ನೀವು ನಾಚಿಕೆ ಸ್ವಭಾವದ ವ್ಯಕ್ತಿಯೇ? ಅದರಿಂದ ಹೊರಬರೋ ಗುಟ್ಟು ತಿಳಿಯಿರಿ
ಕೆಲವು ಜನರಿಗೆ ತುಂಬಾನೆ ನಾಚಿಕೆ ಇರುತ್ತೆ, ಅದರಿಂದಾಗಿಯೇ ಅವರು ಜೀವನದಲ್ಲಿ ಹಿಂದೆ ಉಳಿಯುತ್ತಾರೆ. ನಾಚಿಕೆಯೇ ಇತರರಿಂದ ದೂರವಿರಲು ಮತ್ತು ಸಾಮಾಜಿಕ ಸಂವಹನಗಳನ್ನು ತಪ್ಪಿಸಲು ಕಾರಣವಾಗಬಹುದು. ಇದು ವ್ಯಕ್ತಿತ್ವ ವಿಕಸನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಿದ್ರೆ ನಾಚಿಕೆಯನ್ನು ದೂರ ಮಾಡೋದು ಹೇಗೆ ನೋಡೋಣ.
ನೀವು ತುಂಬಾ ಜನರಿಂದ ಸುತ್ತುವರೆದಿದ್ದೀರಿ. ಎಲ್ಲರೂ ಜೊತೆಯಾಗಿ ಸೇರಿ, ಮಾತನಾಡುತ್ತಿದ್ದಾರೆ, ಜೊತೆಯಾಗಿ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ, ಒಟ್ಟಲ್ಲಿ ಎಂಜಾಯ್ ಮಾಡ್ತಿದ್ದಾರೆ. ಆದರೆ ನೀವು ಮಾತ್ರ ಯಾವುದೋ ಮೂಲೆಯಲ್ಲಿ ಏಕಾಂಗಿಯಾಗಿ ಕುಳಿತು, ಮೊಬೈಲ್ ನೋಡೋದು ಅಥವಾ ಜನರನ್ನು ನೋಡುತ್ತಿರುತ್ತೀರಿ. ಯಾಕಂದ್ರೆ ಜನರನ್ನು ಭೇಟಿಯಾಗಲು ನಿಮಗೆ ಮುಜುಗರವಾಗುತ್ತದೆ. ಯಾಕಂದ್ರೆ ನಿಮ್ಮ ನಾಚಿಕೆ (shyness) ಸ್ವಭಾವ ನಿಮ್ಮನ್ನು ಇತರರಿಂದ ದೂರ ಇರುವಂತೆ ಮಾಡುತ್ತೆ.
ಯಾವುದೇ ಕಾರ್ಯಕ್ರಮದಲ್ಲಿ ನಿಮಗೆ ಇತರ ಜನರನ್ನು ಭೇಟಿಯಾಗಲು, ಮಾತನಾಡಲು ಸಾಧ್ಯವಾಗದೇ ಇರುವ ನಿಮ್ಮ ಪರಿಸ್ಥಿತಿಯನ್ನು ಶೈನೆಸ್ ಅಥವಾ ನಾಚಿಕೆ ಎನ್ನಲಾಗುವುದು. ನಿಮ್ಮ ಈ ನಾಚಿಕೆಯೇ ವ್ಯಕ್ತಿತ್ವ ವಿಕಸನದ (personality development)ಮೇಲೆ ಪರಿಣಾಮ ಬೀರುತ್ತದೆ. ಹಾಗಿದ್ರೆ ನಾಚಿಕೆಯನ್ನು ನಿವಾರಿಸಲು ನೀವು ಏನೇನು ಮಾಡಬಹುದು ಅನ್ನೋದನ್ನು ನೋಡೋಣ.
ನಾಚಿಕೆ ಎಂದರೇನು?
