ದೋಸೆ ಹಿಟ್ಟು ಒಂದು ವಾರ ಹಾಳಾಗದಂತೆ ಸ್ಟೋರ್ ಮಾಡುವುದು ಹೇಗೆ?
ದೋಸೆ ಹಿಟ್ಟನ್ನು ರುಬ್ಬುವಾಗ ಮತ್ತು ಸಂಗ್ರಹಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸುವ ಮೂಲಕ ಒಂದು ವಾರದವರೆಗೆ ಹಾಳಾಗದಂತೆ ಇಡಬಹುದು. ಕೆಲವು ಸಲಹೆಗಳನ್ನು ಪಾಲಿಸಿದರೆ ದೋಸೆ ಹಿಟ್ಟು ಹುಳಿ ಬರುವುದಿಲ್ಲ.
ಬೆಳಗ್ಗೆ ಏನು ತಿಂಡಿ ಮಾಡಬೇಕೆಂದು ಎಲ್ಲರೂ ಯೋಚಿಸುತ್ತಾರೆ. ಆದರೆ ಒಮ್ಮೆ ದೋಸೆ ಹಿಟ್ಟು ಮಾಡಿಕೊಂಡ್ರೆ ಎರಡ್ಮೂರು ರೀತಿಯಲ್ಲಿ ತಿಂಡಿ ಮಾಡಬಹುದು. ಆದ್ರೆ ದೋಸೆ ಹಿಟ್ಟು 24 ಗಂಟೆ ಬಳಿಕ ಹುಳಿ ಬರಲು ಬರುತ್ತದೆ. ಈ ರೀತಿಯಾಗಿ ಸ್ಟೋರ್ ಮಾಡಿದ್ರೆ ಹುಳಿ ಬರಲ್ಲ.
ಹಿಟ್ಟು ರುಬ್ಬುವಾಗ ಮತ್ತು ಅದನ್ನು ಸಂಗ್ರಹಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸೋದರಿಂದ ಒಂದು ವಾರದವರೆಗೆ ಸ್ಟೋರ್ ಮಾಡಬಹುದು. ಮನೆಯಲ್ಲಿ ದೋಸೆ ಹಿಟ್ಟು ಯಾವಾಗ ಬೇಕಾದ್ರೂ ಬಿಸಿಯಾದ ಅಪ್ಪಂ, ಮಸಾಲೆ, ಸೆಟ್ ದೋಸೆ, ಉತ್ತಪ್ಪ ಮಾಡಿಕೊಳ್ಳಬಹುದು. ಇದೇ ಹಿಟ್ಟಿಗೆ ಸ್ವಲ್ಪ ತರಕಾರಿ ಸೇರಿಸಿದ್ರೆ ರುಚಿಯಾದ ಪಡ್ಡು ತಯಾರಾಗುತ್ತದೆ.
ಈ ಲೇಖನದಲ್ಲಿ ಒಂದು ವಾರ ದೋಸೆ ಹಿಟ್ಟು ಹೇಗೆ ಸ್ಟೋರ್ ಮಾಡಬೇಕು ಮತ್ತು ಯಾವ ರೀತಿ ರುಬ್ಬಬೇಕು ಎಂಬುದನ್ನು ಹೇಳುತ್ತಿದ್ದೇವೆ. ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ರೂ 5 ರಿಂದ 6 ದಿನ ಹುಳಿ ಬರದಂತೆ ದೋಸೆ ಹಿಟ್ಟನ್ನು ಸ್ಟೋರ್ ಮಾಡಿಕೊಳ್ಳಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಉತ್ತರ.
ಸಲಹೆ 1
ಸಲಹೆ 1
ದೋಸೆ ಹಿಟ್ಟಿಗೆ ಅಕ್ಕಿ ಮತ್ತು ಉದ್ದಿನಬೇಳೆ ನೆನಸಿಟ್ಟಾಗ ಮಧ್ಯದಲ್ಲಿ ಒಂದು ಬಾರಿ ನೀರು ಬದಲಿಸಬೇಕು. ಅಕ್ಕಿ ಮತ್ತು ಉದ್ದನ್ನು ಕನಿಷ್ಠ 8 ರಿಂದ 9 ಗಂಟೆ ಕಾಲ ನೆನಸಿಟ್ಟುಕೊಳ್ಳಬೇಕು. ಹಿಟ್ಟನ್ನು ರುಬ್ಬುವಾಗಲೂ ತಣ್ಣೀರು ಬಳಸಬಾರದು. ಚೆನ್ನಾಗಿ ಕಾಯಿಸಿ ಆರಿಸಿದ ನೀರು ಸೇರಿಸಿ ರುಬ್ಬುವುದರಿಂದ ಹಿಟ್ಟು ಬೇಗ ಹುಳಿ ಬರಲ್ಲ.
