- Home
- News
- India News
- ಚುನಾವಣಾ ಆಯೋಗಕ್ಕೆ ಎಸ್‌ಐಆರ್ ನಡೆಸುವ ಹಕ್ಕಿದೆ, ಪರಿಷ್ಕರಣ ಸಂವಿಧಾನ, ಕಾನೂನು ವಿರೋಧಿ ಅಲ್ಲ: ಸುಪ್ರೀಂ
ಚುನಾವಣಾ ಆಯೋಗಕ್ಕೆ ಎಸ್‌ಐಆರ್ ನಡೆಸುವ ಹಕ್ಕಿದೆ, ಪರಿಷ್ಕರಣ ಸಂವಿಧಾನ, ಕಾನೂನು ವಿರೋಧಿ ಅಲ್ಲ: ಸುಪ್ರೀಂ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಚುನಾವಣಾ ಆಯೋಗದ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ನ್ಯಾಯಸಮ್ಮತ ಚುನಾವಣೆಗೆ ಇದು ಜೀವಸೆಲೆ ಎಂದು ಬಣ್ಣಿಸಿರುವ ನ್ಯಾಯಾಲಯ, ಈ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.

ನ್ಯಾಯಸಮ್ಮತ ಚುನಾವಣೆಗೆ ಸರ್ ಜೀವಸೆಲೆ
ನವದೆಹಲಿ: ಮತದಾರರಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಹಕ್ಕನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ನ್ಯಾಯಸಮ್ಮತ ಚುನಾವಣೆ ನಡೆಸುವ ಸಂವಿಧಾನದ ಆಶಯಕ್ಕೆ ವಿಶೇಷ ಮತಪಟ್ಟಿ ಪರಿಷ್ಕರಣೆ ಜೀವಸೆಲೆ ಎಂದು ಬಣ್ಣಿಸಿದೆ. ಈ ಮೂಲಕ ಚುನಾವಣಾ ಆಯೋಗದ ಹಕ್ಕನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾ ಮಾಡಿದೆ. ಅಲ್ಲದೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಕೂಡಲೇ ಅದು ಅವರ ಕಾನೂನಾತ್ಮಕವಾಗಿ ಪೌರತ್ವವನ್ನೇನು ರದ್ದುಪಡಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಎಸ್‌ಐಆರ್ ಪ್ರಶ್ನಿಸಿ ಸಲ್ಲಿಸಿದ್ದ ಹಲವು ಅರ್ಜಿ
ಬಿಹಾರದಲ್ಲಿ ನಡೆಸಿದ ‘ಸರ್’ ಪ್ರಶ್ನಿಸಿ ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಬಿಹಾರದ ಬಳಿಕ ಬಂಗಾಳದಲ್ಲಿ ನಡೆಸಿದ ಮತಪಟ್ಟಿ ಪರಿಷ್ಕರಣೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜೊತೆಗೆ ಮುಂದಿನ ಹಂತದಲ್ಲಿ ಕರ್ನಾಟಕ ಸೇರಿ 20 ರಾಜ್ಯಗಳಲ್ಲಿ ನಡೆಸುವ ಇದೇ ಪ್ರಕ್ರಿಯೆಗೆ ಭಾರೀ ಆಕ್ಷೇಪ ವ್ಯಕ್ತವಾಗಿರುವ ಹೊತ್ತಿನಲ್ಲೇ ಈ ಮಹತ್ವದ ಆದೇಶ ಹೊರಬಿದ್ದಿದೆ.
ಕರ್ನಾಟಕ, ಪಶ್ಟಿಮ ಬಂಗಾಳ ಸೇರಿ ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ಉದ್ದೇಶ ಹೊಂದಿದೆ. ಈ ರೀತಿ ಎಸ್‌ಐಆರ್ ನಡೆಸುವ ಸಂವಿಧಾನಬದ್ಧ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಕೋರ್ಟ್ ಹೇಳಿದ್ದೇನು?
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಮತಪಟ್ಟಿ ಪರಿಷ್ಕರಣೆ ಕಾರ್ಯವನ್ನು ಚುನಾವಣಾ ಆಯೋಗ ಮಾಡುತ್ತಿದೆ. ಸಂವಿಧಾನ ಹಾಗೂ ಜನಪ್ರಾತಿನಿಧ್ಯ ಕಾಯ್ದೆಯಡಿ ಎಸ್‌ಐಆರ್ ನಡೆಸಲು ಚುನಾವಣಾ ಆಯೋಗಕ್ಕೆ ಪೂರ್ಣ ಅಧಿಕಾರವಿದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಕೆಲ ನಿರ್ದಿಷ್ಟ ಪ್ರಕ್ರಿಯೆಗಳನ್ನು ಪಾಲಿಸಿಲ್ಲ ಎಂದ ಮಾತ್ರಕ್ಕೆ ಇಡೀ ಎಸ್‌ಐಆರ್ ಪ್ರಕ್ರಿಯೆ ರದ್ದು ಮಾಡಲು ಸಾಧ್ಯವಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಜನಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ. ಬದಲಾಗಿ ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಗೆ ಉಸಿರು ನೀಡುತ್ತದೆ. ಚುನಾವಣಾ ಆಯೋಗಕ್ಕೆ ಸಂವಿಧಾನದ 324ನೇ ಆರ್ಟಿಕಲ್ ಮತ್ತು ಜನಪ್ರಾತಿನಿಧ್ಯ ಕಾಯ್ದೆಯ 21(3)ನೇ ವಿಧಿಯಡಿ ಎಸ್‌ಐಆರ್ ನಡೆಸುವ ಪೂರ್ಣ ಅಧಿಕಾರ ಇದೆ ಎಂದು ಹೇಳಿದೆ.
