ಕಪ್ಪು ಕಲೆಗಳಿರುವ ಈರುಳ್ಳಿ ತಿಂತೀರಾ? ಹುಷಾರಾಗಿರ್ರಪ್ಪ… ಇಂತ ಈರುಳ್ಳಿ ತುಂಬಾನೆ ಡೇಂಜರ್!
ಸಾಮಾನ್ಯವಾಗಿ ನಾವು ಖರೀದಿ ಮಾಡಿ ತಂದಂತಹ ಈರುಳ್ಳಿಗಳ ಮೇಲೆ ಕಪ್ಪು ಧೂಳಿನಂತಹ ಕಲೆಗಳು ಇರೋದನ್ನ ನೀವು ನೋಡಿರಬಹುದು. ಏನಿದು ಕಲೆ ಅನ್ನೋದು ಗೊತ್ತಾ? ತಿಳ್ಕೊಳಿ, ಇಲ್ಲಾಂದ್ರೆ ಅಪಾಯಕ್ಕೆ ತುತ್ತಾಗೋ ಚಾನ್ಸ್ ಇದೆ.
ಅಡುಗೆಗೆ ಮುಖ್ಯವಾಗಿ ಬೇಕಾಗಿರೋ ಒಂದು ಪದಾರ್ಥ ಅಂದ್ರೆ ಅದು ಈರುಳ್ಳಿ (onion), ಸಾರು, ಪಲ್ಯ ತಿಂಡಿ ಏನೇ ಮಾಡಿದ್ರೂ ಅದಕ್ಕೆ ಈರುಳ್ಳಿ ಬೇಕೇ ಬೇಕು. ಹಾಗಾಗಿ ಕೆಜಿ -ಕೆಜಿ ಈರುಳ್ಳಿ ಖರೀದಿ ಮಾಡಿರ್ತೀವಿ ನಾವು. ಈ ಈರುಳ್ಳಿ ಅಡುಗೆಯ ರುಚಿ ಹೆಚ್ಚಿಸೋದು ಮಾತ್ರವಲ್ಲದೇ, ಆರೋಗ್ಯಕ್ಕೂ ಸಹ ತುಂಬಾನೆ ಉತ್ತಮವಾಗಿದೆ ಅನ್ನೋದು ನಿಮಗೆ ಗೊತ್ತೇ ಇದೆ.
ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣ ಮಾಡೋದ್ರಿಂದ ಹಿಡಿದು, ಹೊಳೆಯುವ ಸ್ಕಿನ್, ತೂಕ ಇಳಿಕೆ, ಸ್ಟ್ರಾಂಗ್ ಆಗಿರುವ ಮೂಳೆಗಳು, ಹೃದಯವು ಆರೋಗ್ಯವಾಗಿರಲು (healthy heart), ಜೊತೆಗೆ ಜೀರ್ಣಕ್ರಿಯೆ ಉತ್ತಮವಾಗಿರೋದಕ್ಕೆ ಈರುಳ್ಳಿ ಸಹಾಯ ಮಾಡುತ್ತದೆ. ಆದರೆ ಈರುಳ್ಳಿಯನ್ನು ನೀವು ಸರಿಯಾದ ರೀತಿಯಲ್ಲಿ ಬಳಕೆ ಮಾಡದೇ ಇದ್ರೆ ಅದರಿಂದ ಅಪಾಯವೂ ಹೆಚ್ಚು.
ಹೆಚ್ಚಾಗಿ ನಾವು ಗಮನಿಸಿದಮ್ತೆ ಮಾರ್ಕೆಟ್ ನಿಂದ ತಂದಂತಹ ಈರುಳ್ಳಿಯ ಸಿಪ್ಪೆ ತೆಗೆಯುವಾಗ ಈರುಳ್ಳಿ ಮೇಲೆ ಕಪ್ಪು ಬಣ್ಣದ ಧೂಳಿನಂತಹ ಕಲೆಗಳಿರುವುದನ್ನ ಕಾಣಬಹುದು. ಮುಟ್ಟಿದರೆ ಕೈಗಳಿಗೆ ಅಂಟುವ ಇದನ್ನ ನೋಡಿದ್ರೆ, ಮಣ್ಣಿನ ಕಣಗಳು ಅಂಟಿಕೊಂಡಂತೆ ಕಾಣುತ್ತೆ, ಆದ್ರೆ ಇದೇನು ಗೊತ್ತಾ? ಶಿಲೀಂದ್ರ.