ಸಲಹೆ 2
ಸಲಹೆ 2
ಹಿಟ್ಟು ರುಬ್ಬುವಾಗ ಯಾವುದೇ ಕಾರಣಕ್ಕೂ ತೆಂಗಿನಕಾಯಿ ಸೇರಿಸಬಾರದು. ಬೇಕಿದ್ರೆ ದೋಸೆ ಮಾಡಿಕೊಳ್ಳುವಾಗ ತೆಂಗಿನಕಾಯಿ ತುರಿಯನ್ನು ಚೆನ್ನಾಗಿ ರುಬ್ಬಿಕೊಂಡು ಸೇರಿಸಿಕೊಳ್ಳಬಹುದು. ಅಕ್ಕಿ-ಉದ್ದಿನ ಬೇಳೆ ಜೊತೆ ನೆನಸಿದ ಮೆಂತ್ಯೆ ಕಾಳು ಸೇರಿಸಿಕೊಂಡ್ರೆ ಹಿಟ್ಟು ಹದವಾಗಿರುತ್ತದೆ. ಮೆಂತ್ಯೆ ದೋಸೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಸಲಹೆ 3
ಸಲಹೆ 3
ದೋಸೆ ಹಿಟ್ಟು ರುಬ್ಬಿದ ತಕ್ಷಣ ಉಪ್ಪು ಮತ್ತು ಬೇಕಿಂಗ್ ಸೋಡಾ ಸೇರಿಸಬಾರದು. ಬೇಕಿಂಗ್ ಸೋಡಾ ಸೇರಿಸಿದ್ರೆ ಹಿಟ್ಟು ಉಬ್ಬು ಬಂದು ಹಾಳಾಗುತ್ತದೆ. ದೋಸೆ ಹಾಕಿಕೊಳ್ಳುವಾಗ ಬೇಕಿಂಗ್ ಸೋಡಾ ಸೇರಿಸಿಕೊಳ್ಳಬಹುದು. ದೋಸೆ ಹಿಟ್ಟಿಗೆ ಪದೇ ಪದೇ ಚಮಚ ಹಾಕಬಾರದು. ಎಷ್ಟು ಬೇಕು ಅಷ್ಟನ್ನು ಮಾತ್ರ ಪಾತ್ರೆಯೊಂದಕ್ಕೆ ಹಾಕಿಕೊಂಡು ಬಳಸಬೇಕು.
ಸಲಹೆ 4
ಸಲಹೆ 4
ದೋಸೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿಟ್ಟುಕೊಂಡು ದೀರ್ಘ ಸಮಯದವರೆಗೆ ಸ್ಟೋರ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೆ ಅಗಲವಾದ ಪಾತ್ರೆಯಲ್ಲಿ ನೀರು ಹಾಕಿ ಅದರದಲ್ಲಿ ದೋಸೆ ಹಿಟ್ಟಿನ ಪಾತ್ರೆ ಇರಿಸಿಕೊಂಡು ಒಂದು ವಾರದವರೆಗೆ ಸಂಗ್ರಹಿಸಬಹುದು. ನೀರನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಬದಲಿಸುತ್ತಿರಬೇಕು.
ಸಲಹೆ 5
ಸಲಹೆ 5
ದೋಸೆ ಹಿಟ್ಟನ್ನು ಯಾವಾಗಲು ಗಾಳಿ ಹೋಗದಂತೆ ಮುಚ್ಚಿಟ್ಟುಕೊಳ್ಳಬೇಕು. ದೋಸೆ ಹಿಟ್ಟಿನ ಪಾತ್ರೆ ಯಾವಾಗಲೂ ಮುಚ್ಚಿರುವಂತೆ ನೋಡಿಕೊಳ್ಳಬೇಕು. ಪಾತ್ರೆಯನ್ನು ಗಾಳಿಗೆ ತೆರದಿಟ್ಟರೇ ದೋಸೆ ಹಿಟ್ಟು ಹುಳಿ ಬಂದು ಹಾಳಾಗುತ್ತದೆ. ದೋಸೆ ಹಿಟ್ಟಿನಲ್ಲಿ ಒಂದೆರಡು ಕರೀಬೇವಿನ ಎಲೆಗಳನ್ನು ಸೇರಿಸಿಕೊಂಡು ಸ್ಟೋರ್ ಮಾಡಿಕೊಳ್ಳಬಹುದು.