ಬ್ರಿಟಿಷರ ಕಾಲಕ್ಕಿಂತಲೂ ಹಳೆಯದಾದ ಭಾರತದ 5 ಈಜುಕೊಳಗಳಿವು
ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಈಜು ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ, ಬೇಸಿಗೆಯಲ್ಲಿ ಶಾಲೆಗಳು ಅಥವಾ ಫಿಟ್‌ನೆಸ್ ಕೇಂದ್ರಗಳಲ್ಲಿ ಮಕ್ಕಳು ಮತ್ತು ವಯಸ್ಕರಿಂದ ಈಜುಕೊಳಗಳು ತುಂಬಿ ಹೋಗಿರುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಆದರೆ ಈಜುಗಾರಿಕೆಯೂ ನಮ್ಮ ದೈನಂದಿನ ದಿನಚರಿಯ ಭಾಗವಾಗುವುದಕ್ಕೂ ಮೊದಲೇ ಭಾರತದಲ್ಲಿ ನಿರ್ಮಾಣವಾದ ಬಹಳ ಹಳೆಯ ಈಜುಕೊಳಬಗ್ಗೆ ನಾವಿಲ್ಲಿ ಹೇಳ ಹೊರಟಿದ್ದೇವೆ.

ದೇಶದ ಅತ್ಯಂತ ಹಳೆಯ ಈಜುಕೊಳಗಳಲ್ಲಿ ಕೆಲವನ್ನು 1800 ರ ದಶಕದ ಉತ್ತರಾರ್ಧದಲ್ಲಿ ಮತ್ತು 1900 ರ ದಶಕದ ಆರಂಭದಲ್ಲಿಯೇ ನಿರ್ಮಿಸಲಾಗಿತ್ತು ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅದು ನಿಜ. ಮುಖ್ಯವಾಗಿ ಬ್ರಿಟಿಷ್ ಆಳ್ವಿಕೆ ಇದ್ದ ನಗರಗಳಲ್ಲಿ ಈಜುಕೊಳಗಳನ್ನು ನಿರ್ಮಿಸಲಾಗಿತ್ತು. ಇವು ಕೇವಲ ಸಾಮಾನ್ಯ ಈಜುಕೊಳಗಳಾಗಿರಲಿಲ್ಲ ಅವುಗಳನ್ನು ವಿಶೇಷ ಕ್ಲಬ್‌ಗಳು ಅಥವಾ ಶಾಲೆಗಳ ಒಳಗೆ ನಿರ್ಮಿಸಲಾಗುತ್ತಿತ್ತು. ಹಾಗೂ ಕೆಲವು ಗುಂಪುಗಳ ಜನರಿಗೆ ಮಾತ್ರ ಅದನ್ನು ಬಳಸಲು ಅನುಮತಿ ಇತ್ತು ಆದರೆ ಕಾಲಾಂತರದಲ್ಲಿ ಅವುಗಳ ಉದ್ದೇಶ ಬದಲಾಗಿದ್ದು, ಕೆಲವು ಈಜುಕೊಳಗಳು ಸಾರ್ವಜನಿಕ ಆಸ್ತಿ ಆದರೆ, ಕೆಲವು ಖಾಸಗಿ ಆಸ್ತಿಯಾಗಿಯೇ ಉಳಿದವು. ಈ ಈಜುಕೊಳಗಳು ಭಾರತದಲ್ಲಿ ಈಜಿನ ಪರಿಕಲ್ಪನೆ ಹೇಗೆ ಬದಲಾಯ್ತು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿವೆ. ನಾವಿಲ್ಲಿ ಭಾರತದ ಅತ್ಯಂತ ಹಳೆಯ 5 ಈಜುಕೊಳಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.