ಹೌದು, ಈ ಕಪ್ಪು ಕಲೆಗಳು ಆಸ್ಪರ್ಗಿಲಸ್ ನೈಗರ್ ಎಂಬ ಒಂದು ನಿರ್ದಿಷ್ಟ ರೀತಿಯ ಶಿಲೀಂಧ್ರದಿಂದ ಉಂಟಾಗುವಂತಹ ಅಂಶವಾಗಿದೆ. ಈ ಶಿಲೀಂಧ್ರವು (fungus)ಮಣ್ಣಿನಲ್ಲಿ ಕಂಡುಬರುತ್ತದೆ. ಜೊತೆಗೆ ಇದುದ್ ಈರುಳ್ಳಿಯಲ್ಲೂ ಸಹ ಕಾಣಿಸುತ್ತದೆ. ಇದು ಕಪ್ಪು ಫಂಗಸ್ ನಂತಹ ಗಂಭೀರ ಕಾಯಿಲೆಯನ್ನ ಉಂಟು ಮಾಡದಿದ್ದರೂ, ನಮ್ಮ ದೇಹಕ್ಕೆ ತುಂಬಾನೆ ಹಾನಿಕಾರಕವಾಗಿದೆ.
ಹಾಗಾಗಿ ಈ ಫಂಗಸ್ ಇರುವ ಈರುಳ್ಳಿಯನ್ನು ತಿನ್ನದೇ ಇರೋದು ಉತ್ತಮ. ಯಾಕಂದ್ರೆ ಈ ಶಿಲೀಂಧ್ರವು ನಮ್ಮ ದೇಹದಲ್ಲಿ ಅಲರ್ಜಿಯನ್ನ (allergy) ಉಂಟು ಮಾಡೋ ಸಾಧ್ಯತೆ ಇದೆ. ಹಾಗಾಗಿ ವಿಶೇಷವಾಗಿ ಅಲರ್ಜಿಯಿಂದ ಬಳಲುತ್ತಿರುವ ಜನರು ಈ ರೀತಿಯಾಗಿ ಕಪ್ಪು ಫಂಗಸ್ ಇರುವಂತಹ ಈರುಳ್ಳಿಯನ್ನ ತಿನ್ನಬಾರದು.
ಅಷ್ಟೇ ಅಲ್ಲ ನಿಮಗೆ ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ, ಶ್ವಾಸಕೋಶದ ಸಮಸ್ಯೆ (lungs problem) ಕಾಣಿಸಿಕೊಂಡಿದ್ದರೂ ಸಹ ಈ ಈರುಳ್ಳಿ ತಿನ್ನಬಾರದು. ಇದರಿಂದ ನಿಮಗೆ ಹೆಚ್ಚಿನ ಹಾನಿ ಉಂಟಾಗುವ ಚಾನ್ಸ್ ಇದೆ. ಹಾಗಿದ್ರೆ ಎಲ್ಲಾ ಈರುಳ್ಳಿಯಲ್ಲಿ ಇದೇ ರೀತಿ ಇರುತ್ತೆ ಅದನ್ನ ಏನು ಮಾಡಕ್ಕಾಗುತ್ತೆ ಎಂದು ನೀವು ಪ್ರಶ್ನಿಸಬಹುದು.
ನಿಮ್ಮ ಪ್ರಶ್ನೆಗೆ ಉತ್ತರ ನಮ್ಮ ಬಳಿ ಇದೆ. ಅದೇನಂದ್ರೆ, ನೀವು ಖರೀದಿ ಮಾಡಿದ ಈರುಳ್ಳಿಯಲ್ಲಿ ಕಪ್ಪು ಕಲೆಗಳಿದ್ದರೆ, ಅದರ ಎರಡು ಲೇಯರ್ ಅಥವಾ ಪದಗಳನ್ನ ಮೊದಲಿಗೆ ಬಿಡಿಸಿ, ಹೆಚ್ಚಾಗಿ ಈ ಶಿಲೀಂದ್ರಗಳು ಒಂದೆರಡು ಪದರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಎರಡು ಪದರ ತೆಗೆದು, ಅದನ್ನ ಚೆನ್ನಾಗಿ ತೊಳೆದು ಬಳಕೆ ಮಾಡೋದು ಉತ್ತಮ.
ಇನ್ನು ಈರುಳ್ಳಿ ಜೊತೆ ಕಪ್ಪು ಫಂಗಸ್ (black fungus) ಕೂಡ ಕಾಣಿಸಿಕೊಂಡರೆ, ಅದನ್ನ ಆದಷ್ಟು ಬೇಗ ಬಿಸಾಕಿ, ಅದನ್ನ ಬಳಕೆ ಮಾಡೋ ಬಗ್ಗೆ ಯೋಚನೆ ಮಾಡಬೇಡಿ. ಯಾಕಂದ್ರೆ ಇದರಿಂದ ಕೆಲವೊಂದು ಗಂಭೀರ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಇದನ್ನ ಅವಾಯ್ಡ್ ಮಾಡೋದು ಉತ್ತಮ.