ಚಳಿಗಾಲದಲ್ಲಿ ಬಾಯಾರಿಕೆ ಹೆಚ್ಚಾಯ್ತು ಅಂದ್ರೆ ಏನೋ ಅನಾರೋಗ್ಯ ಕಾಡ್ತಿದೆ ಎಂದೇ ಅರ್ಥ!
ಜೀವನಕ್ಕೆ ನೀರು ಅತ್ಯಗತ್ಯ. ನೀರಿಲ್ಲದೆ ನೀವು ಕೆಲವೇ ದಿನಗಳು ಬದುಕಬಹುದು. ಆದರೆ ನೀವು ಸಾಕಷ್ಟು ನೀರು ಕುಡಿಯುತ್ತಿದ್ದರೂ ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ, ಅದರ ಅರ್ಥ ನಿಮಗೆ ಯಾವುದೋ ಗಂಭೀರ ಸಮಸ್ಯೆ ಇದೆ ಎಂದು. ವಿಶೇಷವಾಗಿ ಚಳಿಗಾಲದಲ್ಲಿ ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾದರೆ, ಜಾಗರೂಕರಾಗಿರಿ.
ನೀವು ಕಷ್ಟಪಟ್ಟು ಕೆಲಸ ಮಾಡಿದಾಗ, ವರ್ಕೌಟ್ ಮಾಡಿದ ನಂತರ ವಿಪರೀತ ಬಾಯಾರಿಕೆ (thirsty) ಆಗುತ್ತೆ. ಇದು ಸಾಮಾನ್ಯ. ಆದರೆ ಯಾವುದೇ ಕಾರಣವಿಲ್ಲದೆ ಆಗಾಗ್ಗೆ ಬಾಯಾರಿಕೆ ಆಗುತ್ತಿದ್ದರೆ, ನಿಮ್ಮ ದೇಹದಲ್ಲಿ ಕೆಲವು ಆಂತರಿಕ ಸಮಸ್ಯೆಗಳಿವೆ (internal problems) ಎಂದರ್ಥ. ಅನೇಕ ರೋಗಗಳಿಂದಾಗಿ, ನಿಮಗೆ ಮತ್ತೆ ಮತ್ತೆ ಬಾಯಾರಿಕೆ ಆಗಬಹುದು. ಅದನ್ನು ನಿರ್ಲಕ್ಷಿಸಬಾರದು. ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲಾಂದ್ರೆ ಗಂಭೀರ ಸಮಸ್ಯೆ ಕಾಡೋದು ಖಚಿತ.
ವೆಬ್ಎಂಡಿ ಪ್ರಕಾರ, ನಿಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದಾಗ, ಅಂದರೆ, ರಕ್ತದಲ್ಲಿ ಆರ್ಬಿಸಿ ಮತ್ತು ಹಿಮೋಗ್ಲೋಬಿನ್ ಕೊರತೆಯಿದ್ದಾಗ, ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾಗಬಹುದು. ರಕ್ತ ನಷ್ಟಕ್ಕೆ ಹಲವು ಕಾರಣಗಳಿರಬಹುದು. ವಿಟಮಿನ್ ಬಿ 12 ಮತ್ತು ಕಬ್ಬಿಣದ ಕೊರತೆ ಸಹ ರಕ್ತಹೀನತೆಗೆ (anemia) ಕಾರಣ ಆಗಬಹುದು. ಇದು ಸಂಭವಿಸಿದಾಗ, ದೇಹದಲ್ಲಿ ಸಾಕಷ್ಟು ಆಯಾಸ ಮತ್ತು ದೌರ್ಬಲ್ಯ ಕಾಡುತ್ತದೆ. ಅಷ್ಟೇ ಯಾಕೆ ನಂತರದಲ್ಲಿ ಅನೇಕ ಸಮಸ್ಯೆಗಳು ಸಹ ಕಾಡಬಹುದು. ಮತ್ತೆ ಮತ್ತೆ ಬಾಯಾರಿಕೆ ಆಗೋದಕ್ಕೆ ಕಾರಣ ಏನು?