ಏಕೆ ಅನಿವಾರ್ಯ?
ನಾಲ್ಕು ದಶಕಗಳಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಆಗಿರಲಿಲ್ಲ, ಈ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಸರು ಸೇರ್ಪಡೆ ಮತ್ತು ರದ್ದು ಮಾಡಲಾಗಿತ್ತು. ಇದಲ್ಲದೆ ತ್ವರಿತ ನಗರೀಕರಣ ಹಾಗೂ ವಲಸೆಯಿಂದಾಗಿ ಪಟ್ಟಿಯಲ್ಲಿ ಹಲವು ಹೆಸರು ಪುನರಾವರ್ತನೆಯಾಗಿತ್ತು. ಹೀಗಾಗಿ ಪಟ್ಟಿಯಲ್ಲಿ ದೋಷಗಳು ನುಸುಳಿಕೊಂಡಿರುವ ಶಂಕೆ ಇತ್ತು. ಇಷ್ಟೇ ಅಲ್ಲದೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬುದು ಕೇವಲ ಮತದಾನ ಪ್ರಕ್ರಿಯೆಗಷ್ಟೇ ಸೀಮಿತವಾಗಿರುವುದಿಲ್ಲ, ಬದಲಾಗಿ ಮತದಾರರ ಪಟ್ಟಿಗಳ ಸಮಗ್ರತೆ, ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನೂ ಅವಲಂಬಿಸಿದೆ. ಇವು ಲೋಕತಾಂತ್ರಿಕ ಪ್ರಕ್ರಿಯೆಯ ಅಡಿಪಾಯವಾಗಿದೆ. ಇದೀಗ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಎಸ್‌ಐಆರ್‌ನ ಉದ್ದೇಶಿತ ಗುರಿಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಸಂವಿಧಾನದ ಗುರಿಯೊಂದಿಗೆ ನೇರ ಹೊಂದಾಣಿಕೆಯಾಗುತ್ತದೆ ಎಂದೂ ಕೋರ್ಟ್ ತಿಳಿಸಿದೆ.
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಅಂದ್ರೆ ಆ ವ್ಯಕ್ತಿ ಭಾರತದ ನಾಗರಿಕನಲ್ಲ ಎಂದಲ್ಲ!
ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನಾಗರಿಕತ್ವದ ದಾಖಲೆ ಪರಿಶೀಲಿಸುವ ಅಧಿಕಾರವನ್ನೂ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಸಂವಿಧಾನದ 324ನೇ ಆರ್ಟಿಕಲ್‌ನಡಿ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತದಾರರ ನಾಗರಿಕತ್ವದ ದಾಖಲೆ ಪರಿಶೀಲಿಸುವ ಅಧಿಕಾರ ಇದೆ ಎಂದಿರುವ ಸುಪ್ರೀಂ ಕೋರ್ಟ್, ಆದರೆ ಈ ಅಧಿಕಾರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ತೆಗೆದುಹಾಕಲಷ್ಟೇ ಸೀಮಿತ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಅಂದ ಮಾತ್ರಕ್ಕೆ ವ್ಯಕ್ತಿಯೊಬ್ಬ ದೇಶದ ನಾಗರಿಕತ್ವ ಹೋಗಲ್ಲ ಎಂದು ಸ್ಪಷ್ಟಪಡಿಸಿದೆ. ಒಂದು ವೇಳೆ ದಾಖಲೆ ಪರಿಶೀಲನೆ ವೇಳೆ ನಾಗರಿತ್ವದ ಕುರಿತು ಅನುಮಾನ, ಗೊಂದಲಗಳಿದ್ದರೆ ಆ ವ್ಯಕ್ತಿಯ ಪ್ರಕರಣವನ್ನು ಪೌರತ್ವ ಕಾಯ್ದೆ ಪ್ರಕಾರ ನಿರ್ಧಾರ ತೆಗೆದುಕೊಳ್ಳಲು ಕೇಂದ್ರದ ಸಂಬಂಧಪಟ್ಟ ಇಲಾಖೆಗೆ ಆಯೋಗ ರವಾನೆ ಮಾಡಬಹುದು ಎಂದೂ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

