ಪ್ರೇಮಿಗಳು ಅಪ್ಪಿಕೊಳ್ಳುವುದು, ಕಿಸ್ ಮಾಡೋದು ಅಪರಾಧವಲ್ಲ: ಹೈಕೋರ್ಟ್
ಮದ್ರಾಸ್ ಹೈಕೋರ್ಟ್ ಪ್ರೇಮಿಗಳ ಚುಂಬನವನ್ನು ಅಪರಾಧವಲ್ಲ ಎಂದು ತೀರ್ಪು ನೀಡಿದೆ. ಎಫ್ಐಆರ್ ರದ್ದುಗೊಳಿಸಿ, ಯುವಕನ ಪರ ನ್ಯಾಯಾಲಯ ನಿಂತಿದೆ.
ಮದ್ರಾಸ್ ಹೈಕೋರ್ಟ್ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಪ್ರೇಮಿಗಳ ಅಪ್ಪುವಿಕೆ ಮತ್ತು ಚಂಬಿಸುವುದು ಸಹಜವಾಗಿದ್ದು, ಅದನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ.
ಆರೋಪಿ ಯುವಕ ಸಂತಗಣೇಶ್ ಎಂಬವರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ್ ವೆಂಕಟೇಶ್, ಎಫ್‌ಐಆರ್ ರದ್ದುಗೊಳಿಸಿ ಆದೇಶಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ನ್ಯಾಯಾಲಯ ಸೂಚಿಸಿದೆ.
ಯುವಕ ಸಂತಗಣೇಶ ಎರಡು ವರ್ಷಗಳಿಂದ ದೂರುದಾರೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. 13 ನವೆಂಬರ್ 2022 ರಂದು ದೂರುದಾರೆಯನ್ನು ಸಂತಗಣೇಶ ಚುಂಬಿಸಿದ್ದರು. ಮದುವೆ ಬಗ್ಗೆ ಕೇಳಿದ್ರೆ ಸಂತಗಣೇಶ ಅಂತರ ಕಾಯ್ದುಕೊಳ್ಳುತ್ತಿದ್ದಾನೆ ಎಂದು ಆರೋಪಿಸಿ ಯುವತಿ ದೂರು ದಾಖಲಿಸಿದ್ದಳು. ಈ ಸಂಬಂಧ ಸಂತಗಣೇಶ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಈ ಎಫ್‌ಐಆರ್ ರದ್ದುಕೋರಿ ಸಂತಗಣೇಶ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ ಅಡಿಯಲ್ಲಿ ಪ್ರಕರಣ ರದ್ದುಗೊಳಿಸುವಂತೆ ಸೂಚಿಸಿದೆ.
ಸೆಕ್ಷನ್ 354ಎ ಪ್ರಕಾರ, ಅಪರಾಧ ಪ್ರಕರಣ ದಾಖಲಾಗಬೇಕಾದ್ರೆ ಪುರುಷ ದೈಹಿಕ ಸಂಬಂಧ ಹೊಂದಿರಬೇಕಾಗುತ್ತದೆ. ಪ್ರೀತಿಯಲ್ಲಿ ಗೆಳೆಯ ಮತ್ತು ಗೆಳತಿಯರು ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದು ಮತ್ತು ಚುಂಬಿಸುವುದು ಸಹಜ. ಹಾಗಾಗಿ ಇದು ಅಪರಾಧ ಮತ್ತು ಲೈಂಗಿಕ ಕಿರುಕುಳ ಆಗಲ್ಲ ಎಂದು ನ್ಯಾಯಾಲಯ ಹೇಳಿದೆ.
ಸೆಕ್ಷನ್ 354ಎ ಅಡಿಯಲ್ಲಿ ಸಂತಗಣೇಶ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಆಗಲಿದೆ. ಅರ್ಜಿದಾರ ಯುವಕರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ ಎಂಬುದನ್ನು ಸಹ ನ್ಯಾಯಾಲಯ ಹೇಳಿದೆ.