ಕೆಮ್ಮಿನೊಂದಿಗೆ ರಕ್ತ, ಹಸಿರು ಕಫ ಬರ್ತಿದ್ರೆ, ಇಗ್ನೋರ್ ಮಾಡ್ಲೇ ಬೇಡಿ
ಚಳಿಯಾದಾಗ ಕೆಮ್ಮು ಬರುತ್ತೆ, ಅಮೇಲೆ ಅದಾಗಿಯೇ ನಿಲ್ಲುತ್ತೆ ಎಂದು ಇಗ್ನೋರ್ ಮಾಡೋರೆ ಜಾಸ್ತಿ, ಯಾರು ಹೆಚ್ಚಾಗಿ ಅದಕ್ಕೆ ಚಿಕಿತ್ಸೆ ಪಡೆಯೋಕೆ ಹೋಗೋದೆ ಇಲ್ಲ. ಆದರೆ ಕೆಮ್ಮಿನೊಂದಿಗೆ ಕೆಲವು ಅಪಾಯಕಾರಿ ರೋಗಲಕ್ಷಣಗಳು ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸಬೇಡಿ. ಈ ಸಮಸ್ಯೆಗಳು ಅಪಾಯಕಾರಿ ಕಾಯಿಲೆಯ ಲಕ್ಷಣವಾಗಿರಬಹುದು.
ನಮಗೆ ಕೆಮ್ಮು ಯಾಕೆ ಬರುತ್ತೆ ಗೊತ್ತಾ? ಹೊರಗಿನಿಂದ ಯಾವುದೇ ಅಪಾಯಕಾರಿ ಅಂಶವು ದೇಹ ಪ್ರವೇಶಿಸಿದರೆ ಕೆಮ್ಮು (cough) ಬಂದೇ ಬರುತ್ತೆ. ಇದು ಉರಿಯೂತ, ಕಿರಿಕಿರಿ ಮತ್ತು ಸೋಂಕಿಗೆ ಕಾರಣವಾಗಬಹುದು. ಹೊರಗಿನ ಅಂಶವು ಶ್ವಾಸನಾಳ ಪ್ರವೇಶಿಸಿದಾಗ, ಗಂಟಲಿನಲ್ಲಿರುವ ಗ್ರಾಹಿಗಳು ಕೆಮ್ಮಿಗೆ ಸಹಾಯ ಮಾಡುತ್ತವೆ. ಹೊರಗಿನ ಅಪಾಯಕಾರಿ ಅಂಶಗಳು ದೇಹವನ್ನು ಪ್ರವೇಶಿಸಿದಾಗ, ಅದನ್ನು ತೆಗೆದುಹಾಕುವುದು ದೇಹದ ನೈಸರ್ಗಿಕ ಪ್ರಕ್ರಿಯೆ.
ವರದಿ ಪ್ರಕಾರ, ಒಬ್ಬ ವ್ಯಕ್ತಿ ಕೆಮ್ಮಿದಾಗ, ಶ್ವಾಸಕೋಶ (cough) ಗಾಳಿಯನ್ನು ತುಂಬಾ ಆಕ್ರಮಣಕಾರಿಯಾಗಿ ಮತ್ತು ವೇಗವಾಗಿ ಬಿಡುಗಡೆ ಮಾಡುತ್ತದೆ. ಕೆಲವೊಮ್ಮೆ ಈ ವೇಗವು ಗಂಟೆಗೆ 100 ಮೈಲಿಗಳಾಗಿರಬಹುದು ಮತ್ತು ಟ್ರಾಕ್ಟ್ ತಡೆಯನ್ನು ಸಹ ಹೊರಹಾಕಬಹುದು. ಕೆಮ್ಮಿಗೆ ಅನೇಕ ಕಾರಣಗಳಿರಬಹುದು, ಅವುಗಳಲ್ಲಿ ಕೆಲವು ಸಾಕಷ್ಟು ಅಪಾಯಕಾರಿಯಾಗಿವೆ ಅನ್ನೋದನ್ನು ಸೂಚಿಸುತ್ತದೆ.
ಈ ರೋಗಲಕ್ಷಣಗಳ ಮೇಲೆ ನಿಗಾ ಇರಿಸಿ
ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದ್ದು, ಅದು ತಾನಾಗಿಯೇ ಹೋಗುತ್ತದೆ ನಿಜ. ಆದರೆ ಕೆಲವೊಮ್ಮೆ ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಯೂ (health problem) ಆಗಿರುವ ಸಾಧ್ಯತೆ ಇದೆ, ಇದಕ್ಕಾಗಿ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿರುತ್ತದೆ. ಗಂಟಲು ಕಟ್ಟುವುದು, ವಿವಿಧ ಬಣ್ಣದ ಕಫ, ಎದೆ ನೋವು, ಕೆಮ್ಮಿನೊಂದಿಗೆ ರಕ್ತಸ್ರಾವ ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ನೀವು ಹೊಂದಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ.
