ಬ್ಯಾಚುಲರ್ ಫೇವರಿಟ್ ಬಾಯಲ್ಲಿ ನೀರೂರಿಸುವ ಎಗ್ ರೈಸ್ ರೆಸಿಪಿ
ಬ್ಯಾಚುಲರ್‌ಗಳ ಫೇವರಿಟ್ ರೈಸ್ ಐಟಂ ಯಾವುದು ಅಂತ ಕೇಳಿದರೆ ಬಹುತೇಕರು ಎಗ್ ರೈಸ್ ಎಂದು ಹೇಳುತ್ತಾರೆ. ಇಂದು ಎಗ್ ರೈಸ್ ಪ್ರತಿ ಊರಿನ ರಸ್ತೆಬದಿಯಲ್ಲಿ ಸಿಗುವ ಆಹಾರವಾಗಿದೆ,
ರಸ್ತೆ ಬದಿ ಅಥವಾ ಹೋಟೆಲ್‌ನಲ್ಲಿ ಸಿಗುವ ರುಚಿಯಾದ ಎಗ್ ರೈಸ್, ಮನೆಯಲ್ಲಿ ಮಾಡಿದ್ರೆ ಆ ಟೇಸ್ಟ್ ಬರಲ್ಲ ಎಂದು ಹೇಳುತ್ತಾರೆ. ಇಂದು ನಾವು ಹೇಳಿದ ರೀತಿಯಲ್ಲಿ ಎಗ್ ರೈಸ್ ಮಾಡಿದ್ರೆ ಮಕ್ಕಳು ಎರಡು ತುತ್ತು ಹೆಚ್ಚು ತಿನ್ನುತ್ತಾರೆ. ಹಾಗಾದ್ರೆ ಎಗ್‌ರೈಸ್ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
ಎಗ್ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಅನ್ನ: ಒಂದು ಕಪ್, ಮೊಟ್ಟೆ: ಎರಡು, ಚಿಕ್ಕ ಈರುಳ್ಳಿ ಒಂದು, ಬೆಳ್ಳುಳ್ಳಿ-ಶುಂಠಿ ಪೇಸ್ಟ್: ಒಂದು ಟೀ ಸ್ಪೂನ್, ಹಸಿಮೆಣಸಿನಕಾಯಿ: ಒಂದು, ಗರಂ ಮಸಾಲೆ: ಒಂದು ಟೀ ಸ್ಪೂನ್, ಜೀರಿಗೆ: 1/2 ಟೀ ಸ್ಪೂನ್, ಅರಿಶಿನ: ಚಿಟಿಕೆ, ಟೊಮೆಟೋ: ಒಂದು, ಅಚ್ಚ ಖಾರದ ಪುಡಿ: ಒಂದು ಟೀ ಸ್ಪೂನ್, ಎಣ್ಣೆ: ಮೂರು ಟೀ ಸ್ಪೂನ್, ಕೋತಂಬರಿ ಸೊಪ್ಪು, ಉಪ್ಪು: ರುಚಿಗೆ ತಕ್ಕಷ್ಟು (ಸೋಯಾ ಸಾಸ್, ಟೊಮೆಟೋ ಸಾಸ್ ಮತ್ತು ಚಿಲ್ಲಿ ಸಾಸ್ ನಿಮ್ಮ ಬಳಿಯಲ್ಲಿದ್ದರೆ ಒಂದೊಂದು ಟೀ ಸ್ಪೂನ್ ಬಳಸಬಹುದು.)
ಎಗ್ ರೈಸ್ ಮಾಡುವ ವಿಧಾನ
ಮೊದಲಿಗೆ ಈರುಳ್ಳಿ, ಟೊಮೆಟೋ, ಹಸಿಮೆಣಸಿನಕಾಯಿ ಹಾಗೂ ಕೋತಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಂತರ ಒಲೆ ಆನ್ ಮಾಡಿಕೊಂಡು ದೊಡ್ಡದಾದ ಬಾಣಲೆ ಇರಿಸಿಕೊಳ್ಳಿ. ಈಗ ಬಾಣಲೆಗೆ ಅಡುಗೆಎಣ್ಣೆ ಹಾಕಿಕೊಳ್ಳಬೇಕು. ಆನಂತರ ಎಣ್ಣೆ ಬಿಸಿಯಾಗ್ತಿದ್ದಂತೆ ಜೀರಿಗೆ ಹಾಕಿಕೊಳ್ಳಿ. ಎಗ್‌ರೈಸ್ ಆಗೋವರೆಗೂ ಒಲೆ ಕಡಿಮೆ ಉರಿಯಲ್ಲಿರುವಂತೆ ನೋಡಿಕೊಳ್ಳಬೇಕು.
ಜೀರಿಗೆ ಬಳಿಕ ಕತ್ತರಿಸಿದ ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಚೆನ್ನಾಗಿ ಬಾಡಿಸಿಕೊಳ್ಳಿ. ತದನಂತರ ಟೊಮೆಟೋ ಸೇರಿಸಿ ಅದು ಸಾಫ್ಟ್ ಆಗೋವರೆಗೂ ಬೇಯಸಿಕೊಳ್ಳಿ. ನಂತರ ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಹಸಿ ಮೆಣಸಿನಕಾಯಿ, ಅರಿಶಿನ, ಗರಂ ಮಸಾಲೆ, ಅಚ್ಚ ಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. (ಇದಾದ ನಂತರವೇ ಸೋಯಾ, ಟೊಮೆಟೋ ಮತ್ತು ಚಿಲ್ಲಿ ಸಾಸ್ ಸೇರಿಸಿಕೊಳ್ಳಬೇಕು. ಇಲ್ಲವಾದ್ರೆ ಈ ಸ್ಟೆಪ್ ಸ್ಕಿಪ್ ಮಾಡಬಹುದು)
ಈಗ ಬಾಣಲೆಗೆ ಎರಡ ಮೊಟ್ಟೆ ಒಡೆದು ಹಾಕಿ ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿಕೊಳ್ಳಿ. ಎರಡು ನಿಮಿಷದ ನಂತರ ನಿಧಾನವಾಗಿ ಮೊಟ್ಟೆಯನ್ನು ನಿಧಾನವಾಗಿ ಮಸಾಲೆ ಜೊತೆ ಮಿಕ್ಸ್ ಮಾಡಿಕೊಳ್ಳಬೇಕು. ಇದೇ ಸಮಯದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬೇಕು. ಕೊನೆಯದಾಗಿ ರೈಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಎರಡು ನಿಮಿಷ ಬಿಸಿ ಮಾಡಿಕೊಳ್ಳಬೇಕು. ಕೊನೆಯದಾಗಿ ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಎಗ್‌ರೈಸ್ ಸವಿಯಲು ಸಿದ್ಧವಾಗುತ್ತದೆ.