- Home
- News
- India News
- ಇನ್ನು ಪ್ರಯಾಣಿಕರಿಗೆ ಇರಲ್ಲ 'ಸರ್ಜ್ ಪ್ರೈಸ್' ಕಾಟ; ಇಂದು ಆರಂಭವಾಗಲಿರುವ ಭಾರತ್ ಟ್ಯಾಕ್ಸಿಯಲ್ಲಿ ಸಾರಥಿಯೇ ಮಾಲೀಕ!
ಇನ್ನು ಪ್ರಯಾಣಿಕರಿಗೆ ಇರಲ್ಲ 'ಸರ್ಜ್ ಪ್ರೈಸ್' ಕಾಟ; ಇಂದು ಆರಂಭವಾಗಲಿರುವ ಭಾರತ್ ಟ್ಯಾಕ್ಸಿಯಲ್ಲಿ ಸಾರಥಿಯೇ ಮಾಲೀಕ!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ 'ಭಾರತ್ ಟ್ಯಾಕ್ಸಿ'ಗೆ ಚಾಲನೆ ನೀಡಲಿದ್ದಾರೆ. ಓಲಾ, ಉಬರ್‌ಗೆ ಸ್ಪರ್ಧಿಯಾಗಿರುವ ಈ ಸೇವೆಯು 'ಸಾರಥಿಯೇ ಮಾಲೀಕ' ಎಂಬ ಆಶಯದೊಂದಿಗೆ, ಕಮಿಷನ್ ಹಾಗೂ ಸರ್ಜ್ ದರವಿಲ್ಲದೆ ಕಾರ್ಯನಿರ್ವಹಿಸಲಿದೆ.

2 ತಿಂಗಳ ಪ್ರಾಯೋಗಿಕ ಕಾರ್ಯಾಚರಣೆಯ ಬಳಿಕ ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ ‘ಭಾರತ್ ಟ್ಯಾಕ್ಸಿ’ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಲಿದ್ದಾರೆ.
ಪ್ರಸ್ತುತ ದೆಹಲಿ ಮತ್ತು ಗುಜರಾತ್‌ನಲ್ಲಿ ಲಭ್ಯವಿರುವ ಈ ಸೇವೆ 2 ವರ್ಷಗಳಲ್ಲಿ ದೇಶವ್ಯಾಪಿ ಲಭಿಸಲಿದೆ. ಇದು, ಓಲಾ, ಉಬರ್, ರ್‍ಯಾಪಿಡೋಗೆ ನೇರ ಸ್ಪರ್ಧಿಯಾಗಲಿದೆ.
ಗುರುವಾರ ಉದ್ಘಾಟನಾ ಸಮಾರಂಭದಲ್ಲಿ ಶಾ ಅವರು ಈಗಾಗಲೇ ಸೇವೆ ನೀಡುತ್ತಿರುವ 6 ಚಾಲಕರನ್ನು ಸನ್ಮಾನಿಸಲಿದ್ದು, ಸಾರಥಿಯೇ ಮಾಲೀಕ ಎಂಬ ಆಶಯದಡಿ ಅವರಿಗೆ ಷೇರು ಪ್ರಮಾಣಪತ್ರವನ್ನು ನೀಡಲಿದ್ದಾರೆ. ಅವರಿಗೆ 5 ಲಕ್ಷ ರು. ಅಪಘಾತ ವಿಮೆ ಹಾಗೂ ಅಷ್ಟೇ ಮೊತ್ತದ ಕುಟುಂಬ ಆರೋಗ್ಯ ವಿಮೆ ಸಿಗಲಿದೆ.
ಕಳೆದ ಜೂ.6ರಂದು ಸ್ಥಾಪಿಸಲಾಗಿರುವ ಭಾರತ್ ಟ್ಯಾಕ್ಸಿ, ಪ್ರಯಾಣಿಕರಿಂದ ಕಮಿಷನ್ ಪಡೆಯದೆ, ಸರ್ಜ್ ಮಾದರಿಯನ್ನೂ(ಬೇಡಿಕೆ ಹೆಚ್ಚಿದ್ದಾಗ ದರ ಏರಿಕೆ) ಅಳವಡಿಸಿಕೊಳ್ಳದೆ ಕಾರ್ಯನಿರ್ವಹಿಸುವ ಸರ್ಕಾರಿ ವೇದಿಕೆ.
8 ಸಹಕಾರಿ ಸಂಸ್ಥೆಗಳ ಸಹಕಾರದೊಂದಿಗೆ ಕೆಲಸ ಆರಂಭಿಸಿರುವ ಇದಕ್ಕೆ ಈಗಾಗಲೇ 3 ಲಕ್ಷ ಸಾರಥಿಗಳು ಸೇರಿಕೊಂಡಿದ್ದಾರೆ. 1 ಲಕ್ಷ ಜನ ನೋಂದಾಯಿಸಿಕೊಂಡಿದ್ದು, 10,000ಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ.
ಲಾಭವನ್ನು ನೇರವಾಗಿ ಚಾಲಕರಿ ನೀಡುವ ನಿಯಮವಿದ್ದು, ಈಗಾಗಲೇ 10 ಕೋಟಿ ರು. ಮೊತ್ತವನ್ನು ವರ್ಗಾಯಿಸಲಾಗಿದೆ. ಜತೆಗೆ ಅವರಿಗೆ ಆರೋಗ್ಯ, ಅಪಘಾತ ವಿಮೆ, ನಿವೃತ್ತಿ ಉಳಿತಾಯದಂತಹ ವ್ಯವಸ್ಥೆಗಳಿ ಸಿಗಲಿವೆ.
ಭಾರತ್ ಟ್ಯಾಕ್ಸಿ ಅಡಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲು ‘ಬೈಕ್ ದೀದೀ’ ಎಂಬ ಯೋಜನೆ ಜಾರಿಗೆ ತರಲಾಗಿದ್ದು, 150 ಮಹಿಳಾ ಚಾಲಕಿಯರು ಇದನ್ನು ಸೇರಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

