ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಬಸ್ ನಿಲ್ಲಿಸದ ಚಾಲಕನ ಅಮಾನತು
ಬಸ್ ನಿಲ್ಲಿಸದೆ ಹೋದ ಕಾರಣ ವಿದ್ಯಾರ್ಥಿನಿಯೊಬ್ಬಳು ಬಸ್ಸಿನ ಹಿಂದೆ ಓಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಸ್ ಚಾಲಕನನ್ನು ಅಮಾನತು ಮಾಡಲಾಗಿದೆ.

ತಮಿಳುನಾಡಿನಲ್ಲಿ 12ನೇ ತರಗತಿ ಪರೀಕ್ಷೆಗಳು ನಡೆಯುತ್ತಿವೆ. ಇಂದು ಪರೀಕ್ಷೆ ಮುಗಿಯಲಿದ್ದು, ಪರೀಕ್ಷೆ ಬರೆಯಲು ಸಿದ್ಧವಾಗಿದ್ದ ವಿದ್ಯಾರ್ಥಿನಿ ಬೆಳಗ್ಗೆ ಪರೀಕ್ಷಾ ಕೇಂದ್ರಕ್ಕೆ ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಆಗ ಅಲ್ಲಿಗೆ ಬಂದ ಬಸ್ಸು ನಿಲ್ಲಿಸದೆ ಹೋಯಿತು. ಇದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲವೋ ಎಂಬ ಭಯದಿಂದ ವಿದ್ಯಾರ್ಥಿನಿ ಬಸ್ಸಿನ ಹಿಂದೆ ಓಡಿದ್ದಳು. ಸ್ವಲ್ಪ ದೂರ ಹೋದ ಬಳಿಕ ಬಸ್ ನಿಲ್ಲಿಸಲಾಗಿತ್ತು. ಈ ವಿಡಿಯೋ ವೈರಲ್ ಬೆನ್ನಲ್ಲೇ ಚಾಲಕನ ಅಮಾನತಿಗೆ ಸಾರ್ವಜನಿಕರು ಆಗ್ರಹಿಸಿದ್ದರು.
ನಿಲ್ಲದ ಬಸ್ - ಓಡಿ ಹೋದ ವಿದ್ಯಾರ್ಥಿನಿ
ಈ ಬಗ್ಗೆ ತಮಿಳುನಾಡು ಸಾರಿಗೆ ನಿಗಮವು ಪ್ರಕಟಣೆಯನ್ನು ಹೊರಡಿಸಿದ್ದು, 25/03/2025 ರಂದು ಮಾಧ್ಯಮದಲ್ಲಿ "ಬಸ್ ನಿಲ್ಲಿಸದ ಕಾರಣ +2 ವಿದ್ಯಾರ್ಥಿನಿ ಹಿಂಬಾಲಿಸಿ ಓಡಿದಳು" ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟವಾಗಿದೆ. ,ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ಉಲ್ಲೇಖಿಸಲಾದ ಬಸ್ ಸಂಖ್ಯೆ TN32N2389. ಮಾರ್ಗ ಸಂಖ್ಯೆ 1C. ಇದು ವೆಲ್ಲೂರು ವಲಯದ, ಅಂಬೂರ್ ಶಾಖೆಯಿಂದ ಕಾರ್ಯನಿರ್ವಹಿಸುವ ಬಸ್ಸಾಗಿದೆ.
ಚಾಲಕ ಸಸ್ಪೆಂಡ್
ಇಂದು ಬೆಳಿಗ್ಗೆ ಈ ಬಸ್ ವಾಣಿಯಂಬಾಡಿ ಬಸ್ ನಿಲ್ದಾಣದಿಂದ ಹೊರಟು ಅಲಂಗಾಯಂಗೆ ಹೋಗುವ ದಾರಿಯಲ್ಲಿ ಕೊತ್ತಕೋಟೆ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಶಾಲಾ ವಿದ್ಯಾರ್ಥಿನಿಯೊಬ್ಬಳು ಕೈ ತೋರಿಸಿದರೂ ಬಸ್ ನಿಲ್ಲಿಸದೆ ಸ್ವಲ್ಪ ದೂರ ಹೋಗಿ ಬಸ್ ನಿಲ್ಲಿಸಿ ವಿದ್ಯಾರ್ಥಿನಿಯನ್ನು ಬಸ್ಸಿಗೆ ಹತ್ತಿಸಿಕೊಂಡಿದ್ದಾನೆ. ವಿದ್ಯಾರ್ಥಿನಿ ಬಸ್ಸಿಗೆ ಹತ್ತಲು ಬಸ್ಸಿನ ಹಿಂದೆ ಓಡಿದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಗುರುತಿನ ಚೀಟಿ ಒಪ್ಪಿಸಲು ಆದೇಶ
ಇದಕ್ಕೆ ಕಾರಣರಾದ ಅಂಬೂರ್ ಡಿಪೋಗೆ ಸೇರಿದ ಬಸ್ ಚಾಲಕ ಮುನಿರಾಜ್ ಕೆಲಸದ ಸಂಖ್ಯೆ 42069 ಅವರನ್ನು ತಕ್ಷಣದಿಂದಲೇ ಅಮಾನತು ಮಾಡಲಾಗಿದೆ. ಇವರ ಮೇಲೆ ಇಲಾಖಾ ಮಟ್ಟದ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಸಾರಿಗೆ ನಿಗಮ ತಿಳಿಸಿದೆ. ಅಲ್ಲದೆ, ನೌಕರರ ಗುರುತಿನ ಚೀಟಿಯನ್ನು ತಕ್ಷಣವೇ ಒಪ್ಪಿಸುವಂತೆ ಆದೇಶಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ತಿಂಗಳಿಗೆ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