ಉಭಯ ದೇಶಗಳ ಜೊತೆ ಉತ್ತಮ ಸಂಬಂಧ ಹೊಂದಲು ಬಯಸಿದೆ