ಜರ್ನಲ್ ಆಫ್ ರಿಲೇಶನ್ಶಿಪ್ಸ್ (Journal of Relationship) ಪ್ರಕಾರ, ನಾಚಿಕೆಯು ಇತರರಿಂದ ನಿಮ್ಮನ್ನು ದೂರವಿರಿಸುತ್ತೆ, ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ತಡೆಯುತ್ತೆ. ಈ ನಾಚಿಕೆ ಸ್ವಭಾವದಿಂದಾಗಿ ಜನರೊಂದಿಗೆ ಬೆರೆಯುವ ಸಂದರ್ಭದಲ್ಲಿ ನಿಮಗೆ ಅಸುರಕ್ಷಿತ ಭಾವ ಉಂಟಾಗುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಗೆ ತಲೆತಿರುಗುವಿಕೆ, ಬೆವರುವಿಕೆ, ಹೊಟ್ಟೆ ಸೆಳೆತ ಮೊದಲಾದ ಸಮಸ್ಯೆಗಳನ್ನು ಅನುಭವಿಸುತ್ತಾನೆ.
ನಾಚಿಕೆಯು ಜೀವನದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲಸದ ಸ್ಥಳದಲ್ಲಿ, ವೈಯಕ್ತಿಕ ಜೀವನದಲ್ಲಿ ಮತ್ತು ನಡುವೆ ಎಲ್ಲಿಯಾದರೂ ನುಸುಳಬಹುದು. ಇದು ಆತ್ಮಗೌರವ (self respect) ಅಥವಾ ಆತ್ಮವಿಶ್ವಾಸದ ಮೇಲೆ ತುಂಬಾನೆ ಪರಿಣಾಮ ಬೀರಬಹುದು. ನಾಚಿಕೆ ಸ್ವಭಾವದ ಜನರು ಹೊಸ ಸ್ನೇಹಿತರನ್ನು ಪಡೆಯೋದಕ್ಕೆ ಸಹ ತೊಂದರೆ ಅನುಭವಿಸುತ್ತಾರೆ.
ಹಾಗಿದ್ರೆ ನಾಚಿಕೆಯನ್ನು ದೂರ ಮಾಡೋದು ಹೇಗೆ
ಜರ್ನಲ್ ಆಫ್ ರಿಲೇಶನ್ಶಿಪ್ಸ್ ಪ್ರಕಾರ, ನಾಚಿಕೆಯ ಭಾವನೆಯು ಶಾಶ್ವತವಾಗಿ ನಿಮ್ಮ ಜೊತೆಯೇ ಇರಬೇಕು ಎಂದೇನಿಲ್ಲ. ಈ 5 ಪರಿಹಾರಗಳನ್ನು ಸತತ ಅಭ್ಯಾಸ ಮಾಡುವುದರಿಂದ ನಿಮ್ಮ ನಾಚಿಕೆಯನ್ನು ದೂರ ಮಾಡಬಹುದು. ಈ ಅಭ್ಯಾಸಗಳನ್ನು ರೂಡಿ ಮಾಡುವ ಮೂಲಕ ನೀವು ಆತ್ಮವಿಶ್ವಾಸವನ್ನು ಬೆಳೆಸಬಹುದು.
ಸಣ್ಣದಾಗಿ ಪ್ರಾರಂಭಿಸಿ
ನಿಮ್ಮ ಕಂಫರ್ಟ್ ಝೋನ್ (comfort zone)ನಿಂದ ತಕ್ಷಣ ಹೊರಗೆ ಬರೋದು ಕಷ್ಟವಾಗಬಹುದು. ಅದಕ್ಕಾಗಿ ನಿಮ್ಮನ್ನು ನಿಮ್ಮ ಕ್ಷೇತ್ರದಿಂದ ಹೊರ ತರಲು ಸಣ್ಣ ಗುರಿಗಳನ್ನು ನಿಗದಿಪಡಿಸಿ. ಕುಟುಂಬದ ಸದಸ್ಯರೊಂದಿಗೆ ಮಾತನಾಡುವ ಮೂಲಕ ಅಥವಾ ಸಹೋದ್ಯೋಗಿಯೊಂದಿಗೆ ಸಣ್ಣ ಮಾತುಕತೆ ಮೂಲಕ ಕಂಫರ್ಟ್ ಝೋನ್ ನಿಂದ ಹೊರ ಬನ್ನಿ. ಈ ವಿಷಯಗಳು ಆತ್ಮವಿಶ್ವಾಸವನ್ನು ಬೆಳೆಸಲು ಮತ್ತು ನಿಮ್ಮನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ನಿಮ್ಮ ಸಾಮರ್ಥ್ಯ ಗುರುತಿಸಿ