ಬ್ರೀಚ್ ಕ್ಯಾಂಡಿ ಈಜುಕೊಳ ಮುಂಬೈ(Breach Candy Swimming Pool, Mumbai) ಈ ಈಜುಕೊಳವನ್ನು 1876ರಲ್ಲಿ ನಿರ್ಮಾಣ ಮಾಡಲಾಯ್ತು. 1876ರಲ್ಲಿ ನಿರ್ಮಾಣವಾದ ಈ ಈಜುಕೊಳವು ದಕ್ಷಿಣ ಮುಂಬೈನ ಕರಾವಳಿಯಲ್ಲಿದ್ದು, ಅದು ನಿರ್ಮಾಣವಾದ ಕಾಲಘಟಕ್ಕೆ ಮಾತ್ರವಲ್ಲದೇ ಅದರ ವಿಶಿಷ್ಟ ವಿನ್ಯಾಸದಿಂದಲೂ ಗಮನ ಸೆಳೆಯುತ್ತಿದೆ. ಈ ಕೊಳವು ನೈಸರ್ಗಿಕವಾಗಿಯೇ ಉಪ್ಪುನೀರನ್ನು ಹೊಂದಿದೆ ಮತ್ತು ನೈಸರ್ಗಿಕ ಕರಾವಳಿಯನ್ನು ಅನುಸರಿಸಿರುವ ವಿಶೇಷ ಆಕಾರವನ್ನು ಹೊಂದಿದೆ. ಬ್ರಿಟಿಷ್ ವಸಾಹತು ಕಾಲದಲ್ಲಿ ನಿರ್ಮಾಣವಾದ ಈ ಈಜುಕೊಳವೂ ಆಯ್ದ ಗುಂಪಿನವರಿಗೆ ಮಾತ್ರ ಸೇರಿತ್ತು. ಇಂದಿಗೂ, ಇದನ್ನು ಬ್ರೀಚ್ ಕ್ಯಾಂಡಿ ಈಜುಕೊಳ ಟ್ರಸ್ಟ್ ನಿರ್ವಹಿಸುತ್ತಿದೆ ಮತ್ತು ನಗರದ ಅತ್ಯಂತ ಪ್ರಸಿದ್ಧ ಈಜುಕೊಳಗಳಲ್ಲಿ ಒಂದಾಗಿದೆ.
ಕಲ್ಕತ್ತಾ ಈಜು ಕ್ಲಬ್, ಕೋಲ್ಕತ್ತಾ(Calcutta Swimming Club, Kolkata): ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಸ್ಟ್ರಾಂಡ್ ರಸ್ತೆಯಲ್ಲಿ1887 ರಲ್ಲಿ ಈ ಈಜುಕೊಳ ನಿರ್ಮಾಣವಾಗಿತ್ತು. ಈ ಕ್ಲಬ್ ಅನ್ನು ಮೂಲತಃ ವಸಾಹತುಶಾಹಿ ಬ್ರಿಟಿಷ್ ಅಧಿಕಾರಿಗಳಿಗಾಗಿ ನಿರ್ಮಿಸಲಾಗಿತ್ತು ಮತ್ತು ಅದರ ಆರಂಭಿಕ ವರ್ಷಗಳಲ್ಲಿ ಈ ಈಜುಕೊಳಕ್ಕೆ ಬಹಳ ಸೀಮಿತ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿತ್ತು. ಇಲ್ಲಿ ಮಹಿಳೆಯರಿಗೆ ಬಹಳ ಧೀರ್ಘಕಾಲದ ನಂತರ ಅವಕಾಶ ನೀಡಲಾಗಿತ್ತು. ಹಾಗೂ ನಂತರದ ಕಾಲದಲ್ಲಿ ಇದನ್ನು ಲಿಂಗಬೇದವಿಲ್ಲದೇ ಎಲ್ಲರಿಗೂ ಬಳಸಲು ಅವಕಾಶ ನೀಡಲಾಯ್ತು. ಕೆಲ ಬದಲಾವಣೆಗಳ ಹೊರತಾಗಿಯೂ, ಕ್ಲಬ್ ತನ್ನ ಹಳೆಯ ಮೋಡಿಯನ್ನು ಉಳಿಸಿಕೊಂಡಿದೆ ಮತ್ತು ಇನ್ನೂ ಕೋಲ್ಕತ್ತಾದ ಸಾಮಾಜಿಕ ಜೀವನದ ಪ್ರಮುಖ ಭಾಗವಾಗಿದೆ.