ವಿವಿಧ ಬಣ್ಣದ ಕಫದೊಂದಿಗೆ ಕೆಮ್ಮು
ಶ್ವಾಸನಾಳದೊಳಗಿನ ಜೀವಕೋಶಗಳು ಲೋಳೆಯನ್ನು ತಯಾರಿಸುತ್ತವೆ. ನಿಮ್ಮ ಲೋಳೆ ಬಣ್ಣ ಹಳದಿ, ಹಸಿರು ಅಥವಾ ಕಂದು ಬಣ್ಣವಾಗಿದ್ದರೆ, ಅದರಲ್ಲಿ ಬಿಳಿ ರಕ್ತ ಕಣಗಳಿವೆ (white blood cells) ಎಂದರ್ಥ. ಇದು ಜೀವಕೋಶಗಳ ಸೋಂಕಿನ ವಿರುದ್ಧ ಹೋರಾಡಲು ಕೆಲಸ ಮಾಡುತ್ತದೆ. ಒಂದು ವಾರಕ್ಕಿಂತ ಹೆಚ್ಚು ಸಮಯದಿಂದ ಬೇರೆ ಬೇರೆ ಬಣ್ಣದ ಲೋಳೆ ಬರುತ್ತಿದ್ದರೆ, ಅದು ನ್ಯುಮೋನಿಯಾ ಲಕ್ಷಣವಾಗಿರಬಹುದು. ಇದರೊಂದಿಗೆ, ಗುಲಾಬಿ ಅಥವಾ ನೊರೆಯುಕ್ತ ಕಫ ಹೃದಯ ವೈಫಲ್ಯ ಅಥವಾ ಶ್ವಾಸಕೋಶದ ಊತವನ್ನು ಸೂಚಿಸುತ್ತದೆ
ಉಸಿರಾಟದ ತೊಂದರೆ
ಕೆಮ್ಮಿನೊಂದಿಗೆ ಉಸಿರಾಡುವಾಗ ಗೊರ ಗೊರ ಎಂದು ಶಬ್ದ ಬರೋದು ಅಥವಾ ಉಸಿರಾಟದ ತೊಂದರೆ (breathing problem) ಇದ್ದರೆ, ಅದು ಆಸಿಡ್ ರಿಫ್ಲಕ್ಸ್, ಅಸ್ತಮಾ ಅಥವಾ ಅಲರ್ಜಿಯ ಪ್ರತಿಕ್ರಿಯೆಯಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಸೋಂಕನ್ನು ತಕ್ಷಣವೇ ತಡೆಯಲು ನೀವು ತಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು. ತೀವ್ರ ಉಸಿರಾಟದ ತೊಂದರೆ ಮತ್ತು ಉಸಿರುಗಟ್ಟಿಸುವ ಭಾವನೆಯನ್ನು ನಿರ್ಲಕ್ಷಿಸಬೇಡಿ.
2 ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು
ರೋಗಿಯು 2 ರಿಂದ 4 ವಾರಗಳವರೆಗೆ ಕೆಮ್ಮುತ್ತಿದ್ದರೆ, ಅವರು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಏಕೆಂದರೆ ಇದು ಸೋಂಕು ಅಥವಾ ಟಿಬಿ ಮೊದಲಾದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯ ಲಕ್ಷಣಗಳು ಆಗಿರುವ ಸಾಧ್ಯತೆ ಇದೆ.
ಕೆಮ್ಮುವಾಗ ರಕ್ತ
ಕೆಮ್ಮುವಾಗ ರಕ್ತ ಬರಲು ಅನೇಕ ಕಾರಣಗಳಿರಬಹುದು. ಇದರಲ್ಲಿ ಶ್ವಾಸಕೋಶದ ಕ್ಯಾನ್ಸರ್ ನಿಂದ ಅಸ್ತಮಾ, ಬ್ರಾಂಕೈಕ್ಟಾಸಿಸ್, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಬ್ರಾಂಕೈಟಿಸ್ ಕೂಡ ಸೇರಿವೆ. ನಿಜವಾದ ಕಾರಣವನ್ನು ಕಂಡುಹಿಡಿಯಲು ನಿಮಗೆ ವೈದ್ಯಕೀಯ ಸಹಾಯ ಮತ್ತು ಪರೀಕ್ಷೆಗಳು ಬೇಕಾಗುತ್ತವೆ.