'ದಿ ವಾಲ್' ಶ್ರೀಜೇಶ್ ಹಾಕಿ ಸ್ಟಿಕ್‌ನಲ್ಲಿ ಪತ್ನಿ ಹೆಸರು..! ಬ್ರಿಟೀಷರನ್ನು ಮಣಿಸಿದ ಬೆನ್ನಲ್ಲೇ ಗೋಲ್ ಕೀಪರ್ ರಿಯಾಕ್ಷನ್ ವೈರಲ್
ಪ್ಯಾರಿಸ್: ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಭಾರತದ ಗೆಲುವಿನಲ್ಲಿ ಗೋಲ್ ಕೀಪರ್ ಶ್ರೀಜೇಶ್ ಪಾತ್ರ ಯಾರೂ ಮರೆಯಲು ಸಾಧ್ಯವಿಲ್ಲ. ಶ್ರೀಜೇಶ್ ಗೆಲುವಿನ ಸಂಭ್ರಮಾಚರಣೆಯ ಕ್ಷಣಗಳೀಗ ವೈರಲ್ ಆಗಿದೆ.
2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಸತತ ಎರಡನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಸಾಕಷ್ಟು ರೋಚಕತೆಯಿಂದ ಕೂಡಿದ್ದ ಭಾರತ- ಗ್ರೇಟ್ ಬ್ರಿಟನ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವು ನಿಗದಿತ ಸಮಯದ ಅಂತ್ಯಕ್ಕೆ 1-1ರಲ್ಲಿ ಟೈ ಆಯಿತು. ಆಗ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 4-2 ಅಂತರದಲ್ಲಿ ಬ್ರಿಟೀಷರನ್ನು ಮಣಿಸಿ ಸೆಮೀಸ್‌ಗೆ ಲಗ್ಗೆಯಿಟ್ಟಿದೆ.
ಇನ್ನು ಭಾರತ ತಂಡವು ಆರಂಭದಲ್ಲೇ ರೆಡ್ ಕಾರ್ಡ್ ಪಡೆದು ಕೇವಲ 10 ಆಟಗಾರರೊಂದಿಗೆ ಗ್ರೇಟ್ ಬ್ರಿಟನ್ ಎದುರು ಸೆಣಸಾಡಿತು. ಹೀಗಿದ್ದೂ ಗೋಡೆಯಂತೆ ನಿಂತು ಭಾರತವನ್ನು ಗೆಲುವಿನ ದಡ ಸೇರಿಸಿದ್ದ ಅನುಭವಿ ಗೋಲ್ ಕೀಪರ್ ಪಿ ಆರ್ ಶ್ರೀಜೇಶ್.
hockey
ಗ್ರೇಟ್ ಬ್ರಿಟನ್ ಎದುರು ಅವಿಸ್ಮರಣೀಯ ಗೆಲುವು ಸಾಧಿಸಿದ ಬೆನ್ನಲ್ಲೇ ಭಾರತ ಹಾಕಿ ತಂಡದ ಆಟಗಾರರು ಮೈದಾನದಲ್ಲೇ ಭರ್ಜರಿಯಾಗಿಯೇ ಸಂಭ್ರಮಾಚರಣೆ ಮಾಡಿದರೇ, ಗ್ರೇಟ್ ಬ್ರಿಟನ್ ಆಟಗಾರರು ಮೈದಾನದಲ್ಲೇ ಕಣ್ಣೀರು ಹಾಕಿದರು.
ಇನ್ನು ಈ ಪಂದ್ಯದ ಗೆಲುವಿನ ರೂವಾರಿ ಎನಿಸಿದ ಭಾರತದ ಗೋಲ್ ಕೀಪರ್ ಪಿ ಆರ್ ಶ್ರೀಜೇಶ್, ಕ್ಯಾಮರಾ ಮುಂದೆ ಬಂದು ಹಾಕಿ ಸ್ಟಿಕ್ ಮೇಲೆ ತಮ್ಮ ಪತ್ನಿ ಅನಿಶ್ಯಾ ಅವರ ಹೆಸರಿರುವುದನ್ನು ತೋರಿಸಿ ಗಮನ ಸೆಳೆದಿದ್ದಾರೆ.
ಪಿ ಅರ್ ಶ್ರೀಜೇಶ್ ಅವರಿಗೆ ನಿಜವಾದ ಸ್ಪೂರ್ತಿಯೇ ಅವರ ಪತ್ನಿ ಅನಿಶ್ಯಾ. ಈ ಇಬ್ಬರೂ ಒಬ್ಬರನ್ನೊಬ್ಬರು ಕಾಲೇಜು ದಿನಗಳಿಂದಲೇ ಚಿರಪರಿಚಿತರು. ಶ್ರೀಜೇಶ್ ಪತ್ನಿ ಅನಿಶ್ಯಾ ಓರ್ವ ವೃತ್ತಿಪರ ಆಯುರ್ವೇದಿಕ್ ಡಾಕ್ಟರ್ ಆಗಿದ್ದಾರೆ.
ಶ್ರೀಜೇಶ್ 2013ರಲ್ಲಿ ಅನಿಶ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಮೊದಲ ಮಗಳು ಅನುಶ್ರೀ ಹಾಗೂ ಎರಡನೇ ಮಗ ಶ್ರೇಯಾಂಶ್ ಅವರ ಸುಂದರ ಕುಟುಂಬ ಶ್ರೀಜೇಶ್‌ರದ್ದು.
ಕ್ವಾರ್ಟರ್ ಫೈನಲ್ ಗೆಲುವಿನ ಬಳಿಕ ಮಾತನಾಡಿದ ಶ್ರೀಜೇಶ್, "ಇದೇ ನನ್ನ ಪಾಲಿನ ಕೊನೆಯ ಒಲಿಂಪಿಕ್ಸ್ ಪಂದ್ಯವಾಗಬಹುದು ಎಂದುಕೊಂಡಿದ್ದೆ. ನಾನು ಗೋಲ್ ಕಾಪಾಡಿಕೊಂಡರೇ ಈ ಒಲಿಂಪಿಕ್ಸ್‌ನಲ್ಲಿ ನಾನು ಇನ್ನೂ ಎರಡು ಪಂದ್ಯವನ್ನಾಡಬಹುದು ಅಂದುಕೊಂಡಿದ್ದೆ. ಕೊನೆಗೂ ಈ ಗೆಲುವು ತುಂಬಾ ಖುಷಿಕೊಟ್ಟಿತು ಎಂದು ಶ್ರೀಜೇಶ್ ಹೇಳಿದ್ದಾರೆ.