ಕಾಲೇಜ್ ಸ್ಕ್ವೇರ್ ಈಜು ಕ್ಲಬ್, ಕೋಲ್ಕತ್ತಾ(College Square Swimming Club, Kolkata): ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಮತ್ತೊಂದು ಪ್ರಸಿದ್ಧ ಈಜುಕೊಳವಿದು. 1927 ರಲ್ಲಿ ಸ್ಥಳೀಯ ಕ್ರೀಡಾ ಉತ್ಸಾಹಿಗಳಿಂದ ಪ್ರಾರಂಭವಾದ ಕ್ಲಬ್ ಇದಾಗಿದೆ, ಕಲ್ಕತ್ತಾ ವಿಶ್ವವಿದ್ಯಾಲಯದ ಬಳಿ ಭಾರತೀಯರು ನಡೆಸಿದ ಮೊದಲ ಈಜು ಪ್ರಯತ್ನಗಳ ಭಾಗ ಈ ಕಾಲೇಜ್ ಸ್ಕ್ವೇರ್ ಈಜು ಕ್ಲಬ್. ಇದರ ಆರಂಭಿಕ ದಿನಗಳಲ್ಲಿ, ಇದು ಈ ಕ್ಲಬ್‌ನ ಸದಸ್ಯರು, ವ್ಯಾಪಾರಿ ಕುಟುಂಬಗಳು, ರಾಜಮನೆತನದವರು ಮತ್ತು ಕಾನೂನು ವೃತ್ತಿಪರರನ್ನು ಹೆಚ್ಚಾಗಿ ಆಕರ್ಷಿಸಿತ್ತು. 1928 ರಲ್ಲಿ ಇಲ್ಲಿನ ಈಜುಗಾರ ದ್ವಾರಕಾ ದಾಸ್ ಮುಲ್ಜಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದಾಗ ಈ ಈಜು ಕ್ಲಬ್ ದೇಶದ ಕ್ರೀಡಾ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟಿತು.
ವೈಎಂಸಿಎ ಕಾಲೇಜು ಪೂಲ್, ಚೆನ್ನೈ(YMCA College Pool, Chennai)ತಮಿಳುನಾಡಿನ ಚೆನ್ನೈನಲ್ಲಿ1942ರಲ್ಲಿ ಈ ವೈಎಂಸಿಎ ಕಾಲೇಜು ಈಜುಕೊಳವನ್ನು ಸ್ಥಾಪಿಸಲಾಯ್ತು. 25 ಮೀಟರ್ ಎತ್ತರದ ಈಜುಕೊಳ ಇದಾಗಿದ್ದು, ಚೆನ್ನೈನಲ್ಲಿ ಈ ರೀತಿಯ ಈಜುಕೊಳ ಇದೇ ಮೊದಲು ಭಾರತದಲ್ಲಿ ಕ್ರೀಡಾ ಶಿಕ್ಷಣದ ಪ್ರಮುಖ ವ್ಯಕ್ತಿಯಾಗಿದ್ದ ಹ್ಯಾರಿ ಕ್ರೋವ್ ಬಕ್ ಅವರ ಕಾಲದಲ್ಲಿ ಇದನ್ನು ರಚಿಸಲಾಯಿತು ಮತ್ತು ದೇಶದಲ್ಲಿ ಔಪಚಾರಿಕ ದೈಹಿಕ ತರಬೇತಿಯನ್ನು ಉತ್ತೇಜಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿತು.
ಮರೀನಾ ಈಜುಕೊಳ, ಚೆನ್ನೈ(Marina Swimming Pool, Chennai): 1947ರಲ್ಲಿ ಈ ಈಜುಕೊಳವನ್ನು ಪ್ರೆಸಿಡೆನ್ಸಿ ಕಾಲೇಜಿನ ಎದುರು ಸಾರ್ವಜನಿಕ ಸೌಲಭ್ಯಕ್ಕಾಗಿ ಸ್ಥಾಪಿಸಲಾಯಿತು. 100 ಮೀಟರ್ ಉದ್ದ ಇರುವ ಈ ಈಜುಕೊಳ ಪ್ರಮಾಣಿತ ಒಲಿಂಪಿಕ್ ಈಜುಕೊಳಕ್ಕಿಂತ ದೊಡ್ಡದಾಗಿದೆ ಮತ್ತು ಇದನ್ನು ಇನ್ನೂ ಚೆನ್ನೈನ ನಾಗರಿಕ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಇದನ್ನು ಅನೇಕ ಬಾರಿ ನವೀಕರಿಸಲಾಗಿದ್ದರೂ, ಇದು ನಗರದ ಅತ್ಯಂತ ಗಮನಾರ್ಹ ಸಾರ್ವಜನಿಕ ಈಜುಕೊಳಗಳಲ್ಲಿ ಒಂದಾಗಿದೆ.