15 ನಿಮಿಷದಲ್ಲಿ ತಯಾರಾಗುವ ಸಾಂಬಾರ್ ಪೌಡರ್ 6 ತಿಂಗಳಿಟ್ಟರೂ ಏನೂ ಆಗಲ್ಲ
ದಕ್ಷಿಣ ಭಾರತದಲ್ಲಿ ಊಟಗಳಲ್ಲಿ ಸಾಂಬಾರ್ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ತರಕಾರಿ ಅಥವಾ ಬೇಳೆ ಸಾಂಬಾರ್ ಮಾಡಿದ್ರೂ ಅದಕ್ಕೆ ಮಸಾಲೆ ಪೌಡರ್ ಬಳಸಿದ್ರೆ ಅದರ ರುಚಿ ಹೆಚ್ಚಾಗುತ್ತದೆ.
ಇಂದು ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಸಾಂಬರ್ ಪುಡಿ ಲಭ್ಯವಾಗುತ್ತದೆ. ಈ ಸಾಂಬಾರ್ ಪುಡಿಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಈ ರೀತಿ ಮಾಡುವ ಸಾಂಬಾರ್ ಪುಡಿ ತಿಂಗಳುಗಟ್ಟಲೇ ಇಟ್ರೂ ಹಾಳಾಗಲ್ಲ. ಈ ಸಾಂಬಾರ್ ಪುಡಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
ಸಾಂಬಾರ್ ಪುಡಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಕಡಲೆಬೇಳೆ: 1 1/2 ಟೀ ಸ್ಪೂನ್, ಉದ್ದಿನ ಬೇಳೆ: 1 ಟೀ ಸ್ಪೂನ್, ತೊಗರಿ ಬೇಳೆ: 1 ಟೀ ಸ್ಪೂನ್, ಒಣಮೆಣಸಿನಕಾಯಿ: 10, ಧನಿಯಾ ಬೀಜ: 1/4 ಟೀ ಸ್ಪೂನ್, ಮೆಥಿ ಬೀಜ: 3/4 ಟೀ ಸ್ಪೂನ್, ಕರೀಬೇವು ಎಲೆ: 5 ರಿಂದ 10, ಜೀರಿಗೆ: 2 ಟೀ ಸ್ಪೂನ್, ಅರಿಶಿನ ಪುಡಿ: 1/4 ಟೀ ಸ್ಪೂನ್ ಮತ್ತು ಇಂಗು: 1/4 ಟೀ ಸ್ಪೂನ್.
ಸಾಂಬಾರ್ ಪುಡಿ ಮಾಡುವ ವಿಧಾನ
ಮೊದಲಿಗೆ ಒಲೆ ಮೇಲೆ ಪ್ಯಾನ್ ಇರಿಸಿಕೊಳ್ಳಿ. ಕಡಿಮೆ ಉರಿಯಲ್ಲಿಯೇ ಎಲ್ಲಾ ಮಸಾಲೆಗಳನ್ನು ಸರಿಯಾಗಿ ಫ್ರೈ ಮಾಡಿಕೊಳ್ಳಬೇಕು. ಪ್ಯಾನ್ ಬಿಸಿಯಾದ ಮೇಲೆ ಕಡಲೆಬೇಳೆ, ಉದ್ದಿನ ಬೇಳೆ ಮತ್ತು ತೊಗರಿ ಬೇಳೆ ಹಾಕಿ ಹುರಿದುಕೊಂಡು ಪಾತ್ರೆಯೊಂದಕ್ಕೆ ಹಾಕಿಕೊಳ್ಳಿ.
ಈಗ ಇದೇ ಪಾತ್ರೆಗೆ 10 ಮೆಣಸಿನಕಾಯಿಗಳನ್ನು ಪ್ಯಾನ್‌ಗೆ ಹಾಕಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಕರಿಬೇವು ಎಲೆಗಳನ್ನು ಸೇರಿಸಿ ಕ್ರಂಚಿಯಾಗಿವರೆಗೂ ಫ್ರೈ ಮಾಡಿಕೊಳ್ಳಬೇಕು. ಕೊನೆಗೆ ಜೀರಿಗೆ ಸಹ ಸೇರಿಸಿ ಹುರಿದುಕೊಳ್ಳಬೇಕು. ನಂತರ ಮೂರು ಪದಾರ್ಥಗಳನ್ನು ಇತರೆ ಮಸಾಲೆ ಪಾತ್ರೆಗೆ ಸೇರಿಸಿ ಎಲ್ಲವನ್ನೂ ತೆಳುವಾಗಿ ಹರಡಿಕೊಳ್ಳಬೇಕು.
ಎಲ್ಲಾ ಮಸಾಲೆ ಸಂಪೂರ್ಣ ತಣ್ಣಗಾದ ನಂತರವೇ ರುಬ್ಬಿಕೊಳ್ಳಬೇಕು. ಬಿಸಿಯಾಗಿದ್ದಾಗಲೇ ರುಬ್ಬಿದರೆ ಸಾಂಬಾರ್ ಪೌಡರ್ ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ. ಎಲ್ಲಾ ಮಸಾಲೆ ಪದಾರ್ಥ ರುಬ್ಬಿಕೊಳ್ಳುವಾಗ ಅರಿಶಿನ ಮತ್ತು ಇಂಗು ಸೇರಿಸಿಕೊಳ್ಳಬೇಕು. ನಂತರ ರುಬ್ಬಿದ ಪುಡಿಯನ್ನು ಗಾಳಿಯಾಡದಂತೆ ಡಬ್ಬದಲ್ಲಿ ತುಂಬಿಸಿಟ್ಟುಕೊಂಡರೆ ಸಾಂಬಾರ್ ಪುಡಿ ಸಿದ್ಧವಾಗುತ್ತದೆ.
ನಿಮಗೆ ತುಂಬಾ ಸಾಂಬಾರ್ ಪುಡಿ ಬೇಕಾದ್ರೆ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಗಾಳಿಯಾಡದ ಡಬ್ಬ ಅಥವಾ ಫ್ರಿಡ್ಜ್‌ನಲ್ಲಿ ಸಂಗ್ರಹಣೆ ಮಾಡಿದ್ರೆ ಆರು ತಿಂಗಳವರೆಗೂ ಏನೂ ಆಗಲ್ಲ.