ನೀರಿಗೆ ಇವನ್ನು ಹಾಕಿ ಸ್ಟೀಮ್ ತೆಗೆದುಕೊಂಡರೆ ಕ್ಷಣದಲ್ಲೇ ಶೀತ ಮಾಯವಾಗುತ್ತೆ!
ಚಳಿಗಾಲದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತವೆ. ಅದರಲ್ಲಿ ಶೀತ, ಕೆಮ್ಮು ಕೂಡ ಸೇರಿವೆ. ನಿಮಗೆ ಶೀತವಿದ್ದರೆ ಅಥವಾ ಕಫ ಹೆಚ್ಚಾದರೆ ಸಾಮಾನ್ಯವಾಗಿ ಸ್ಟೀಮ್ ತೆಗೆದುಕೊಳ್ಳುತ್ತೀರಿ. ಈ ಸಮಯದಲ್ಲಿ ನೀವು ನೀರಿಗೆ ಕೆಲವು ವಸ್ತುಗಳನ್ನು ಸೇರಿಸುವ ಮೂಲಕ ಬೇಗನೆ ಚೇತರಿಸಿಕೊಳ್ಳಬಹುದು.
ಚಳಿಗಾಲದಲ್ಲಿ (winter season), ಜನರು ಹೆಚ್ಚಾಗಿ ಕೆಮ್ಮು ಮತ್ತು ಶೀತ ಇತ್ಯಾದಿಗಳ ಬಗ್ಗೆ ದೂರುತ್ತಾರೆ. ಜನರು ಸಾಮಾನ್ಯವಾಗಿ ಶೀತ ಬಂದಾಗ ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ಇದರೊಂದಿಗೆ, ಸ್ಟೀಮಿಂಗ್ ಹೆಚ್ಚು ಪ್ರಯೋಜನ ನೀಡುತ್ತದೆ. ಇದು ನಿಮ್ಮ ಮೂಗನ್ನು ತೆರೆಯುವಂತೆ ಮಾಡುತ್ತೆ. ಉತ್ತಮವಾಗಿ ಉಸಿರಾಡಲು ಸಹಾಯ ಮಾಡುತ್ತೆ. ಜೊತೆಗೆ ಇದು ನಿಮಗೆ ವಿಶ್ರಾಂತಿ ನೀಡುತ್ತದೆ. ಆದರೆ, ಶೀತದಿಂದ ಪರಿಹಾರ ಪಡೆಯಲು ಜನರು ಕೇವಲ ನೀರಿನ ಸ್ಟೀಮ್ ತೆಗೆದುಕೊಳ್ಳುತ್ತಾರೆ. ನೀರಿನ ಸ್ಟೀಮ್ ಪರಿಹಾರ ಒದಗಿಸುತ್ತದೆ ಎಂಬುದು ನಿಜ, ಆದರೆ ನೀವು ಕೆಲವು ವಸ್ತುಗಳನ್ನು ನೀರಿನಲ್ಲಿ ಸೇರಿಸಿದರೆ, ಈ ಹಬೆಯು ಇನ್ನೂ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಹಾಗಿದ್ರೆ ಯಾವೆಲ್ಲಾ ವಸ್ತುಗಳನ್ನು ಹಾಕಿ ಸ್ಟೀಮ್ ತೆಗೆದುಕೊಳ್ಳಬಹುದು ನೋಡೋಣ.
ಓಂ ಕಾಳು ಸೇರಿಸಿ
ನಿಮಗೆ ಶೀತವಿದ್ದರೆ ಮತ್ತು ನೀವು ಸ್ಟೀಮ್ ತೆಗೆದುಕೊಳ್ಳುತ್ತಿದ್ದರೆ, ಆಗ ನೀರಿನಲ್ಲಿ ಒಂದರಿಂದ ಎರಡು ಟೀಸ್ಪೂನ್ ಅಜ್ವೈನ್ ಸೇರಿಸುವುದು ಒಳ್ಳೆಯದು. ಅಜ್ವೈನ್ ಅಥವಾ ಓಂ ಕಾಳು ಆಂಟಿ-ಆಕ್ಸಿಡೆಂಟ್ (anti oxidant) ಸಮೃದ್ಧವಾಗಿದೆ ಮತ್ತು ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಸಹ ಹೊಂದಿದೆ. ಈ ಕಾರಣದಿಂದಾಗಿ ಅಜ್ವೈನ್ ಹಬೆಯನ್ನು ತೆಗೆದುಕೊಂಡರೆ, ಅದು ಎದೆಯ ದಟ್ಟಣೆಯನ್ನು ತೆಗೆದುಹಾಕಿ, ಶೀತದಿಂದ ತ್ವರಿತ ಪರಿಹಾರ ನೀಡುತ್ತದೆ.
ಇದಕ್ಕಾಗಿ, ನೀವು ಒಂದು ಪಾತ್ರೆಯಲ್ಲಿ ನೀರು ಮತ್ತು ಅಜ್ವೈನ್ ಸೇರಿಸಿ ಮತ್ತು ಅದನ್ನು ಕುದಿಯಲು ಬಿಡಿ. ಹಬೆಯು ಹೊರಬರಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ ಟವೆಲ್ ಸಹಾಯದಿಂದ ಸ್ಟೀಮ್ ಹಿಡಿಯಿರಿ. ಚಳಿಗಾಲದಲ್ಲಿ ನೀವು ಓಂ ಕಾಳನ್ನು ಹಾಗೆಯೆ ಸೇವಿಸೋದು ಸಹ ಉತ್ತಮ ಪರಿಹಾರ ನಿಡುತ್ತದೆ.
