ಒಂದೇ ತಪ್ಪಿನಿಂದ ನಟ ವಿಜಯ್ ಸಿಎಂ ಪಟ್ಟ ಮಿಸ್? ಅನುಭವ ಕೊರತೆಯಿಂದ ಟಿವಿಕೆ ಮಾಡಿದ ಎಡವಟ್ಟು
ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ 108 ಸ್ಥಾನ ಗೆದ್ದು ದಾಖಲೆ ಬರೆದಿದೆ ನಿಜ. ಆದರೆ ಸರ್ಕಾರ ರಚಿಸುವ ಧಾವಂತದಲ್ಲಿ ಮಾಡಿದ ಒಂದು ತಪ್ಪು ವಿಜಯ್ ಮುಖ್ಯಮಂತ್ರಿ ಪಟ್ಟವನ್ನೇ ಕಸಿದುಕೊಂಡಿದೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.

ಒಂದು ತಪ್ಪು, ವಿಜಯ್ ರಾಜಕೀಯಕ್ಕೆ ಅಡ್ಡಗಾಲು
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾದರೂ ರಾಜಕೀಯದ ಅನುಭವದ ಕೊರತೆಯಿಂದಾಗಿ ನಟ ವಿಜಯ್ ಮತ್ತು ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬಹುಮತ ಇಲ್ಲದ ಕಾರಣ ಸರ್ಕಾರ ರಚಿಸಲು ಹಕ್ಕು ಮಂಡಿಸಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್‌ಗೆ ನಿರಾಸೆಯಾಗಿದೆ. ಟಿವಿಕೆ ನಾಯಕತ್ವ ಮಾಡಿದ ಒಂದು ಸಣ್ಣ ತಾಂತ್ರಿಕ ತಪ್ಪೇ ವಿಜಯ್ ಅವರ ಮುಖ್ಯಮಂತ್ರಿ ಕುರ್ಚಿಗೆ ಅಡ್ಡಗಾಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿಜಯ್ ರಾಜಕೀಯ ಎಡವಟ್ಟು
ಒಟ್ಟು 234 ಸ್ಥಾನಗಳಿರುವ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 118 ಶಾಸಕರ ಬಲ ಬೇಕು. ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಜಯ್ ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದು, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆಗ ಪಕ್ಷದ ಬಲ 107ಕ್ಕೆ ಇಳಿಯಲಿದೆ. ಬಹುಮತಕ್ಕೆ ಇನ್ನೂ 11 ಸ್ಥಾನಗಳ ಕೊರತೆ ಇದ್ದು, 5 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ವಿಜಯ್‌ಗೆ ಬೆಂಬಲ ಘೋಷಿಸಿತ್ತು. ಇದರೊಂದಿಗೆ ಟಿವಿಕೆ-ಕಾಂಗ್ರೆಸ್ ಮೈತ್ರಿಕೂಟದ ಬಲ 112ಕ್ಕೆ ಏರಿಕೆಯಾಗಿತ್ತು. ಆದರೆ, ಇಲ್ಲೇ ವಿಜಯ್ ರಾಜಕೀಯವಾಗಿ ಎಡವಟ್ಟು ಮಾಡಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ವಿಜಯ್ ಮಾಡಿದ ತಪ್ಪೇನು?
ಸಾಂಪ್ರದಾಯಿಕವಾಗಿ, ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ಅತಿದೊಡ್ಡ ಪಕ್ಷದ ನಾಯಕನಾಗಿ ವಿಜಯ್ ತಮ್ಮ ಪಕ್ಷದ ಶಾಸಕರ ಸಹಿ ಇರುವ ಪತ್ರವನ್ನು ಮಾತ್ರ ರಾಜ್ಯಪಾಲರಿಗೆ ನೀಡಬೇಕಿತ್ತು. ಆಗ ರಾಜ್ಯಪಾಲರು ವಿಜಯ್‌ಗೆ ಸರ್ಕಾರ ರಚಿಸಲು ಅವಕಾಶ ನೀಡಿ, ನಂತರ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುತ್ತಿದ್ದರು. ಆದರೆ, ವಿಜಯ್ ತಮ್ಮ ಪತ್ರದಲ್ಲಿ ಕಾಂಗ್ರೆಸ್ ಶಾಸಕರ ಸಹಿಯನ್ನೂ ಸೇರಿಸಿದ್ದರಿಂದ, ರಾಜ್ಯಪಾಲರು ಇದನ್ನು ಮೈತ್ರಿ ಸರ್ಕಾರದ ಪ್ರಸ್ತಾಪವೆಂದು ಪರಿಗಣಿಸಿದರು. ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಬೇಕಾದ 118 ಶಾಸಕರ ಬೆಂಬಲ ಇಲ್ಲದ ಕಾರಣ, ರಾಜ್ಯಪಾಲರು ವಿಜಯ್ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ.
ವಿಜಯ್‌ಗೆ ರಾಜಕೀಯ ಸಲಹೆಗಾರರ ಕೊರತೆಯೇ?
ಎರಡನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾದಾಗಲೂ ಬಹುಮತ ಸಾಬೀತುಪಡಿಸಲು ಬೇಕಾದ ದಾಖಲೆಗಳನ್ನು ಹಾಜರುಪಡಿಸಲು ವಿಜಯ್‌ಗೆ ಸಾಧ್ಯವಾಗಲಿಲ್ಲ ಎಂದು ರಾಜಭವನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಉತ್ತಮ ರಾಜಕೀಯ ಸಲಹೆಗಾರರ ಕೊರತೆಯೇ ವಿಜಯ್‌ಗೆ ಮುಳುವಾಯಿತು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಅತಿದೊಡ್ಡ ಪಕ್ಷದ ನಾಯಕನಾಗಿ ಮಾತ್ರ ಹಕ್ಕು ಮಂಡಿಸಿದ್ದರೆ, ವಿಜಯ್ ಈಗಾಗಲೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರು ಎನ್ನುವುದು ತಜ್ಞರ ಅಭಿಪ್ರಾಯ. ಸದ್ಯಕ್ಕೆ ತಮಿಳುನಾಡು ರಾಜಕೀಯ ತೀವ್ರ ಕುತೂಹಲ ಕೆರಳಿಸಿದೆ.
ಸಾಮೂಹಿಕ ರಾಜೀನಾಮೆ ಬೆದರಿಕೆ
ವಿಜಯ್ ನಿರಾಸೆ ಮಾತ್ರವಲ್ಲ, ಇತ್ತ ಡಿಎಂಕೆ ಹಾಗೂ ಎಐಡಿಂಕೆ ಒಂದಾಗಿ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ಹೀಗೆ ಆದರೆ 107 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ವಿಜಯ್ ಎಚ್ಚರಿಕೆ ನೀಡಿದ್ದಾರೆ. ಇತ್ತ ಕೆಲ ಪಕ್ಷಗಳು ವಿಜಯ್ ಟಿವಿಕೆಗೆ ಬೆಂಬಲ ನೀಡುವುದಾಗಿ ಹೇಳಿದೆ. ಈ ನಡುವೆ ವಿಸಿಕೆ ಪಕ್ಷ ಶೀಘ್ರದಲ್ಲೇ ಬೆಂಬಲ ನೀಡುವ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಹೇಳಿದೆ.
ಸಾಮೂಹಿಕ ರಾಜೀನಾಮೆ ಬೆದರಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

