ಭಾರತದ ಹಾಕಿ ದಿಗ್ಗಜ ಬಲ್ಬೀರ್ ಸಿಂಗ್ ಇನ್ನಿಲ್ಲ..!
ಭಾರತ ಕಂಡ ಶ್ರೇಷ್ಠ ಹಾಕಿ ಪಟು ಬಲ್ಬೀರ್ ಸಿಂಗ್(95) ಸೋಮವಾರ(ಮೇ.25)ರಂದು ಇಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಲ್ಬೀರ್ ಓರ್ವ ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
ಬಲ್ಬೀರ್ ಆರೋಗ್ಯ ಬಿಗಡಾಯಿಸಿದ್ದರಿಂದ ಮೇ.08ರಂದು ಅವರನ್ನು ಮೊಹಾಲಿಯ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ 6.30ರ ವೇಳೆಗೆ ಕೊನೆಯುಸಿರೆಳೆದರು ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಮೂರು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಬಲ್ಬೀರ್ ಮೇ 18ರಿಂದಲೇ ಕೋಮಾ ಸ್ಥಿತಿಗೆ ಜಾರಿದ್ದರು. ಒಲಿಂಪಿಕ್ಸ್ ಫೈನಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ದಾಖಲೆ ಇಂದಿಗೂ ಬಲ್ಬೀರ್ ಸಿಂಗ್ ಹೆಸರಿನಲ್ಲಿದೆ.
1952ರಲ್ಲಿ ನಡೆದ ಹೆಲ್ಸಿಂಕಿ ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ನೆದರ್‌ಲ್ಯಾಂಡ್ ವಿರುದ್ಧ ಭಾರತ 6-1 ಅಂತರದಲ್ಲಿ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಬಲ್ಬೀರ್ 5 ಗೋಲು ಬಾರಿಸಿದ್ದರು.
ಬಲ್ಬೀರ್ ಸಿಂಗ್ ಹ್ಯಾಟ್ರಿಕ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಆಟಗಾರ ಎನಿಸಿದ್ದಾರೆ. 1948ರ ಲಂಡನ್ ಒಲಿಂಪಿಕ್ಸ್, 1952ರ ಹೆಲ್ಸಿಂಕಿ ಒಲಿಂಪಿಕ್ಸ್(ಉಪನಾಯಕ) ಹಾಗೂ 1956ರ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದರು.
1975ರಲ್ಲಿ ಭಾರತ ಹಾಕಿ ತಂಡದ ಮ್ಯಾನೆಜರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಆಗ ನಡೆದ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.
1957ರಲ್ಲಿ ಬಲ್ಬೀರ್ ಸಿಂಗ್ ಪದ್ಮಶ್ರಿ ಗೌರವಕ್ಕೂ ಪಾತ್ರರಾಗಿದ್ದರು.
ಬಲ್ಬೀರ್ ಸಿಂಗ್ ನಿಧನಕ್ಕೆ ಹಾಕಿ ಇಂಡಿಯಾ ಸೇರಿದಂತೆ ಹಲವು ದಿಗ್ಗಜರು ಸಾಮಾಜಿಕ ಜಾಲತಾಣದ ಮೂಲಕ ನುಡಿನಮನ ಸಲ್ಲಿಸಿದ್ದಾರೆ.