ಯಶಸ್ಸಿನ ಹಾದಿಯಲ್ಲಿ ನಾಚಿಕೆ ಅಡ್ಡ ಬಂದರೆ, ಜೀವನದಲ್ಲಿ ಹೊಸ ಅವಕಾಶಗಳನ್ನು ಕಳೆದುಕೊಳ್ಳಬಹುದು. ತಮ್ಮ ಅರ್ಹತೆಗಳು ಏನು ಎಂಬುದನ್ನು ತಿಳಿದಿಲ್ಲದಿದ್ದರೆ, ವೈಯಕ್ತಿಕ ಬೆಳವಣಿಗೆ ಆಗದೇ ಇರಬಹುದು. ನಿಮ್ಮ ಸಾಮರ್ಥ್ಯ ಏನು ಅನ್ನೋದನ್ನು ನೀವೇ ಹುಡುಕಿ ಅದನ್ನು ಹೊರ ತರಲು ಪ್ರಯತ್ನಿಸಿ, ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
ಎಲ್ಲರೂ ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದು ಯೋಚಿಸೋದನ್ನು ನಿಲ್ಲಿಸಿ
ಜನರು ಪ್ರತಿ ಹಂತದಲ್ಲೂ ನಿಮ್ಮನ್ನ ಗಮನಿಸೋದಿಲ್ಲ. ನಾಚಿಕೆಯಿಂದಾಗಿ ಪ್ರತಿಯೊಬ್ಬರೂ ನನ್ನ ತಪ್ಪುಗಳನ್ನು ಗಮನಿಸುತ್ತಾರೆ ಎಂದು ಒಬ್ಬ ವ್ಯಕ್ತಿಗೆ ಅನಿಸಬಹುದು, ಆದರೆ ಇದು ನಿಜವಲ್ಲ. ಸಾಮಾಜಿಕ ಕಾರ್ಯಕ್ರಮದಲ್ಲಿ (social event) ಅಥವಾ ಜನಸಮೂಹದಲ್ಲಿ ಯಾರೂ ಯಾರ ಬಗ್ಗೆಯೂ ಗಮನ ಹರಿಸುವುದಿಲ್ಲ. ಹಾಗಾಗಿ ನಿಮಗೆ ಹೇಗೆ ಬೇಕೋ ಹಾಗೆ ಇರಿ.
ಕಾರ್ಯಕ್ರಮಗಳಲ್ಲಿ ಭಾಗಿಯಾಗಿ
ಜರ್ನಲ್ ಆಫ್ ಕಮ್ಯುನಿಕೇಷನ್ ಟೆಕ್ನಾಲಜಿ ಪ್ರಕಾರ, ನಮ್ಮ ಶತ್ರುಗಳು ನಾವೇ. ನಮ್ಮನ್ನು ನಾವು ಹಿಡಿದಿಟ್ಟಷ್ಟು ಸಮಾಜದಿಂದ ನಾವು ದೂರ ಉಳಿಯುತ್ತೇವೆ. ಹಾಗಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆರಂಭಿಸಿ, ಜನರಲ್ಲಿ ಮಾತನಾಡಿ, ನಿಮ್ಮೊಳಗಿನ ಭಯವನ್ನು ಬಿಟ್ಟು ಬಿಡಿ, ಇದರಿಂದ ನಾಚಿಕೆ ದೂರವಾಗುತ್ತೆ.
ಸೋಲುಗಳನ್ನು ಸ್ವೀಕರಿಸಿ (accept the failure)
ಜರ್ನಲ್ ಆಫ್ ಕಮ್ಯುನಿಕೇಷನ್ ಟೆಕ್ನಾಲಜಿ ಪ್ರಕಾರ, ಯಾವುದೇ ರೀತಿಯ ಸೋಲು ಪ್ರಯಾಣದ ಅಂತ್ಯವಲ್ಲ. ನಾಚಿಕೆಯನ್ನು ನಿವಾರಿಸಬೇಕು ಎಂದಾದರೆ ಸೋಲನ್ನು ಸ್ವೀಕರಿಸೋದನ್ನು ಕಲಿಯಿರಿ. ಸೋಲನ್ನು ಸ್ವಾಗತಿಸಲು ಆರಂಭಿಸಿದರೆ ಗೆಲುವು ನಿಮ್ಮತ್ತ ಬಂದೇ ಬರುತ್ತೆ.