ರಗ್ಗು ಹೊದ್ದು ರಾತ್ರಿಯೆಲ್ಲ ವಿಡಿಯೋ ನೋಡೋರು ಎಚ್ಚರ; ಮೊಬೈಲ್ ನೋಡಿ ಕಣ್ಣು ಮಂಜಾಗ್ತಿದ್ಯಾ?
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪರಿಕರಗಳ ಬಳಕೆ ತುಂಬಾ ಹೆಚ್ಚಾಗಿದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್‌ಗಳ ಬಳಕೆ ಸಾಮಾನ್ಯವಾಗಿದೆ. ಆದರೆ, ಇವುಗಳಿಂದ ಲಾಭವೆಷ್ಟೋ, ಹಾನಿಯೂ ಅಷ್ಟೇ ಇದೆ. ಮುಖ್ಯವಾಗಿ ಕಣ್ಣಿನ ಸಮಸ್ಯೆ. ಹೆಚ್ಚಿನವರು ಡಿಜಿಟಲ್ ಪರದೆ ನೋಡಿ ನೋಡಿ ಕಣ್ಣುಗಳು ದಣಿಯುತ್ತಿವೆ. ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಕಣ್ಣಿನ ಆಯಾಸವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಏನೆಂದು ನೋಡೋಣ.

ಈಗ ವಯಸ್ಸಿನ ಹಂಗಿಲ್ಲದೆ ಎಲ್ಲರೂ ಮೊಬೈಲ್, ಕಂಪ್ಯೂಟರ್, ಟ್ಯಾಬ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಹೆಚ್ಚು ಹೊತ್ತು ಪರದೆ ನೋಡುವುದು ಕಣ್ಣಿಗೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ನೀಲಿ ಬೆಳಕು ಹೆಚ್ಚಾಗಿ ಕಣ್ಣಿಗೆ ಬೀಳುವುದರಿಂದ ಕಣ್ಣಿನ ಸಮಸ್ಯೆಗಳು ಬರುತ್ತವೆ. ಕಣ್ಣು ಮಂಜಾಗುವುದು, ಒಣಗುವುದು, ಕಪ್ಪು ವರ್ತುಲಗಳು, ತಲೆನೋವು ಮುಂತಾದ ಸಮಸ್ಯೆಗಳು ಎದುರಾಗುತ್ತವೆ.
ರಾತ್ರಿ ನಿದ್ರೆ ಮುಖ್ಯ
ಕಣ್ಣಿನ ಆಯಾಸ ಕಡಿಮೆ ಮಾಡಲು ಹಲವು ಮಾರ್ಗಗಳಿವೆ. ಅವುಗಳಲ್ಲಿ ಒಂದು ಚೆನ್ನಾಗಿ ನಿದ್ದೆ ಮಾಡುವುದು. ಕಣ್ಣು ರಿಫ್ರೆಶ್ ಆಗಲು ನಿದ್ರೆ ತುಂಬಾ ಸಹಾಯ ಮಾಡುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ ಕಣ್ಣುಗಳು ಚೆನ್ನಾಗಿ ರಿಲ್ಯಾಕ್ಸ್ ಆಗುತ್ತವೆ. ರಾತ್ರಿ ಮೊಬೈಲ್ ಬಳಸುವುದರಿಂದ ಕಣ್ಣುಗಳು ದಣಿಯುತ್ತವೆ. ಆದ್ದರಿಂದ ಆ ಸಮಯದಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡುವುದು ಒಳ್ಳೆಯದು.
ಗಂಟೆಗಟ್ಟಲೆ ಪರದೆ
ಕೆಲವರು ಕೆಲಸದ ನಿರ್ಬಂಧದಿಂದ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿರುತ್ತಾರೆ. ಅಂತಹವರು ಸ್ವಲ್ಪ ಹೊತ್ತು ಎದ್ದು ನಿಂತು ಸ್ಟ್ರೆಚ್ ಮಾಡುವುದು ಒಳ್ಳೆಯದು. ಸಾಧ್ಯವಾದರೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕಾಲ ಕಳೆಯುವುದು ಒಳ್ಳೆಯದು. ಪರದೆ ಸಮಯ ಕಡಿಮೆ ಮಾಡುವುದರಿಂದ ಕಣ್ಣುಗಳು ಸ್ವಲ್ಪ ರಿಲ್ಯಾಕ್ಸ್ ಆಗುವ ಸಾಧ್ಯತೆ ಇರುತ್ತದೆ.
ಕಣ್ಣು ಮಿಟುಕಿಸಿ
ಕಣ್ಣುಗಳನ್ನು ಮಿಟುಕಿಸದೆ ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಕುಳಿತಾಗ ಕಣ್ಣು ಒಣಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಗಾಗ ಕಣ್ಣು ಮಿಟುಕಿಸುವುದು ಒಳ್ಳೆಯದು. ಕಣ್ಣು ಒಣಗದಂತೆ ತಡೆಯಲು ಐ ಡ್ರಾಪ್ಸ್ ಬಳಸಬಹುದು. ವೈದ್ಯರನ್ನು ಸಂಪರ್ಕಿಸಿ ಸರಿಯಾದ ಐ ಡ್ರಾಪ್ಸ್ ಬಳಸಬೇಕು.
ಬೆಳಕು ಹೀಗಿದ್ರೆ ಒಳ್ಳೇದು
ನಮ್ಮ ಸುತ್ತಲಿನ ಬೆಳಕು ಕೂಡ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಓದುವಾಗ, ಬರೆಯುವಾಗ ಬೆಳಕು ಸರಿಯಾಗಿರಬೇಕು. ಟೇಬಲ್ ಬಳಿ ಕುಳಿತಾಗ ಷೇಡ್ ಲೈಟ್ ಬಳಸುವುದು ಒಳ್ಳೆಯದು. ಟಿವಿ ನೋಡುವಾಗ ರೂಮ್‌ನಲ್ಲಿ ಬೆಳಕು ಕಡಿಮೆ ಇರಬೇಕು.