ತುಳಸಿಯನ್ನು ನೀರಿಗೆ ಸೇರಿಸಿ
ನಿಮ್ಮ ಮನೆಯಲ್ಲಿ ತುಳಸಿ ಸಸ್ಯವಿದ್ದರೆ, ಶೀತ ದೂರ ಮಾಡಲು ತುಳಸಿ ನೀರಿನ ಹಬೆಯನ್ನು ಸಹ ನೀವು ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಕೆಮ್ಮು ಮತ್ತು ಶೀತದಲ್ಲಿ ತುಳಸಿ ಮತ್ತು ಶುಂಠಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಅದೇ ರೀತಿಯಲ್ಲಿ, ತುಳಸಿ ಹಬೆಯೂ ಸಹ ಅತ್ಯಂತ ಪ್ರಯೋಜನಕಾರಿ. ಇದಕ್ಕಾಗಿ, ನೀವು ನೀರನ್ನು ಮತ್ತು ತುಳಸಿ ಎಲೆಗಳನ್ನು ಒಂದು ಪಾತ್ರೆಯಲ್ಲಿ ಕುದಿಸಿ, ಆ ನೀರಿನಲ್ಲಿ ಸ್ಟೀಮ್ ಮಾಡಿ ನೋಡಿ.
ಓಂ ಕಾಳು, ಅರಿಶಿನ ಮತ್ತು ತುಳಸಿಯನ್ನು ಸೇರಿಸಿ
ಫಟಾ ಫಟ್ ಆಗಿ ನಿಮ್ಮ ಶೀತ, ತಲೆನೋವಿನ ಮೇಲೆ ಪರಿಣಾಮ ಬೀರುವ ಪರಿಹಾರವನ್ನು ನೀವು ಬಯಸಿದರೆ, ಈ ಟಿಪ್ಸ್ ನೀವು ಖಂಡಿತಾ ಟ್ರೈ ಮಾಡಬಹುದು. ಇದರಿಂದ ಚಳಿಗಾಲದಲ್ಲಿ ಉಂಟಾಗುವ ಶೀತ, ಮೂಗು ಕಟ್ಟುವಿಕೆ (nose block) ಮೊದಲಾದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಇದಕ್ಕಾಗಿ, ನೀವು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು, ಅದಕ್ಕೆ ಒಂದು ಟೀಸ್ಪೂನ್ ಓಂ ಕಾಳು, ಅರ್ಧ ಟೀಸ್ಪೂನ್ ಅರಿಶಿನ ಮತ್ತು ಸ್ವಲ್ಪ ತುಳಸಿ ಎಲೆಗಳನ್ನು ಸೇರಿಸಿ ಮತ್ತು ನೀರನ್ನು ಕುದಿಯಲು ಬಿಡಿ. ಈಗ ಗ್ಯಾಸ್ ಆಫ್ ಮಾಡಿ, ನಿಮ್ಮ ಮುಖವನ್ನು ಟವೆಲ್ ನಿಂದ ಮುಚ್ಚಿ ಆವಿ ತೆಗೆಯಿರಿ. ಈಗ ಬದಲಾವಣೆ ನೀವೆ ನೋಡಬಹುದು.
ಅಜ್ವೈನ್ ಮತ್ತು ಶುಂಠಿ
ತಂಪಾದ ಹವಾಮಾನದಲ್ಲಿ ಶುಂಠಿಯನ್ನು ಸೇವಿಸುವುದರಿಂದ ಸೀಸನಲ್ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ನಿಮಗೆ ಶೀತವಿದ್ದರೆ, ನೀವು ಅಜ್ವೈನ್ ಮತ್ತು ಶುಂಠಿಯನ್ನು ನೀರಿನಲ್ಲಿ ಸೇರಿಸಬಹುದು. ಇದಕ್ಕಾಗಿ, ನೀವು ಮೊದಲು ಸ್ವಲ್ಪ ಶುಂಠಿಯನ್ನು ತೆಗೆದುಕೊಂಡು ಅದನ್ನು ತುರಿದುಕೊಳ್ಳಿ. ಈಗ ಈ ತುರಿದ ಶುಂಠಿಯನ್ನು ನೀರಿಗೆ ಸೇರಿಸಿ. ಅಲ್ಲದೆ, ಅದಕ್ಕೆ ಒಂದು ಟೀಸ್ಪೂನ್ ಓಂ ಕಾಳು ಸೇರಿಸಿ. ಈ ನೀರಿನ ವಾಸನೆ ತುಂಬಾ ಗಾಢವಾಗಿರುತ್ತೆ ಮತ್ತು ಇದು ಶೀತ, ಸೈನಸ್ ಮತ್ತು ಸೌಮ್ಯ ತಲೆನೋವಿನಿಂದ ಸಾಕಷ್ಟು ಪರಿಹಾರ ನೀಡುತ್ತದೆ.