Tirupati Laddu Recipe: ಮನೆಯಲ್ಲಿಯೇ ಮಾಡಿ ಶುದ್ಧ ತುಪ್ಪ ಬಳಸಿ ತಿರುಪತಿ ಲಡ್ಡು
ಕಳೆದ 15 ದಿನಗಳಿಂದ ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವ ವಿಷಯ ಹೆಚ್ಚು ಸದ್ದು ಮಾಡುತ್ತಿದೆ. ಮನೆಯಲ್ಲಿಯೇ ನೀವು ತಿರುಪತಿಯ ಲಡ್ಡು ಮಾಡಬಹುದು.
ಮನೆಯಲ್ಲಿಯೇ ನೀವು ಶುದ್ಧ ತಪ್ಪು ಬಳಸಿ ರುಚಿಕರವಾದ ಲಡ್ಡು ತಯಾರಿಸಬಹುದು. ಮನೆಯಲ್ಲಿ ಪೂಜಾ ಕಾರ್ಯಕ್ರಮಗಳಿದ್ದಾಗ ತಿರುಮಲದಲ್ಲಿ ತಯಾರಿಸಲಾಗುವ ಮಾದರಿಯಲ್ಲಿಯೇ ಲಡ್ಡು ತಯಾರಿಸಬಹುದು. ಮನೆಯಲ್ಲಿ ತಿರುಪತಿ ಲಡ್ಡು ಹೇಗೆ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.
ಬೇಕಾಗುವ ಸಾಮಾಗ್ರಿಗಳು
ಸಕ್ಕರೆ: ಒಂದೂವರೆ ಕಪ್, ಅಕ್ಕಿ ಹಿಟ್ಟು: 2 ಟೀ ಸ್ಪೂನ್, ಕಡಲೆ ಹಿಟ್ಟು: 1 ಕಪ್, ಹಾಲು: 1 ಕಪ್, ಶುದ್ಧ ತುಪ್ಪ: ಎರಡು ಕಪ್, ಗೋಡಂಬಿ: ನಾಲ್ಕರಿಂದ ಐದು, ಒಣದ್ರಾಕ್ಷಿ: ಐದರಿಂದ ಆರು, ಬದಾಮಿ: ಐದರಿಂದ ಆರು, ಏಲಕ್ಕಿ: ನಾಲ್ಕು ಮತ್ತು ಪಚ್ಚ ಕರ್ಪೂರ: ಒಂದು ಟೀ ಸ್ಪೂನ್
ತಿರುಪತಿ ಲಡ್ಡು ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ಎರಡು ಟೀ ಸ್ಪೂನ್ ಸಕ್ಕರೆ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು ಹಾಕಿಕೊಳ್ಳಿ. ನಂತರ ಇದಕ್ಕೆ ಹಾಲು ಸೇರಿಸಿ ಗಂಟು ಆಗದಂತೆ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಒಲೆ ಆನ್ ಮಾಡಿಕೊಂಡು ಬಾಣಲೆ ಇರಿಸಿಕೊಂಡು ಒಂದು ಕಪ್ ನಷ್ಟು ತುಪ್ಪ ಹಾಕಿಕೊಳ್ಳಬೇಕು.
ತುಪ್ಪ ಬಿಸಿಯಾಗುತ್ತಿದ್ದಂತೆ ರಂಧ್ರವುಳ್ಳ ಚಮಚ ಅಥವಾ ತಟ್ಟೆಯಿಂದ ಕಡಲೆ ಹಿಟ್ಟನ್ನು ಹಾಕಿ ಬೂಂದಿ ಮಾಡಿಕೊಳ್ಳಬೇಕು. ಬೂಂದಿ ಗೋಲ್ಡನ್ ಕಲರ್ ಬರೋವರೆಗೂ ಫ್ರೈ ಮಾಡಿಕೊಳ್ಳಬೇಕು. ತಣ್ಣಗಾದ ನಂತರ ಎರಡರಿಂದ ಮೂರರಷ್ಟು ಚಮಚದಷ್ಟು ಬೂಂದಿಯನ್ನು ತೆಗೆದುಕೊಂಡು ಮಿಕ್ಸಿಗೆ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ.
ತದನಂತರ ಅಗಲವಾದ ಪಾತ್ರೆಯನ್ನು ಒಲೆ ಮೇಲಿಟ್ಟುಕೊಂಡು ಒಂದು ಕಪ್‌ನಷ್ಟು ತುಪ್ಪ ಹಾಕಿಕೊಳ್ಳಿ. ನಂತರ ಇದಕ್ಕೆ ಒಂದು ಕಪ್‌ನಷ್ಟು ಸಕ್ಕರೆ ಹಾಕಿ ಒಂದೆಳೆ ಜಿಗಿಟು ಬರೋವರೆಗೂ ಬೇಯಿಸಿಕೊಳ್ಳಬೇಕು. ಸಕ್ಕರೆ-ತುಪ್ಪದ ಮಿಶ್ರಣ ಒಂದೆಳೆ ಬರುತ್ತಿದ್ದಂತೆ ಇದಕ್ಕೆ ಮಾಡಿಕೊಂಡಿರುವ ಬೂಂದಿ ಹಾಗೂ ರುಬ್ಬಿಕೊಂಡಿರುವ ಬೂಂದಿ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡ ನಂತರ ಒಲೆ ಆಫ್ ಮಾಡಿ.
ಈಗ ಇದೇ ಮಿಶ್ರಣಕ್ಕೆ ಗೋಡಂಬಿ, ಬದಾಮಿ, ಒಣದ್ರಾಕ್ಷಿ ಹಾಗೂ ಪಚ್ಚ ಕರ್ಪೂರ ಸೇರಿಸಿಬೇಕು. ನಂತರ ಎರಡು ಟೀ ಸ್ಪೂನ್‌ನಷ್ಟು ತುಪ್ಪ ಸೇರಿಸಿ ಬಿಸಿಯಾಗಿರುವಾಗಲೇ ಉಂಡೆಗಳನ್ನು ಕಟ್ಟಿಕೊಳ್ಳಿ. ಉಂಡೆ ಕಟ್ಟುವಾಗ ಎರಡು ಕೈಗಳಿಗೆ ತುಪ್ಪ ಹಚ್ಚಿಕೊಂಡರೆ ಬೇಗ ಬೇಗ ಕಟ್ಟಿಕೊಳ್ಳಬಹುದು.