ಬಾಯಲ್ಲಿ ಲಾಲಾರಸ ಕಡಿಮೆ ಉತ್ಪತ್ತಿ - ಯಾವಾಗಲೂ ಬಾಯಲ್ಲಿ ಲಾಲಾರಸ (saliva) ಅಥವಾ ಸಲೈವಾ ಇರಬೇಕು. ಸಲೈವಾ ಅನೇಕ ರೀತಿಯ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಇದು ಸೋಂಕಿಗೆ ಸಂಬಂಧಿಸಿದ ಅನೇಕ ರೋಗಗಳನ್ನು ನಿವಾರಿಸುತ್ತೆ. ಆದರೆ ಬಾಯಿಯಲ್ಲಿ ಸಲೈವಾ ಕಡಿಮೆಯಾಗುತ್ತಿದ್ದರೆ, ಅದು ಆಗಾಗ್ಗೆ ಬಾಯಾರಿಕೆಗೆ ಕಾರಣವಾಗಬಹುದು. ಆದರೆ, ಇದಕ್ಕೆ ಇತರ ಅನೇಕ ಕಾರಣಗಳಿರಬಹುದು.
ಉದಾಹರಣೆಗೆ, ಕೆಲವು ಔಷಧಿಗಳನ್ನು (medicine) ಸೇವಿಸಿದ ನಂತರ, ಬಾಯಿಯಲ್ಲಿ ಕಡಿಮೆ ಲಾಲಾರಸ ರೂಪುಗೊಳ್ಳುತ್ತದೆ. ಅದೇ ಸಮಯದಲ್ಲಿ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯಿಂದಾಗಿ, ಬಾಯಿಯಲ್ಲಿ ಕಡಿಮೆ ಲಾಲಾರಸ ರೂಪುಗೊಳ್ಳುತ್ತದೆ. ಆದರೆ ಯಾವುದೇ ಕಾರಣವಿಲ್ಲದೆ ಬಾಯಿಯಲ್ಲಿ ಕಡಿಮೆ ಲಾಲಾರಸವಿದ್ದರೆ, ಅದು ಯೋಚನೆ ಮಾಡಬೇಕಾದ ವಿಷ್ಯವಾಗಿದೆ.
ತಲೆ ತಿರುಗುವಿಕೆ- ಕೆಲವೊಮ್ಮೆ ತಲೆತಿರುಗುವಿಕೆಯು ಅನೇಕ ಕಾರಣಗಳಿಂದಾಗಿ ಸಮಸ್ಯೆಯಾಗಬಹುದು. ಆಗಾಗ್ಗೆ ತಲೆತಿರುಗುವಿಕೆಯ ಸಮಸ್ಯೆ ಇದ್ದರೆ ಮತ್ತು ಅದು ತೀವ್ರವಾದರೆ ಅದು ಪದೇ ಪದೇ ಬಾಯಾರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾದರೆ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಹೆಚ್ಚು ಕ್ಯಾಲ್ಸಿಯಂ - ಹೈಪರ್ಕಾಲ್ಸೆಮಿಯಾ ಕಾಯಿಲೆ ಇದ್ದರೆ, ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾಗಬಹುದು. ಹೈಪರ್ಕಾಲ್ಸೆಮಿಯಾ ಎಂದರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿದೆ ಎಂದರ್ಥ. ಹೈಪರ್ಕಾಲ್ಸೆಮಿಯಾ ನೀರನ್ನು ಹಿಡಿದಿಟ್ಟುಕೊಳ್ಳುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಮತ್ತೆ ಮತ್ತೆ ಬಾಯಾರಿಕೆಯಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡಬೇಕಾಗಿದೆ.
ಮಧುಮೇಹ: ಮಧುಮೇಹದ (diabetes) ಕಾಯಿಲೆ ಬಂದಾಗ, ರೋಗಿಗೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತದೆ ಎಂದು ಅನೇಕ ಜನರಿಗೆ ತಿಳಿದಿದೆ. ಮೂತ್ರದಿಂದ ಗ್ಲುಕೋಸ್ ಹೊರಬರಲು ಪ್ರಾರಂಭಿಸಿದಾಗ, ನೀರನ್ನು ಹಿಡಿದಿಟ್ಟುಕೊಳ್ಳುವ ದೇಹದ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಆಗಾಗ್ಗೆ ಮೂತ್ರವಿಸರ್ಜನೆ ಮಾಡಬೇಕಾಗುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ನೀರಿನ ಕೊರತೆ ಇರುತ್ತದೆ ಮತ್ತು ಈ ಕಾರಣದಿಂದಾಗಿ, ಮತ್ತೆ ಮತ್ತೆ ಬಾಯಾರಿಕೆ ಆಗುತ್ತೆ.